ಹುಬ್ಬಳ್ಳಿಯಲ್ಲಿ ಭೀಕರ ಸರಣಿ ಅಪಘಾತ: 8 ಮಂದಿ ಮೃತ್ಯು, ಹಲವರ ಸ್ಥಿತಿ ಗಂಭೀರ

Update: 2022-05-24 15:37 GMT

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಪ್ರಯಾಣಿಕ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.

ಹುಬ್ಬಳ್ಳಿಯ  ತಾರಿಹಾಳ ಬೈಪಾಸ್​ನಲ್ಲಿ ಸೋಮವಾರ ರಾತ್ರಿ ಸುಮಾರು 1 ಗಂಟೆ ವೇಳೆಗೆ ಅಪಘಾತ ಸಂಭವಿಸಿದ್ದು, 8 ಮಂದಿ ಸಾವಿಗೀಡದಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಢಿಕ್ಕಿ ಹೊಡೆದಿದೆ. ಅದರ ಹಿಂದೆ ಬಂದ ಲಾರಿ ಬಸ್‌ಗೆ ಢಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ನ್ಯಾಷನಲ್ ಟ್ರಾವೆಲ್ಸ್ ಟೂರಿಸ್ಟ್ ಬಸ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಪೈಕಿ ನಾಲ್ವರನ್ನು ಬಸ್ ಚಾಲಕರಾದ ಅತಾವುಲ್ಲಾ ಹಾಗೂ ನಾಗರಾಜ, ಚಿಕ್ಕೋಡಿಯ ಬಾಬುಸಾಹೇಬ್ (55), ಮೈಸೂರು ಮೂಲದ ಮಹ್ಮದ್ ದಯ್ಯಾನ್ (17) ಎಂದು ಗುರುತಿಸಲಾಗಿದೆ. ಇನ್ನುಳಿದವರ ಹೆಸರು ಗೊತ್ತಾಗಬೇಕಿದೆ.

ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಲಾಬೂರಾವ್ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಪರಿಹಾರ ಘೋಷಣೆ

ಹುಬ್ಬಳ್ಳಿಯಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಲಾಗಿದೆ.

ಪ್ರಧಾನಿ ಸಂತಾಪ

ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹಲವರು ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿ. ಗಾಯಗೊಂಡವರ ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ ಎಂದು ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News