'ಹೊರಗುತ್ತಿಗೆ ನೇಮಕಾತಿ’ಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಹುದ್ದೆ ಮೀಸಲು: ರಾಜ್ಯ ಸರಕಾರದ ಸುತ್ತೋಲೆ

Update: 2022-05-20 14:54 GMT

ಬೆಂಗಳೂರು, ಮೇ 20: ರಾಜ್ಯ ಸರಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳಲ್ಲಿ ಹಾಗೂ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಸರಕಾರದ ಎಲ್ಲ ಇಲಾಖೆಗಳಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಮೂಲಕ ಸೂಚನೆ ನೀಡಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್, ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಪಡೆಯುವ ಟೆಂಡರ್ ಪ್ರಕಟನೆಯಲ್ಲಿ ಮತ್ತು ಹೊರಗುತ್ತಿಗೆ ಏಜೆನ್ಸಿಗಳೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ ಈ ಅಂಶವನ್ನು ಸೇರಿಸಲು ಸಂಬಂಧಪಟ್ಟ ಟೆಂಡರ್ ಆಹ್ವಾನಿಸುವ ಪ್ರಾಧಿಕಾರಗಳು ಕ್ರಮವಹಿಸುವಂತೆ ಅವರು ತಿಳಿಸಿದ್ದಾರೆ.

ಈ ಸೂಚನೆಗಳನ್ನು ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಸರಕಾರಿ ವಲಯದ ಅಂಗ ಸಂಸ್ಥೆಗಳು ಕೂಡ ಪಾಲಿಸಬೇಕು. ಈ ಸಂಬಂಧ ಸರಕಾರ ಎಲ್ಲ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಇಲಾಖೆಗಳು ಮತ್ತು ಸರಕಾರದ ಅಂಗ ಸಂಸ್ಥೆಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು. ಈ ಸೂಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಾವುದೆ ತೊಂದರೆಗಳು ಉದ್ಭವಿಸಿದಲ್ಲಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳು ಅವುಗಳನ್ನು ಪರಿಹರಿಸುವಂತೆ ರವಿ ಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News