"ಡೀಸೆಲ್, ಪೆಟ್ರೋಲ್ ಮೇಲಿನ ಎಕ್ಸೈಸ್ ದರವನ್ನು ನೋಟು ನಿಷೇಧದ ಮುಂಚಿನ ದರಗಳಿಗೆ ಇಳಿಸಬೇಕು"

Update: 2022-05-22 17:51 GMT

ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗಿರುವ ಸಂತೋಷ ಹೆಚ್ಚು ದಿನ ಉಳಿಯಬಲ್ಲದೇ? ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದೇ ಸಮನೆ ಏರುತ್ತಿರುವಾಗ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರದಂತೆ ತಡೆಯುವ ಉದ್ದೇಶವಾದರೂ ಮೋದಿ ಸರ್ಕಾರಕ್ಕಿದೆಯೇ ? ಮಾರುಕಟ್ಟೆಯ ಏರುಪೇರು ಗಳು ಏನೇ ಇದ್ದರೂ ಪೆಟ್ರೋಲ್-ಡೀಸೆಲ್- ಗ್ಯಾಸ್ ನಂತ ಅತ್ಯಗತ್ಯ ಸರಕುಗಳು ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಸ್ಥಿರವಾಗುಳಿಯದೆ ಬೆಲೆ ಏರಿಕೆ ನಿಲ್ಲುವುದೇ?"

ಆತ್ಮೀಯರೇ ,

ಪೆಟ್ರೋಲ್, ಡೀಸೆಲ್ ಅನ್ನೂ ಒಳಗೊಂಡಂತೆ ಜನಸಾಮಾನ್ಯರ ಅಗತ್ಯ ವಸ್ತುಗಳ ಮೇಲೆ ಮೋದಿ ಸರ್ಕಾರ ಹೇರಿರುವ ಅಗಾಧ ತೆರಿಗೆಗಳನ್ನು ಕಡಿಮೆ ಮಾಡದೆ ಕೇವಲ RBI ಬಡ್ಡಿದರ ಏರಿಕೆಯಿಂದ ಹಣದುಬ್ಬರ ತಡೆಯಲಾಗದು ಎಂದು ದೇಶದ ಜನರು, ಪರಿಣಿತರು (RBI ಕೂಡಾ ) ಒಂದೇ ಸಮನೆ ಮೂತಿ ತಿವಿದು ಹೇಳಿದ ಮೇಲೆ ಮೋದಿ ಸರ್ಕಾರ ಅರೆಮನಸ್ಸಿನಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು 9 ರೂ. ಹಾಗೂ ಡೀಸೆಲ್ ತೆರಿಗೆಯನ್ನು 7 ರೂ ಅಷ್ಟು ಕಡಿಮೆ ಮಾಡಿದೆ. 

ಇಷ್ಟವಿಲ್ಲದಿದ್ದರೂ ಈ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ಬರಲಿರುವ ದಿನಗಳಲ್ಲಿ ನಾವು ಆಮದು ಮಾಡಿಕೊಳ್ಳುವ ಕಚ್ಚಾ ತೈಲ,ಖಾದ್ಯ ತೈಲ, ಗೊಬ್ಬರ , ಔಷಧಿ ಎಲ್ಲದರ ಮೂಲ ಬೆಲೆಗಳೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೇ ಏರಲಿವೆ. ಜೊತೆಗೆ ಡಾಲರ್ ಎದಿರು ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ಈ ಆಮದುಗಳು ಇನ್ನಷ್ಟು ತುಟ್ಟಿಯಾಗಲಿವೆ. ಇದು ಬೆಲೆ ಏರಿಕೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ಇದು ಜನರ ಸಂಕಷ್ಟಗಳನ್ನು ಹೆಚ್ಚಿಸುತ್ತಾ ರಾಜಕೀಯ ಸ್ವರೂಪಗಳನ್ನೂ ತೆಗೆದುಕೊಳ್ಳುವ ಸಾಧ್ಯತೆ ಇದೆ. 

ಈ ಅಸ್ಥಿರತೆಯನ್ನು ಮನಗಂಡು ವಿದೇಶಿ ಹಣಹೂಡಿಕೆದಾರರು ಸ್ಟಾಕ್ ಮಾರ್ಕೆಟ್ ಇಂದ ತಮ್ಮ ಡಾಲರ್ ಹೂಡಿಕೆಯನ್ನು ದೊಡ್ಡ ಮಟ್ಟದಲ್ಲಿ ಹಿಂತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ರೂಪಾಯಿ ಬೆಲೆ ಮತ್ತಷ್ಟು ಕುಸಿದು ಆಮದು ತುಟ್ಟಿಯಾಗುತ್ತಾ ಮತ್ತಷ್ಟು ಹಣದುಬ್ಬರವಾಗುವ ವಿಷವೃತ್ತದಲ್ಲಿ ಭಾರತ ಸಿಲುಕಿಕೊಂಡಿದೆ. 

ವಾಸ್ತವವಾಗಿ ಈ ವಿಷವೃತ್ತದಿಂದ ಭಾರತ ಹೊರಬರಲು ಮೋದಿ ಸರ್ಕಾರ ತಡವಾಗಿ ತೆಗೆದುಕೊಂಡಿರುವ ಈ ಅರೆಬರೆ ಕ್ರಮಗಳು  ಏನೇನೂ ಸಾಲುವುದಿಲ್ಲ. ನಿನ್ನೆಯ ತೆರಿಗೆ ಕಡಿತದ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳು 2014ಕ್ಕೆ ಹೋಲಿಸಿದಲ್ಲಿ ಈಗಲೂ 10ರೂ. ಜಾಸ್ತಿ. 2019ಕ್ಕೆ ಹೋಲಿಸಿದರೂ ಜಾಸ್ತಿ. 

ಅಷ್ಟು ಮಾತ್ರವಲ್ಲ, ಮೋದಿ ಸರ್ಕಾರ ಇಳಿಸಿರುವುದು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿರುವ ಕೇಂದ್ರದ ಎಕ್ಸೈಸ್ ತೆರಿಗೆಯನ್ನೇ ಹೊರತು ಸಂಪೂರ್ಣವಾಗಿ ಕೇಂದ್ರದ ಪಾಲಾಗುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಯನ್ನಲ್ಲ. 

ಮೋದಿ ಸರ್ಕಾರದ ಮತಿಗೆಟ್ಟ ನೋಟು ನಿಷೇಧ, ಜಿಎಸ್ಟಿ , ಲಾಕ್ ಡೌನ್ ನೀತಿಗಳಿಂದ ಒಂದಾದಾರ ಮೇಲೊಂದು ಹೊಡೆತಕ್ಕೆ ಗುರಿಯಾಗಿ ಆದಾಯ ಮೂಲಗಳನ್ನೇ ಕಳೆದುಕೊಂಡಿರುವ ಭಾರತದ ಸಾಮಾನ್ಯ ಜನರು ಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇದರಿಂದಾಗಿ ಆರ್ಥಿಕತೆಯಲ್ಲಿ ಬೇಡಿಕೆ ಕುಸಿದುಬಿದ್ದಿದೆ. ಹೀಗಾಗಿ ಒಟ್ಟಾರೆ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿಲ್ಲ.

ಇದರಿಂದಾಗಿ ಭಾರತವು Stagflation (ಆರ್ಥಿಕತೆಯಲ್ಲಿ ಯಾವ ಅಭಿವೃದ್ಧಿಯೂ ಆಗದೆ ಕೇವಲ ಬೆಲೆಗಳು ಮಾತ್ರ ಹೆಚ್ಚಾಗುವ ) ಮತ್ತು ಅದರಿಂದ economic Crisis ಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಆದ್ದರಿಂದ ಮೋದಿ ಸರ್ಕಾರ ನಿಜಕ್ಕೂ ಆರ್ಥಿಕತೆಯಲ್ಲಿ ಚೇತರಿಕೆ ಮೂಡಿಸಬೇಕೆಂದಿದ್ದರೆ ಇಂಥಾ ಅರೆಬರೆ ಕ್ರಮಗಳ ಸೋಗಲಾಡಿತನವನ್ನು ಮಾಡದೆ ಕಚ್ಚಾತೈಲ, ಖಾದ್ಯ ತೈಲ ಹಾಗೂ ಗೊಬ್ಬರಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಷ್ಟೇ ಹೆಚ್ಚಾದರೂ ಭಾರತದಲ್ಲಿ ಜನರಿಗೆಟುಕುವಂಥ ಸ್ಥಿರ ದರವನ್ನು ಖಾತರಿ ಪಡಿಸುವ " ಬೆಲೆ ಸ್ಥಿರ" ಕ್ರಮಗಳನ್ನು ಕೈಗೊಳ್ಳಬೇಕು.  ಅದರ ಮೊದಲ ಕ್ರಮವಾಗಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಎಕ್ಸೈಸ್ ದರವನ್ನು ಜನರ ಮೇಲೆ ಪ್ರಹಾರಗಳು ಪ್ರಾರಂಭವಾದ 2016ರ ನೋಟು ನಿಷೇಧದ ಮುಂಚಿನ ದರಗಳಿಗೆ ಇಳಿಸಬೇಕು. 

ಭಾರತದ ಜನರ ಜೇಬನ್ನು ಆಮದು ಮಾರುಕಟ್ಟೆಯ ಏರಿಳಿತಗಳಿಂದ ರಕ್ಷಿಸಬೇಕು. ಪೆಟ್ರೋಲ್ ತೆರಿಗೆ ಇಳಿತದಿಂದ " ಭಾರತದ ತಿಜೋರಿಗೆ ಎಷ್ಟು ನಷ್ಟ" ಆಗುತ್ತಿದೆ ಎಂಬ ಜನವಿರೋಧಿ ಆರ್ಥಿಕ ತಿಳವಳಿಕೆಯನ್ನು ಕೈಬಿಡಬೇಕು. ಏಕೆಂದರೆ ಕಚ್ಚಾ ತೈಲ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವತ್ತಿನ ಅರ್ಧದಷ್ಟಿದ್ದಾಗಲೂ ಮೋದಿ ಸರ್ಕಾರ ಅದರ ಲಾಭವನ್ನು ಜನರಿಗೆ ವರ್ಗಾಯಿಸದೆ, ಕಾರಣವೇ ಇಲ್ಲದೆ ತೆರಿಗೆ ಹಾಗೂ ಸೆಸ್ಗಳನ್ನೂ ದುಪ್ಪಟು ಹೆಚ್ಚಿಸಿ ಕಳೆದ 8 ವರ್ಷಗಳಲ್ಲಿ ಜನರ ಜೋಬಿನಿಂದ 17 ಲಕ್ಷ ಕೋಟಿ ರೂ. ಸುಲಿದಿದೆ.

 ಆಗ ಮೋದಿ ಸರ್ಕಾರವಾಗಲೀ, ಅಥವಾ ಅವರ ವಿದೂಷಕ ಆರ್ಥಿಕ ಪರಿಣಿತರೇ ಆಗಲೇ ತೆರಿಗೆ ಹೆಚ್ಚಳದಿಂದ " ಜನರ ಜೋಬಿಗೆ ಎಷ್ಟು ನಷ್ಟ" ಎಂದು ಲೆಕ್ಕ ಹಾಕಲಿಲ್ಲ. ಅದರ ಪರಿಣಾಮದಿಂದಲೇ ಇಂದು ಸಾರ್ವತ್ರಿಕ ಬೇಡಿಕೆ ನಷ್ಟದಿಂದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ. ಮಾರುಕಟ್ಟೆ ನಿರ್ಧಾರಿತ ಬೆಲೆ ನಿಗದಿ ನೀತಿ ಯನ್ನು ಮೋದಿ ಸರ್ಕಾರವೂ ಅನುಸರಿಸುತ್ತಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್, ಗ್ಯಾಸ್ ಮತ್ತು ಗೊಬ್ಬರದ ಬೆಲೆ ಇಳಿಕೆಯ ಹರುಷ ಹೆಚ್ಚು ದಿನಗಳು ಇರುವುದಿಲ್ಲ. 

ಏಕೆಂದರೆ ಮೇಲೆ ತಿಳಿಸಿದ ಕಾರಣಗಳಿಂದ ಮತ್ತೆ ಮೂಲಬೆಲೆಗಳು ಏರಿ ತೆರಿಗೆ ಕಡಿತದ ಲಾಭವನ್ನು ಇಲ್ಲವಾಗಿಸಲಿವೆ. ಕೆಲವೇ ವಾರಗಳಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್ ಹಾಗಿ ಇನ್ನಿತರ ಆಮದು ಮಾಡಿಕೊಳ್ಳುವ ಸರಕುಗಳು ಇವತ್ತಿನ ಬೆಲೆಗಿಂತ ತುಟ್ಟಿಯಾಗಲಿವೆ. 

ಹೀಗಾಗಿ ಮಾರುಕಟ್ಟೆ ಏರಿಳಿವುಗಳಿಂದ ಹಾಗೂ ಅದರಿಂದ ಸಂಭವಿಸುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಮೋದಿ ಸರ್ಕಾರ:

ಈಗಿರುವ ಮಾರುಕಟ್ಟೆ ನಿರ್ಧಾರಿತ ಬೆಲೆ ನೀತಿಗಳನ್ನು ರದ್ದುಪಡಿಸಿ ಕೈಗೆಟುಕುವ ಸ್ಥಿರ ಬೆಲೆ ನೀತಿಯನ್ನು ಜಾರಿ ಮಾಡಬೇಕು. 1991ಕ್ಕೆ ಮುಂಚೆ ಭಾರತದಲ್ಲೂ, ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಜನಾಧಾರಿತ ಬೆಲೆ ಸ್ಥಿರ ನೀತಿಯನ್ನು  ಅನುಸರಿಸುತ್ತಿದ್ದರು. ಮಾರುಕಟ್ಟೆ ನೀತಿಯನ್ನಲ್ಲ. 

ಪೆಟ್ರೋಲ್, ಡೀಸೆಲ್ , ಖಾದ್ಯ ತೈಲ, ಗೊಬ್ಬರ, ಗ್ಯಾಸ್ ಇತ್ಯಾದಿಗಳ ಮೇಲಿನ ತೆರಿಗೆಯನ್ನು ಸ್ಥಿರಗೊಳಿಸಬೇಕು. ಮೂಲ ಆಮದು ದರದ ಶೇ. 5-10ಕ್ಕಿಂತ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು 

ಅದರಿಂದ ಉಂಟಾಗುವ ತೆರಿಗೆ ಆದಾಯ ಖೋತಾವನ್ನು ಪ್ರತ್ಯಕ್ಷ ತೆರಿಗೆಗಳಾದ ಸಂಪತ್ತು ತೆರಿಗೆ, ಕಂಪನಿಗಳ ಮಾಲೀಕತ್ವ ವರ್ಗಾವಣೆಯ ಮೇಲೆ ಉತ್ತಾರಾಧಿಕಾರತ್ವ ತೆರಿಗೆ, ಕಾರ್ಪೊರೇಟ್ ಲಾಭದ ತೆರಿಗೆ. ಇತ್ಯಾದಿಗಳನ್ನು ಹೆಚ್ಚಿಸುವ ಮೂಲಕ ತುಂಬಿಕೊಳ್ಳಬೇಕು. 

ದೇಶದ ತೆರಿಗೆ ನೀತಿಯಲ್ಲಿ ಈ ಬಗೆಯ ಮೂಲಭೂತ ಹಾಗೂ ಪ್ರಗತಿಪರ ಬದಲಾವಣೆಯನ್ನು ಮಾಡಿಕೊಂಡು ಕುಬೇರರ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಬೇಕು. 

ಈ ಕ್ರಮಗಳಿಗೆ ಮುಂದಾಗದೆ ಕೇವಲ ಅರೆಬರೆ ತೆರಿಗೆ ಕಡಿತ ಮಾಡಿ ಜನಪರತೆಯೆಂದು ಕೊಚ್ಚಿಕೊಳ್ಳುವುದು. ಸೋಗಲಾಡಿತನ ಮಾತ್ರವಲ್ಲ. ಜನದ್ರೋಹ ಹಾಗೂ ದೇಶದ್ರೋಹ ಕೂಡ ಅಲ್ಲವೇ?

ಜಸ್ಟ್ ಆಸ್ಕಿಂಗ್ 

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News