ಶಿವಮೊಗ್ಗ: ಬಫರ್ ಝೋನ್ ವ್ಯಾಪ್ತಿಗೆ ಕರೂರು-ಬಾರಂಗಿ ಹೋಬಳಿ?

Update: 2022-05-26 05:22 GMT

ಶಿವಮೊಗ್ಗ, ಮೇ.26: ಶರಾವತಿ ಹಿನ್ನೀರಿನ ವ್ಯಾಪ್ತಿಯಲ್ಲಿ ವಾಸಿಸುವ ಕರೂರು,ಬಾರಂಗಿ ಹೋಬಳಿಯ ಜನರಿಗೆ ಸಂಕಷ್ಟ ಎದುರಾಗಿದೆ.ಅರಣ್ಯ ಇಲಾಖೆಯ ಈ ನಿರ್ಧಾರದಿಂದ ಈ ಭಾಗದ ಜನರ ಬದುಕು ಬೀದಿಗೆ ಬೀಳುವ ಲಕ್ಷಣಗಳು ಕಾಣುತ್ತಿದೆ.ಅರಣ್ಯ ಇಲಾಖೆ ಕೇಂದ್ರ ಮೀಸಲು ಅರಣ್ಯ ಪ್ರದೇಶದ ಗಡಿ ಭಾಗದಿಂದ 10 ಕಿಲೋ ಮೀಟರ್ ವ್ಯಾಪ್ತಿಯನ್ನು  ಬಫರ್ ಝೋನ್ ವ್ಯಾಪ್ತಿಗೆ ಸೇರಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿ,ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮುಂದಾಗಿದೆ. ಅರಣ್ಯ ಇಲಾಖೆಯ ಈ ನಿರ್ಧಾರದಿಂದ ಕರೂರು,ಬಾರಂಗಿ ಹೋಬಳಿಯ ಸುಮಾರು 42 ಗ್ರಾಮಗಳು ಬಫರ್ ಝೋನ್ ವ್ಯಾಪ್ತಿಗೆ ಸೇರಲಿದೆ.

ಅರಣ್ಯ ಇಲಾಖೆಯ ನಿರ್ಧಾರ. ಈಗಾಗಲೇ ಸಾಗರ ತಾಲೂಕಿನ ಕರೂರು ಭಾರಂಗಿ ಹೋಬಳಿಯ ವ್ಯಾಪ್ತಿಯಲ್ಲಿ ಶರಾವತಿ ಅಭಯಾರಣ್ಯ ಎಂದು ಘೋಷಿಸಲಾಗಿದೆ.ಅಭಯಾರಣ್ಯ ವ್ಯಾಪ್ತಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ಜೊತೆಗೆ ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡ ಜಮೀನಿಗೆ ಖಾತೆ ಆಗದೆ ಪೋಡಿ ದುರಸ್ತಿ ಕಂಡಿಲ್ಲ.ಈ ನಡುವೆ ಅಭಯಾರಣ್ಯದ ಜೊತೆಗೆ ಬಫರ್ ಜೋನ್ ಸೇರಿಸುತ್ತಿರುವುದರಿಂದ ಹಿನ್ನೀರಿನ ಜನರ ಬದುಕು ಮೂರಾಬಟ್ಟೆಯಾದರೂ ಅಚ್ಚರಿಯಿಲ್ಲ.

ಬಪರ್ ಝೋನ್ ಸೇರುವುದು ಖಚಿತ:

ಶರಾವತಿ ಅಭಯಾರಣ್ಯವನ್ನು ಕೇಂದ್ರ ಮೀಸಲು ಅರಣ್ಯ ಪ್ರದೇಶದ ಗಡಿ ಭಾಗದಿಂದ ಹತ್ತು ಕಿಲೋಮೀಟರ್ ಭೂ ಪ್ರದೇಶವನ್ನು ಅತೀ ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಗುರುತಿಸಬೇಕು. ಅಲ್ಲದೆ ಈ ಪ್ರದೇಶವನ್ನು ಬಪರ್ ಝೋನ್ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್  2019ರಲ್ಲಿ  ಆದೇಶವನ್ನು ನೀಡಿದೆ. ಈ ಅದೇಶದ ಪ್ರಕಾರದ  ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾವಿನಗುಂಡಿ ಗೇರುಸೊಪ್ಪೆ ಕೆಲವು ಭಾಗಗಳು ಸೇರುತ್ತದೆ. ಸುಪ್ರೀಂ ಕೋರ್ಟ್  ಆದೇಶವನ್ನು  ಪಾಲನೆಯನ್ನು ಅರಣ್ಯಾಧಿಕಾರಿಗಳು ಈಗ ಮಾಡಲು ಹೊರಟಿದ್ದಾರೆ. ಸುಪ್ರೀ ಕೋರ್ಟ್ ನ ಆದೇಶವನ್ನು ಚಾಚು ತಪ್ಪದೇ ಪಾಲನೆ ಮಾಡಲು ಹೊರಟರೆ ಸಾಗರ ತಾಲೂಕಿನ ಬಾರಂಗಿ ಹಾಗೂ ಕರೂರು ಹೋಬಳಿಯ ಸುಮಾರು 42  ಹಳ್ಳಿಗಳನ್ನು ಈ ಬಪರ್ ಝೋನ್ ವ್ಯಾಪ್ತಿಗೆ ಸೇರಲಿವೆ ಎನ್ನಲಾಗಿದೆ.  ಅಲ್ಲದೆ ಕೇಂದ್ರ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 50  ಹಳ್ಳಿಗಳು ಬರುತ್ತದೆ. ಒಟ್ಟು 92 ಹಳ್ಳಿಗಳು ಕೇಂದ್ರ ಅರಣ್ಯ ಮೀಸಲು ಅರಣ್ಯ ಪ್ರದೇಶದ ಕಪಿ ಮುಷ್ಟಿಯಲ್ಲಿ ಸಿಲುಕುವ ಲಕ್ಷಣಗಳು ಇದೆ.

ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟ ಕೇಳುತ್ತಿಲ್ಲ

ರಾಜ್ಯಕ್ಕೆ ಬೆಳಕು ನೀಡಲು  ಶರಾವತಿ ಆಣೆಕಟ್ಟಿಗಾಗಿ ಸರ್ವಸ್ವ ಕಳೆದುಕೊಂಡ ಜನರ ಬದುಕು ಇಂದಿಗೂ ಸರಿಯಾಗಿಲ್ಲ. ಸರ್ಕಾರದ ಪರಿಹಾರ ದಕ್ಕದೆ, ಕಾನೂನಿನ ಕುಣಿಕೆಯಲ್ಲಿ ಜೀವನ ನಡೆಸುವಂತಾಗಿದೆ. ಈಗಾಗಲೇ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡು  ಬದುಕು ಕಟ್ಟಿಕೊಂಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರ  ಬದುಕು ಬಿದ್ದುಹೋಗುವ ಹಂತದಲ್ಲಿದೆ. ಇಂತಹ  ಸಂದರ್ಭದಲ್ಲಿ ಬಪರ್ ಜೋನ್ ಎನ್ನುವ ಕಾನೂನು ಜಾರಿಗೆ ತಂದರೆ ಬಾರಂಗಿ ಹಾಗೂ ಕರೂರು ಹೋಬಳಿಯ ಜನರ ಬದುಕೇ ಸಂಪೂರ್ಣ ನಾಶವಾಗುವುದರಲ್ಲಿ ಯಾವ ಸಂಶಯವಿಲ್ಲ. ಇಲ್ಲಿನ ಜನರ ರಕ್ಷಣೆ ಮಾಡಬೇಕಾದ ಸರ್ಕಾರ ಜಾಣಕುರುಡತನ ಪ್ರದರ್ಶನ ಮಾಡುತ್ತಿದೆ. ಸರ್ಕಾರದ ಪರ ಇರುವ ಜನಪ್ರತಿನಿಧಿಗಳು ಕೇಂದ್ರ ಅರಣ್ಯ ಮೀಸಲು ಪ್ರದೇಶದ  ಘೋಷಣೆಯನ್ನು ರದ್ದು ಮಾಡುವ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆದು ಸರ್ಕಾರವನ್ನು ಎಚ್ಚರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಣ್ಣ ಪ್ರಯತ್ನವನ್ನು ಮಾಡುತ್ತಿಲ್ಲ.ರೈತರ ನೆರವಿಗೆ ಬರಬೇಕಾದವರು ಅಸಹಾಯಕರಾಗಿದ್ದಾರೆ.ಹೀಗಿರುವಾಗ ಈ ಸಮಸ್ಯೆಯನ್ನು ಪರಿಹರಿಸುವವರು ಯಾರು? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

-----------------------------------------------------

ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮಗಳನ್ನು ಬಫರ್ ಝೋನ್ ವ್ಯಾಪ್ತಿಗೆ ಸೇರಿಸುತ್ತಿರುವುದು ಬಹಳ ಖಂಡನೀಯ.ಶರಾವತಿ ಅಭಯಾರಣ್ಯ ಎಂದು ಘೋಷಣೆ ಮಾಡಿರುವುದೇ ಕಾನೂನು ಬಾಹಿರ ಎಂದು ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಪತ್ರ ಬರೆದಿದ್ದರು.ಮನೆ,ಜಮೀನು ರಸ್ತೆ,ಗ್ರಾಮಗಳನ್ನು ಬಿಟ್ಟು ನೋಟಿಫಿಕೇಷನ್ ಮಾಡಬೇಕು.ಪುನಃ  ಸರ್ವೆ ಮಾಡಬೇಕು ಎಂಬ ಆದೇಶದ ಹಿನ್ನಲೆಯಲ್ಲಿ ಸರ್ವೆ ಇಲಾಖೆಯವರು 15 ಲಕ್ಷ ಹಣ ಕಟ್ಟುವಂತೆ ವನ್ಯಜೀವಿ ವಿಭಾಗಕ್ಕೆ ಪತ್ರ ಬರೆದಿದ್ದರು.ಒಂದು ವರ್ಷವಾದರೂ ಹಣ ಕಟ್ಟದೇ ವನ್ಯಜೀವಿ ವಿಭಾಗ ಮೀನಾ ಮೇಷ ಏಣಿಸುತ್ತಿದೆ.ಈ ನಡುವೆ ಸಿಂಗಳೀಕ ಅಭಯಾರಣ್ಯ ಅಂತ ಘೋಷಣೆ ಮಾಡಿದ್ದಾರೆ.ಕರೂರು-ಬಾರಂಗಿ ಹೋಬಳಿ ಗ್ರಾಮಗಳನ್ನು ಬಫರ್ಜೋನ್ ನಿಂದ ಕೈ ಬೀಡಬೇಕು.ಸ್ಥಳೀಯ ಸರ್ಕಾರಗಳ ಅಭಿಪ್ರಾಯ ಪಡೆದುಕೊಳ್ಳಬೇಕು.ಇಲ್ಲದಿದ್ದಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತದೆ.

-ತೀ.ನಾ ಶ್ರೀನಿವಾಸ್,ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News