ಪಟಿಯಾಲ ಜೈಲಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಲಿರುವ ನವಜೋತ್ ಸಿಂಗ್ ಸಿಧು!

Update: 2022-05-26 07:20 GMT
ನವಜೋತ್ ಸಿಂಗ್ ಸಿಧು (Photo: PTI)

ಪಟಿಯಾಲ: ಕೊಲೆ ಪ್ರಕರಣವೊಂದರಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಪಂಜಾಬ್ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ತಮ್ಮ ಶಿಕ್ಷೆಯ ಅವಧಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಲಿದ್ದಾರೆ ಎಂದು ndtv.com ವರದಿ ಮಾಡಿದೆ.

ಬ್ಯಾರಾಕ್ ಸಂಖ್ಯೆ 7ರಲ್ಲಿರುವ ಸಿದ್ದು ಅವರು ಖೈದಿ ಸಂಖ್ಯೆ 241383 ಆಗಿದ್ದಾರೆ. ಭದ್ರತಾ ಕಾರಣಗಳಿಗಾಗಿ ಅವರು ತಮ್ಮ ಸೆಲ್‍ನೊಳಗೇ ಕಾರ್ಯನಿರ್ವಹಿಸಲಿದ್ದಾರೆ ಹಾಗೂ ಕಡತಗಳನ್ನು ಅಲ್ಲಿಗೇ ಕಳುಹಿಸಿಕೊಡಲಾಗುವುದು.

ಸಿದ್ದು ಅವರು ಮಾಡಿದ ಕೆಲಸಕ್ಕೆ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಶಿಕ್ಷೆ ಅನುಭವಿಸುತ್ತಿರುವ ಖೈದಿಗಳು ದಿನದ ಎಂಟು ಗಂಟೆ ದುಡಿಯಬಹುದಾಗಿದೆ.

ಐವತ್ತೆಂಟು ವರ್ಷದ ಸಿಧು ಅವರಿಗೆ ದೀರ್ಘ ಕೋರ್ಟ್ ತೀರ್ಪುಗಳನ್ನು ಸಾರಾಂಶಗೊಳಿಸುವ ಹಾಗೂ ಜೈಲು ದಾಖಲೆಗಳನ್ನು ಸಂಗ್ರಹಿಸುವ ಕೆಲಸ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 27, 1988ರಂದು ಸಿಧು ಅವರು ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರ ಜೊತೆಗೆ ಜಗಳವಾಡಿ ಅವರ ತಲೆಗೆ  ಹೊಡೆದಿದ್ದರೆಂದು ಆರೋಪಿಸಲಾಗಿತ್ತು. ಸಿಂಗ್ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಸ್ಥಳೀಯ ನ್ಯಾಯಾಲಯ ಸಿಧು ಅವರನ್ನು ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ 1999ರಲ್ಲಿ ಖುಲಾಸೆಗೊಳಿಸಿದ್ದರೂ ಹೈಕೋರ್ಟ್ 2006ರಲ್ಲಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಸಿದ್ದು ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದಾಗ ಇದು 30 ವರ್ಷ ಹಳೆಯ ಪ್ರಕರಣ ಹಾಗೂ ಸಿಧು ಯಾವುದೇ ಶಸ್ತ್ರ ಬಳಸಿಲ್ಲ ಎಂಬ ಕಾರಣಕ್ಕೆ  ಪ್ರಕರಣ ವಜಾಗೊಳಿಸಿತ್ತು. ಆದರೆ ಸಂತ್ರಸ್ತನ ಕುಟುಂಬ ಇದರ ವಿರುದ್ಧ 2018ರಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News