ಮಂಡ್ಯ: ಪೋಷಕರು-ಶಿಕ್ಷಣ ಇಲಾಖೆ ಸಂಘರ್ಷದಲ್ಲಿ ಬಡವಾದ ಮಕ್ಕಳು!

Update: 2022-05-24 06:14 GMT

ಮಂಡ್ಯ, ಮೇ 24: ‘ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು’ ಗಾದೆಯಂತೆ ಮದ್ದೂರು ತಾಲೂಕು ಅಗರಲಿಂಗನದೊಡ್ಡಿ ಗ್ರಾಮಸ್ಥರು ಮತ್ತು ಶಿಕ್ಷಣ ಇಲಾಖೆ ಸಂಘರ್ಷದಲ್ಲಿ ಆ ಗ್ರಾಮದ ಶಾಲೆಯ ಮಕ್ಕಳು ಬಡವಾಗಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣಕ್ಕೆ ಎರಡು ವರ್ಷದ ಹಿಂದೆ ನೆಲಸಮವಾದ ಗ್ರಾಮದ ಶಾಲಾ ಕಟ್ಟಡಕ್ಕೆ ಪರ್ಯಾಯವಾಗಿ ಇದುವರೆಗೂ ಹೊಸ ಕಟ್ಟಡ ನಿರ್ಮಾಣವಾಗದೆ ಮನೆಯ ಜಗುಲಿ, ಟೆರೇಸ್ ಮೇಲೆ ಶಾಲೆ ನಡೆಸುವಂತಾಗಿದೆ.

ಗ್ರಾಮಸ್ಥರು ಪರ್ಯಾಯವಾಗಿ ಸುಸಜ್ಜಿತ ಶಾಲೆ ನಿರ್ಮಾಣಕ್ಕೆ ಪಟ್ಟುಹಿಡಿದು ಕುಳಿತಿದ್ದಾರೆ. ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೂ ಶಾಲೆ ನಿರ್ಮಾಣ ಆಗುತ್ತಿಲ್ಲ. ಹಾಗಾಗಿ  ರವಿವಾರ (ಮೇ 22) ಮಕ್ಕಳ ಜತೆ ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿದರು.

ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನವಾದ ಶಾಲೆ ಮತ್ತು ಉಳಿದ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 68 ಲಕ್ಷ ರೂ. ಪರಿಹಾರ ನೀಡಿದೆ. ಆದರೆ, ಸೂಕ್ತ ಸ್ಥಳ ದೊರಕದ ಹಿನ್ನೆಲೆಯಲ್ಲಿ ಪರ್ಯಾಯ ಶಾಲಾ ಕಟ್ಟಡ ನಿರ್ಮಾಣ ಮಾಡುವುದು ನೆನೆಗುದಿಗೆ ಬಿದ್ದಿದೆ.

ಹೆದ್ದಾರಿಗೆ ಸ್ವಾಧೀನವಾದ ಶಾಲೆಯ ಜಾಗದಲ್ಲಿ ಸ್ವಲ್ಪ ಜಾಗ ಉಳಿದಿದೆ. ಅಲ್ಲಿಯೇ ಹೊಸ ಶಾಲೆ ನಿರ್ಮಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ, ಆ ಚಿಕ್ಕ ಸ್ಥಳದಲ್ಲಿ, ಮಿಗಿಲಾಗಿ ಹೆದ್ದಾರಿ ಪಕ್ಕದಲ್ಲೇ ಹೊಸ ಶಾಲೆ ಬೇಡ. ಬೇರೆ ಜಾಗದಲ್ಲಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಸಾಕಷ್ಟು ಹಣವಿದ್ದರೂ ಬೇರೆ ಕಡೆ ಜಮೀನು ಖರೀದಿಸಿ ಹೊಸ ಶಾಲೆ ನಿರ್ಮಿಸದಿರುವುದೇಕೆ? ಎಂಬುದು ಗ್ರಾಮಸ್ಥರ ಪ್ರಶ್ನೆಯಾದರೆ, ಸರಕಾರಿ ನಿಯಮದ ಪ್ರಕಾರ ಗುಂಟೆಗೆ 5 ಸಾವಿರ ರೂ.ಗಿಂತ ಹೆಚ್ಚು ನೀಡಿ ಭೂಮಿ ಖರೀದಿಸುವಂತಿಲ್ಲ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ. ಹೀಗಾಗಿ ಹೊಸ ಶಾಲೆ ನಿರ್ಮಿಸುವುದು ನೆನೆಗುದಿಗೆ ಬಿದ್ದಿದೆ.

ಕಾನೂನು ಪ್ರಕಾರ ಸದರಿ ಗ್ರಾಮದ ಶಾಲೆಯ ಮಕ್ಕಳನ್ನು ಪಕ್ಕದ ಹುಣಸೇಮರದದೊಡ್ಡಿ ಗ್ರಾಮದ ಶಾಲೆಗೆ ತಾತ್ಕಾಲಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಯ್ಯ ನಿಯೋಜಿಸಿದ್ದಾರೆ. ಆದರೆ, ಗ್ರಾಮಸ್ಥರು ತಮ್ಮ ಗ್ರಾಮದಲ್ಲೇ ಶಾಲೆ ನಿರ್ಮಾಣಕ್ಕೆ ಪಟ್ಟುಹಿಡಿದಿದ್ದಾರೆ.

ಇದುವರೆಗೂ ಅಂಗನವಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮನೆ ಮಹಡಿ ಮೇಲೆ ಶಿಕ್ಷಕರು ತರಗತಿ ನಡೆಸಿದ್ದಾರೆ. ಇದೀಗ, ಗ್ರಾಮಸ್ಥರು ತಿಂಗಳಿಗೆ ಎರಡು ಸಾವಿರ ಬಾಡಿಗೆಯಂತೆ ಮನೆಮಾಡಿ ತರಗತಿಗೆ ನಡೆಸಲು ಅವಕಾಶ ಕಲ್ಪಿಸಿದ್ದಾರೆ.

-------------------------------------------------

“ನಮ್ಮ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಂಘರ್ಷವಿಲ್ಲ. ಶಾಲೆ ಸ್ವಾಧೀನದಿಂದ ಸಾಕಷ್ಟು ಪರಿಹಾರದ ಹಣ ಬಂದಿದೆ. ಕಾನೂನು ನೆಪ ಹೇಳದೆ ಗ್ರಾಮದಲ್ಲೆ ಸೂಕ್ತ ಜಾಗ ಖರೀದಿಸಿ ಹೊಸ ಶಾಲಾ ಕಟ್ಟಡ ನಿರ್ಮಿಸಬೇಕು. ಈ ಬಗ್ಗೆ ರಾಜ್ಯ ಸರಕಾರ, ಜಿಲ್ಲಾಡಳಿ, ಜನಪ್ರತಿನಿಧಗಳು ಗಮನಹರಿಸಬೇಕು.”

-ಬೊಮ್ಮೇಗೌಡ, ಎಸ್‍ಡಿಎಂಸಿ ಸದಸ್ಯರು, ಅಗರಲಿಂಗನದೊಡ್ಡಿ.

Writer - - ಮಲ್ಲೇಶ ಕುಂಟನಹಳ್ಳಿ

contributor

Editor - - ಮಲ್ಲೇಶ ಕುಂಟನಹಳ್ಳಿ

contributor

Similar News