ಶಿಗ್ಗಾವಿಯಲ್ಲಿ ಶೂಟೌಟ್: ಪ್ರಾಣಾಪಾಯದಿಂದ ಪಾರಾದ ಮಹಿಳೆ

Update: 2022-05-26 08:04 GMT
ಸಾಂದರ್ಭಿಕ ಚಿತ್ರ

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ಬುಧವಾರ ರಾತ್ರಿ ಗುಂಡಿನ ದಾಳಿ ಸಂಭವಿಸಿದ್ದು, ಅದೃಷ್ಟವಶಾತ್ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಲಗೂರು ಗ್ರಾಮದ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಸಲ್ಮಾಬಾನು ಎಂಬ ಮಹಿಳೆಯನ್ನು  ಗುರಿಯಾಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಸದ್ಯ ಸಲ್ಮಾಬಾನು‌ ಪಾರಾಗಿದ್ದು, ಬುಧವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 

ಸಲ್ಮಾ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ. ಸಲ್ಮಾ ಕಟ್ಟೆಯ ಮೇಲೆ ಉರುಳಿಬಿದ್ದಿದ್ದರಿಂದ, ಗುಂಡುಗಳು ಮನೆಯ ತಗಡನ್ನು ಸೀಳಿ, ಗೋಡೆ ಮೇಲೆ ಸಿಡಿದಿವೆ ಎನ್ನಲಾಗಿದೆ.

ಪತಿ ಅಬ್ದುಲ್ ಖಾದರ್ ಮತ್ತು ಸಲ್ಮಾ ನಡುವೆ ಜಗಳವಿದ್ದ ಕಾರಣ ಪತಿ ಕಿರುಕುಳ ನೀಡುತ್ತಿದ್ದ ಎಂದು ಸಲ್ಮಾ ಕಳೆದ ಕೆಲವು ವರ್ಷಗಳಿಂದ ತಂದೆಯ ಮನೆಯಲ್ಲೇ ವಾಸವಾಗಿದ್ದರು. ಘಟನೆಯಲ್ಲಿ ಸಲ್ಮಾ ಅವರ ಪತಿ ಅಬ್ದುಲ್ ಮೇಲೆ ಸಂಶಯವಿರುತ್ತದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಪಿ ವಿಜಯಕುಮಾರ ಸಂತೋಷ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News