ಬೆಂಗಳೂರಿನಿಂದ ಮಾತ್ರ ರಾಜ್ಯದ ಹಜ್ ಯಾತ್ರಿಗಳ ಪ್ರಯಾಣ:ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ವಿರೋಧ

Update: 2022-05-24 18:57 GMT

ಬೆಂಗಳೂರು, ಮೇ 24: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ರಾಜ್ಯ ಹಜ್ ಸಮಿತಿ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಯಾತ್ರಿಗಳು ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಯಾತ್ರಿಗಳು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರವು ಭಾರತದಿಂದ 79,237 ಪ್ರಯಾಣಿಕರಿಗೆ ಮಾತ್ರ ಈ ಸಾಲಿನ ಹಜ್‍ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಿರುವುದರಿಂದ, ಕೇಂದ್ರ ಸರಕಾರವು ದೇಶಾದ್ಯಂತ ಇದ್ದ ಎಂಬಾರ್‍ಕೇಷನ್ ಪಾಯಿಂಟ್‍ಗಳ ಸಂಖ್ಯೆಯನ್ನು 21 ರಿಂದ 10ಕ್ಕೆ ಇಳಿಸಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲ, ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯದ ಹಜ್‍ಯಾತ್ರಿಗಳು ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಯಾತ್ರಿಗಳು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾತ್ರ ಪ್ರಯಾಣಿಸಲಿದ್ದು, ಈಗಾಗಲೆ ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜ್ಯ ಹಜ್ ಸಮಿತಿ ಮೂಲಕ ಈ ಬಾರಿ 2,700 ಮಂದಿ ಹಜ್ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಹೆಚ್ಚುವರಿಯಾಗಿ ಶೇ.30ರಷ್ಟು ಸೀಟುಗಳು ಲಭ್ಯವಾಗುವ ಮುನ್ಸೂಚನೆ ಇದೆ. ಈ ಹಿಂದೆ ರಾಜ್ಯದ ಯಾತ್ರಿಗಳು ಬೆಂಗಳೂರು ಹಾಗೂ ಮಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುತ್ತಿದ್ದರು ಎಂದು ಅವರು ಹೇಳಿದರು.

ಇದಲ್ಲದೆ, ಹೈದರಾಬಾದ್ ಕರ್ನಾಟಕ ಭಾಗದ ಯಾತ್ರಿಗಳು ಹೈದರಾಬಾದ್ ಮೂಲಕ ಹಾಗೂ ಮುಂಬೈ ಕರ್ನಾಟಕ ಭಾಗದ ಯಾತ್ರಿಗಳ ಅನುಕೂಲಕ್ಕಾಗಿ ಗೋವಾ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್‍ಯಾತ್ರೆಗೆ ತೆರಳುತ್ತಿದ್ದರು. ಆದರೆ, ಎಂಬಾರ್‍ಕೇಷನ್ ಪಾಯಿಂಟ್‍ಗಳ ಸಂಖ್ಯೆ ಇಳಿಕೆಯಾಗಿರುವುದರಿಂದ ರಾಜ್ಯದ ಯಾತ್ರಿಗಳು ಕೇವಲ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾತ್ರ ಪ್ರಯಾಣ ಮಾಡಬೇಕಿದೆ ಎಂದು ರವೂಫುದ್ದೀನ್ ಕಚೇರಿವಾಲ ತಿಳಿಸಿದರು.

ಕಾಂಗ್ರೆಸ್ ಖಂಡನೆ: ರಾಜ್ಯದ ಎಲ್ಲ ಜಿಲ್ಲೆಗಳ ಹಜ್ ಯಾತ್ರಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಾತ್ರ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಿರುವುದು ಖಂಡನೀಯ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ತಿಳಿಸಿದರು.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಹಜ್ ಯಾತ್ರಿಕರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರಕಾರದ ಆಡಳಿತವಿದ್ದಾಗ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಹಜ್ ಯಾತ್ರಿಕರಿಗೆ ಮಂಗಳೂರಿನಿಂದ ಮತ್ತು ಕಲಬುರಗಿ ಆಸುಪಾಸಿನ ಜಿಲ್ಲೆಯ ಯಾತ್ರಿಕರಿಗೆ ಹೈದರಾಬಾದ್ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಹಜ್ ಯಾತ್ರಿಕರಿಗೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು. 

ಆದರೆ, ಇದೀಗ ರಾಜ್ಯ ಬಿಜೆಪಿ ಸರಕಾರ ಇದನ್ನು ಕೈ ಬಿಟ್ಟಿದ್ದರಿಂದ ಯಾತ್ರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಯಾತ್ರಿಕರಿಗೆ ಆಗುತ್ತಿದ್ದ ಸಮಸ್ಯೆ, ತೊಂದರೆಯನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್ ಸರಕಾರ ದಿಟ್ಟ ಕ್ರಮ ಕೈಗೊಂಡಿದ್ದರೆ ಹಾಲಿ ಬಿಜೆಪಿ ಸರಕಾರ ಹಜ್ ಯಾತ್ರಿಕರನ್ನು ಸಮಸ್ಯೆಗೆ ಸಿಲುಕಿಸಿದೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಸೌದಿ ಅರೇಬಿಯಾ ಸರಕಾರವು ಭಾರತಕ್ಕೆ ನಿಗದಿಪಡಿಸಿರುವ 79,237 ಮಂದಿಯ ಕೋಟಾದಲ್ಲಿ ಭಾರತೀಯ ಹಜ್ ಸಮಿತಿಗೆ 56,601 ಹಾಗೂ ಖಾಸಗಿ ಏಜೆನ್ಸಿಗಳಿಗೆ 22,636 ಕೋಟಾವನ್ನು ಹಂಚಿಕೆ ಮಾಡಲಾಗಿದೆ. ಭಾರತೀಯ ಹಜ್ ಸಮಿತಿಯು 56,601 ಮಂದಿಯ ಕೋಟಾದಲ್ಲಿ ದೇಶದ ರಾಜಧಾನಿ ದಿಲ್ಲಿ ಸೇರಿದಂತೆ 25 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮುಸ್ಲಿಮ್ ಜನಸಂಖ್ಯೆ ಆಧರಿಸಿ ಯಾತ್ರಿಗಳ ಕೋಟಾವನ್ನು ನಿಗದಿಪಡಿಸಿದೆ. ಇದರಲ್ಲಿ ಖಾದಿಮುಲ್ ಹುಜ್ಜಾಜ್(377) ಹಾಗೂ ಸಂಗಾತಿಯಿಲ್ಲದೆ ಪ್ರಯಾಣಿಸುವ ಮಹಿಳಾ ಯಾತ್ರಿಗಳು(1,812) ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News