ಶ್ರೀನಗರ: ಉಗ್ರರ ಗುಂಡಿಗೆ ಕಿರುತೆರೆ ನಟಿ ಬಲಿ

Update: 2022-05-26 03:16 GMT
Photo: Social Media

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡಗಾಂವ್ ಜಿಲ್ಲೆಯಲ್ಲಿ ಉಗ್ರರು ಬುಧವಾರ 35 ವರ್ಷ ವಯಸ್ಸಿನ ಕಿರುತೆರೆ ನಟಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಹಿಳೆಯ 10 ವರ್ಷ ವಯಸ್ಸಿನ ಅಳಿಯ ಕೂಡಾ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಲಷ್ಕರ್-ಇ-ತೊಯಿಬಾ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

"ರಾತ್ರಿ 7.55ರ ಸುಮಾರಿಗೆ ಅಮ್ರೀನ್‌ ಬಟ್ ಎಂಬವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾಗಿ ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಅಮ್ರೀನ್‌ ಬಟ್ ಅವರು ಟಿಕ್-ಟಾಕ್  ಕಲಾವಿದೆ ಹಾಗೂ ಕಿರುತೆರೆ ನಟಿಯಾಗಿದ್ದರು. ಘಟನೆಯಲ್ಲಿ ಫರ್ಹಾನ್ ಝುಬೈರ್ ಎಂಬ ಬಾಲಕ ಕೂಡಾ ತೀವ್ರ ಗಾಯಗೊಂಡಿದ್ದಾನೆ.

ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದು, ಉಗ್ರರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಹೇಳಿದ್ದಾರೆ. ಇದು ಕಳೆದ 24 ಗಂಟೆಯಲ್ಲಿ ಉಗ್ರರು ನಡೆಸಿದ ಎರಡನೇ ಹತ್ಯೆಯಾಗಿದೆ. ಮಂಗಳವಾರ ಶ್ರೀನಗರದಲ್ಲಿ ಮನೆಯಲ್ಲಿದ್ದ ಪೊಲೀಸ್ ಒಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ತಂದೆಯ ರಕ್ಷಣೆಗೆ ಧಾವಿಸಿದ ಅವರ ಪುತ್ರಿ ಏಳು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News