ಎಸೆಸೆಲ್ಸಿ ನಂತರ ಮುಂದೇನು?: ಖಾಸಗಿ ಶಾಲೆಗಳ ಅಬ್ಬರದ ಪ್ರಚಾರ; ವಾಣಿಜ್ಯ, ವಿಜ್ಞಾನ ವಿಭಾಗದತ್ತ ವಿದ್ಯಾರ್ಥಿಗಳ ಚಿತ್ತ

Update: 2022-05-23 05:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಶಾಲೆಗಳು ಅಬ್ಬರದ ಪ್ರಚಾರವನ್ನು ಆರಂಭಿಸಿವೆ.

ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿ ಓದಲು ಆಸಕ್ತರಾಗಿದ್ದು, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಭವಿಷ್ಯದಲ್ಲಿ ಉದ್ಯೋಗದ ಅಭದ್ರತೆ ಇರುವ ಕಾರಣ ‘ಕಲಾ ವಿಭಾಗ'ವನ್ನು ತೊರೆಯುತ್ತಿದ್ದಾರೆ.

ಸರಕಾರಿ ಕಾಲೇಜುಗಳಲ್ಲಿ ಕಲಾ ವಿಭಾಗಕ್ಕೆ ಮಾತ್ರ ಅಧಿಕ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದು, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳನ್ನು ವರ್ಷದಿಂದ ವರ್ಷಕ್ಕೆ ಸರಕಾರಿ ಕಾಲೇಜುಗಳು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಖಾಸಗಿ ಕಾಲೇಜುಗಳು ಪಿಯುಸಿ ಪಠ್ಯಕ್ರಮದೊಂದಿಗೆ ಸಿಇಟಿ, ನೀಟ್ ಹಾಗೂ ಜೆಇಇ ಅಂತಹ ಇಂಜಿನಿಯರ್ ಹಾಗೂ ಮೆಡಿಕಲ್ ಕೋರ್ಸ್‍ಗಳಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುವುದಾಗಿ ಪ್ರಚಾರ ಮಾಡುತ್ತಿವೆ. ಹಾಗಾಗಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡುತ್ತಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿರುವ ಸರಕಾರಿ ಕಾಲೇಜುಗಳಲ್ಲಿ ಕಡಿಮೆ ಗುಣಮಟ್ಟದ ಬೋಧನೆ ಹಾಗೂ ಪ್ರಯೋಗಾಲದ ಕೊರತೆಯನ್ನು ಖಾಸಗಿ ಶಾಲೆಗಳು ಲಾಭ ಪಡೆದುಕೊಳ್ಳುತ್ತಿವೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಥಮ ಪಿಯುಸಿಯಲ್ಲಿ ಕಡಿಮೆ ಡೊನೆಷನ್ ರೂಪದಲ್ಲಿ ಹಣವನ್ನು ದ್ವಿತೀಯ ಪಿಯುಸಿಯಲ್ಲಿ ದುಪ್ಪಟ್ಟು ಹಣವನ್ನು ಪಡೆಯಲಿವೆ.

‘ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಇಟಿ, ಜೆಇಇ, ನೀಟ್ ಇತ್ಯಾದಿ ಹೆಸರಿನಲ್ಲಿ ಕಾನೂನುಬಾಹಿರವಾಗಿ ಹೆಚ್ಚಿನ ಶುಲ್ಕವನ್ನು ಪಡೆದು, ಇತರೆ ಸಂಘ-ಸಂಸ್ಥೆಗಳ, ಇತರೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಎಲೆಕ್ಟ್ರಾನಿಕ್ ಮಾಧ್ಯಮದ ಸಹಾಯದೊಂದಿಗೆ ಬೋಧನೆ ಮಾಡುವುದು ಕಂಡುಬಂದರೆ ಅಂತಹ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು. ಜೊತೆಗೆ ಪ್ರಾಂಶುಪಾಲರ ಹಾಗೂ ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. 

ಸಮವಸ್ತ್ರ ಕಡ್ಡಾಯ: ‘ಹಿಜಾಬ್-ಕೇಶರಿ ಶಾಲು ವಿವಾದವನ್ನು ಗಂಬೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯು, ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಮಂಡಳಿಯು ನಿಗಧಿಪಡಿಸಿದ ಸಮವಸ್ತ್ರಗಳನ್ನು ಧರಿಸಬೇಕು. ಮಂಡಳಿಯು ನಿಗದಿಪಡಿಸದಿದ್ದಲ್ಲಿ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡುವ ಹಾಗೂ ಸಾರ್ವಜನಿಕರಿಗೆ ಭಂಗ ತರುವ ಉಡುಪುಗಳನ್ನು ಧರಿಸಬೇಕು. 

ಪ್ರಾಚಾರ್ಯರೇ ನೇರ ಹೊಣೆ: ಶಿಕ್ಷಣ ಇಲಾಖೆಯು ಪಿಯುಸಿ ತರಗತಿಗಳ ಪ್ರವೇಶ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದು, ಮಧ್ಯಂತರ ರಜೆ ಸೇರಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2022-23ನೆ ಸಾಲಿನ ಸಂಯೋಜನೆಯ ಪ್ರತಿ ವಿಭಾಗಕ್ಕೆ ನಿಗದಿತ ಗರಿಷ್ಟ ಪ್ರವೇಶ ಸಂಖ್ಯೆ 80ಕ್ಕೆ ನಿಗದಿ ಮಾಡಲಾಗಿದೆ. ಇದನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳ ದಾಖಲಾತಿಯನ್ನು ಅನುಮೋದಿಸಲಾಗುವುದಿಲ್ಲ. ಹಾಗೆಯೇ ಮೂರು ವರ್ಷಗಳಿಂದ ಶೂನ್ಯ ದಾಖಲಾತಿಯನ್ನು ಹೊಂದಿರುವ ಕಾಲೇಜು ಯಾವುದೇ ಕಾರಣಕ್ಕೂ ಈ ಬಾರಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು. ಒಂದುವೇಳೆ ದಾಖಲಾತಿ ಮಾಡಿಕೊಂಡಲ್ಲಿ ಮುಂದೆ ಸಂಭವಿಸುವ ಆಗುಹೋಗುಗಳಿಗೆ ಪ್ರಾಚಾರ್ಯರು ನೇರ ಹೊಣೆಗಾರರಾಗಲಿದ್ದಾರೆ.

ವಿಷಯ ಬದಲಾವಣೆಗೆ ಆ.10ರ ವರೆಗೆ ಅವಕಾಶ: ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಯು ವಿಷಯ ಅಥವಾ ಭಾಷೆಗಳ ಬದಲಾವಣೆಗೆ ಅ.10ರವರೆಗೆ ಅವಕಾಶ ನೀಡಲಾಗಿದೆ. ಬದಲಾವಣೆ ಬಯಸುವ ವಿಷಯಗಳಲ್ಲಿ ಕನಿಷ್ಠ ಶೇ.75ರಷ್ಟು ಹಾಜರಾತಿ ದೊರಕುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ವಿಷಯ ಬದಲಾವಣೆಯನ್ನು ಪ್ರಾಚಾರ್ಯರ ಹಂತದಲ್ಲಿ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಿಯು ನಿರ್ದೇಶನಾಲಯಕ್ಕೆ ಕಳುಹಿಸುವಂತಿಲ್ಲ.

ವಿದ್ಯಾರ್ಥಿಗಳ ಹಾಜರಾತಿ: ಹಾಜರಾತಿ ಕೊರತೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸೆ.16, ಡಿ.15 ಹಾಗೂ ಜ.27 ರಂದು ಪೋಷಕರ ಸಭೆಯನ್ನು ಕರೆದು ಖುದ್ದಾಗಿ ತಿಳಿಸಿ ಅವರಿಂದ ದೃಢೀಕರಣವನ್ನು ಪಡೆಯಬೇಕು. ಹಾಗೆಯೇ ಜ.27ರ ನಂತರ ನೋದಾಯಿತ ಅಂಚೆ ಮೂಲಕ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿ ಪೋಷಕರಿಗೆ ತಮ್ಮ ಮಕ್ಕಳ ಕಳುಹಿಸಲಾಗುವುದು. ಜನವರಿ ಮೊದಲ ವಾರದಲ್ಲಿ ಹಾಜರಾತಿ ಕೊರತೆ ಬಗ್ಗೆ ಇಲಾಖೆಗೆ ಕಳುಹಿಸಬೇಕು.

ವೃತ್ತಿಪರ ಶಿಕ್ಷಣ: ಎಸೆಸೆಲ್ಸಿ ಬಳಿಕ ಪಿಯುಸಿ ಹೊರತುಪಡಿಸಿ ಐಟಿಐ ಹಾಗೂ ಪಾಲಿಟೆಕ್ನಿಕ್(ಡಿಪ್ಲೊಮಾ) ನಂತಹ ಕೋರ್ಸ್‍ಗಳಿಗೆ ದಾಖಲಾಗಬಹುದು. ಈ ಕೋರ್ಸ್‍ಗಳನ್ನು ಓದಿದವರು ಮುಂದಿನ ದಿನಗಳಲ್ಲಿ ಇಂಜಿನಿಯರ್ ಕೋರ್ಸ್‍ಗಳಿಗೆ ಸೇರ್ಪಡೆ ಆಗಬಹುದು. ಎರಡು ವರ್ಷಗಳ ಐಟಿಐ ಕೋರ್ಸ್‍ನ್ನು ಮುಗಿಸಿದ ಬಳಿಕ ಎರಡನೆ ವರ್ಷದ ಡಿಪ್ಲೊಮೋ ಕೋರ್ಸ್‍ಗೆ ನೇರವಾಗಿ ಸೇರಬಹುದಾಗಿದೆ. ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್‍ಗಳನ್ನು ಓದಿದವರು ಡಿಪ್ಲೋಮಾ ಸಿಇಟಿಯನ್ನು ಬರೆದು, ಮೂರನೆಯ ವರ್ಷದ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ನೇರವಾಗಿ ಸೇರಬಹುದು. ಇಲ್ಲವೇ ಕೋರ್ಸ್‍ಗಳು ಮುಗಿದ ನಂತರ ನೇರವಾಗಿ ಕೆಲಸಕ್ಕೆ ಹೋಗಬಹುದು.

ಐಟಿಐ ಕಾಲೇಜುಗಳಲ್ಲಿ ಉತ್ತಮ ಬೋಧನೆ ಮತ್ತು ಸೌಲಭ್ಯಗಳಿದ್ದರೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಾಲೇಜುಗಳು ಲಭ್ಯವಿಲ್ಲ. ಅಲ್ಲದೇ ಇರುವ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿ, ಕೌನ್ಸಿಲಿಂಗ್‍ಗಾಗಿ ಆಯ್ಕೆ ಪಟ್ಟಿಗಳಿಗಾಗಿ ಅಭ್ಯರ್ಥಿಗಳು ಕಾಯಬೇಕಾಗಿರುತ್ತದೆ. ಈ ಕಾರಣಗಳಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಇನ್ನು ರಾಜ್ಯದಲ್ಲಿ 89 ಸರಕಾರಿ ಡಿಪ್ಲೋಮೋ ಕಾಲೇಜುಗಳಿದ್ದು, ಸರಕಾರ ಸೌಲಭ್ಯಗಳಿಂದ ಪ್ರವೇಶಗಳು ಹೆಚ್ಚಾಗುತ್ತಿವೆ.

-------------------------------------------------------

‘ಎಸೆಸೆಲ್ಸಿಯಲ್ಲಿ ಶ್ರಮವಹಿಸಿ ಉತ್ತಮ ಅಂಕಗಳನ್ನು ಗಳಿಸಿದ್ದೇನೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ದಾಖಲಾಗುತ್ತೇನೆ. ಸರಕಾರಿ ಆಗಲೀ ಖಾಸಗಿ ಕಾಲೇಜು ಆಗಲಿ ವಿಜ್ಞಾನ ವಿಭಾಗದಲ್ಲಿಯೇ ಓದುತ್ತೇನೆ. ಎಸೆಸೆಲ್ಸಿಯಂತೆ ಪಿಯುಸಿಯಲ್ಲಿಯೂ ಶ್ರದ್ಧೆಯಿಂದ ಓದುತ್ತೇನೆ'

-ಅಮಿತ್ ಮಾದರ, ವಿಜಯಪುರ'

--------------------------------------------------------
‘ಮೊದಲು ಗ್ರಾಮೀಣ ಪ್ರದೇಶಗಳಲ್ಲಿರುವ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇರುತ್ತಿತ್ತು. ಹಾಗಾಗಿ ದಾಖಲಾತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊದಲು ಅರ್ಜಿ ಸಲ್ಲಿಸುವವರಿಗೆ ಮೊದಲ ಪ್ರವೇಶವನ್ನು ನೀಡಲಾಗುತ್ತಿದೆ. ಮೊದಲಿನಿಂದಲೂ ಅಧಿಕ ದಾಖಲಾತಿಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಆನ್‍ಲೈನ್ ಅರ್ಜಿ ಆಹ್ವಾನಿಸಿ, ಮೆರಿಟ್ ಆಧಾರದಲ್ಲಿ ಪ್ರವೇಶವನ್ನು ನೀಡಲಾಗುತ್ತಿದೆ. ಸರಕಾರವು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಈ ಹೊಸ ತಂತ್ರವನ್ನು ಅನುಸರಿಸುತ್ತಿರುವುದರಿಂದ ದಾಖಲಾತಿ ಪ್ರಮಾಣ ಹೆಚ್ಚಾಗಿದೆ'

-ಎಂ.ಪ್ರಶಾಂತ ಅಧ್ಯಕ್ಷ, ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘ

Writer - -ಅನಿಲ್ ಕುಮಾರ್

contributor

Editor - -ಅನಿಲ್ ಕುಮಾರ್

contributor

Similar News