ಪೊಲೀಸ್ ಸೇವಾ ಪದಕದಿಂದ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಹೋರಾಡಿದ ಶೇಖ್ ಅಬ್ದುಲ್ಲಾ ಭಾವಚಿತ್ರ ತೆರವು

Update: 2022-05-24 15:01 GMT
Photo: Twitter

ಶ್ರೀನಗರ: ಅತ್ಯುತ್ತಮ ಸೇವೆಗಾಗಿ ನೀಡುವ ಪೊಲೀಸ್ ಸೇವಾ ಪದಕದಿಂದ ಶೇಖ್ ಅಬ್ದುಲ್ಲಾ ಅವರ ಚಿತ್ರವನ್ನು ತೆಗೆದುಹಾಕಲು ಜಮ್ಮು ಮತ್ತು ಕಾಶ್ಮೀರ ಆಡಳಿತ ನಿರ್ಧರಿಸಿದೆ. ಈ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಸಿಡಿದೆದ್ದಿದ್ದು, ಇದೊಂದು ತಪ್ಪು ನಿರ್ಧಾರ ಎಂದು ಬಣ್ಣಿಸಿದೆ. ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಇತಿಹಾಸವನ್ನು ಅಳಿಸುವ ಪ್ರಯತ್ನವಾಗಿದೆ, ಆದರೆ ಶೇಖ್ ಅಬ್ದುಲ್ಲಾ ಅವರು ಯಾವಾಗಲೂ ಜನರ ಹೃದಯದಲ್ಲಿ ಇರುತ್ತಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.

ಸೋಮವಾರ ಈ ಕುರಿತು ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸೇವಾ ಪದಕಗಳಲ್ಲಿ ಲಾಂಛನ ಶೇಖ್ ಅಬ್ದುಲ್ಲಾ ಬದಲಿಗೆ ಭಾರತದ ರಾಷ್ಟ್ರೀಯ ಅಶೋಕ ಸ್ತಂಭವನ್ನು ಕೆತ್ತಲಾಗಿದೆ ಎಂದು ವರದಿಯಾಗಿದೆ.

“ರಾಷ್ಟ್ರೀಯ ಲಾಂಛನದ ಬಗ್ಗೆ ಸಂಪೂರ್ಣ ಗೌರವವನ್ನು ಹೊಂದಿರುವ ನಾನು ನಮ್ಮ ವೀರರ ಇತಿಹಾಸ, ಗುರುತು ಮತ್ತು ಗುರುತನ್ನು ಅಳಿಸುವ ಪ್ರಯತ್ನವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲು ಬಯಸುತ್ತೇನೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಇಮ್ರಾನ್ ನಬಿ ದಾರ್ ಹೇಳಿದ್ದಾರೆ.

ಹೆಸರುಗಳನ್ನು ಅಳಿಸುವುದರಿಂದ ಏನೂ ಬದಲಾಗುವುದಿಲ್ಲ ಆದರೆ ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಶೇಖ್ ಅಬ್ದುಲ್ಲಾ ಯಾವಾಗಲೂ ಜನರ ಹೃದಯವನ್ನು ಆಳುತ್ತಾರೆ.  ಇಂದು ಜಮ್ಮು ಮತ್ತು ಕಾಶ್ಮೀರದ ಜನತೆ ಎಲ್ಲೇ ಇದ್ದರೂ ಅದಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು. ಅವರು ಸರ್ವಾಧಿಕಾರ ಮತ್ತು ದಬ್ಬಾಳಿಕೆ ವಿರುದ್ಧ ಯಾವಾಗಲೂ ಹೋರಾಡಿದ್ದಾರೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಹೆಸರನ್ನು ಬದಲಾಯಿಸುವ ಮೂಲಕ ಅಥವಾ ಅದನ್ನು ಬೇರೆ ಯಾವುದನ್ನಾದರೂ ಬದಲಿಸುವ ಮೂಲಕ ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ದಾರ್‌ ಹೇಳಿದ್ದಾರೆ.

ಯಾರು ಈ ಶೇಖ್‌ ಅಬ್ದುಲ್ಲಾ?

ಕಳೆದ ಕೆಲವು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರಿಗೆ ಶೌರ್ಯಕ್ಕಾಗಿ ನೀಡುವ ಪದಕಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಾಯಕ ದಿವಂಗತ ಶೇಖ್ ಅಬ್ದುಲ್ಲಾ ಅವರ ಭಾವಚಿತ್ರವಿತ್ತು.  ಆ ಪದಕಗಳನ್ನು 'ಶೇರ್-ಎ-ಕಾಶ್ಮೀರ ಪೊಲೀಸ್ ಪದಕ' ಎಂದು ಕರೆಯಲಾಗುತ್ತಿತ್ತು. ‌

ದೇಶ ವಿಭಜನೆಯಾದ ಕಾಲದಲ್ಲಿ ಶೇಖ್ ಅಬ್ದುಲ್ಲಾ ಕಾಶ್ಮೀರದ ದೊಡ್ಡ ನಾಯಕರಾಗಿದ್ದರು. ಆಗ ಶೇಖ್ ಅಬ್ದುಲ್ಲಾರು ಪಾಕಿಸ್ತಾನಕ್ಕೆ ಹೋಗಬೇಕೆಂದು ಜಿನ್ನಾ ಆಸೆಪಟ್ಟರೂ ಅವರೊಂದಿಗೆ ಹೋಗಲಿಲ್ಲ. ಮಾತ್ರವಲ್ಲ, ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಪರವಾಗಿಯೂ ಇರಲಿಲ್ಲ. ಕಾಶ್ಮೀರವನ್ನು ಭಾರತದೊಂದಿಗೆ ಏಕೀಕರಣವನ್ನು ನಂಬಿದ ನಾಯಕರಲ್ಲಿ ಅವರು ಕೂಡಾ ಒಬ್ಬರು.

5 ಡಿಸೆಂಬರ್ 1905 ರಂದು ಶ್ರೀನಗರದ ಬಳಿಯ ಸೌರಾದಲ್ಲಿ ಜನಿಸಿದ ಶೇಖ್ ಅಬ್ದುಲ್ಲಾ ಲಾಹೋರ್ ಮತ್ತು ಅಲಿಗಢದಲ್ಲಿ ಅಧ್ಯಯನ ಮಾಡಿದರು. 1930ರಲ್ಲಿ ಅಲಿಗಢದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಶ್ರೀನಗರಕ್ಕೆ ಮರಳಿದರು.

ಶೇಖ್ ಅಬ್ದುಲ್ಲಾ ವಿದ್ಯಾವಂತರನ್ನು ಒಟ್ಟುಗೂಡಿಸಲು ಪ್ರಾರಂಭಿಸಿದರು. ಅವರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಜಾಗೃತಗೊಳಿಸುವ ಕುರಿತು ಮಾತನಾಡಿದರು. ಅವರ ಪ್ರಯತ್ನದಿಂದಾಗಿ 1932 ರಲ್ಲಿ ಮುಸ್ಲಿಂ ಕಾನ್ಫರೆನ್ಸ್ ಎಂಬ ಸಂಘಟನೆಯನ್ನು ಸ್ಥಾಪಿಸಲಾಯಿತು. 1938 ರಲ್ಲಿ, ಸಂಘಟನೆಯ ಹೆಸರನ್ನು 'ಮುಸ್ಲಿಂ ಕಾನ್ಫರೆನ್ಸ್ ' ನಿಂದ 'ನ್ಯಾಷನಲ್‌ ಕಾನ್ಫರೆನ್ಸ್' ಎಂದು ಬದಲಾಯಿಸಲಾಯಿತು.

1946 ರಲ್ಲಿ, ಶೇಖ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಾರಾಜ ಹರಿ ಸಿಂಗ್ ವಿರುದ್ಧ 'ಕಾಶ್ಮೀರ ಬಿಟ್ಟು ತೊಲಗಿ' ಚಳುವಳಿಯನ್ನು ಪ್ರಾರಂಭಿಸಿದರು. ಆಗ ಹರಿಸಿಂಗ್ ಅವರನ್ನು ಜೈಲಿಗೆ ಹಾಕಿದರು. ನಂತರ, ಜವಾಹರಲಾಲ್ ನೆಹರೂ ಅವರ ಪ್ರಯತ್ನದಿಂದಾಗಿ, ಶೇಖ್ ಅಬ್ದುಲ್ಲಾ ಜೈಲಿನಿಂದ ಬಿಡುಗಡೆಯಾದರು. ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ವಿಲೀನಗೊಂಡಾಗ, 1948 ರಲ್ಲಿ, ಅವರನ್ನು ಅಂದಿನ ಜಮ್ಮು ಮತ್ತು ಕಾಶ್ಮೀರದ ಪ್ರಧಾನಿಯನ್ನಾಗಿ ಮಾಡಲಾಗಿತ್ತು. (ಕಾಶ್ಮೀರದಲ್ಲಿ ಮುಖ್ಯಮಂತ್ರಿ ಎಂಬ ಪದದ ಬದಲು ಪ್ರಧಾನಿ ಎಂಬ ಪದವನ್ನು ಬಳಸಲಾಗುತ್ತಿತ್ತು)  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News