VIDEO- ವಿನೂತನ ಪ್ರತಿಭಟನೆ: ಅರೆ ಬೆತ್ತಲಾಗಿ ತಾ.ಪಂ. ಕಚೇರಿಯ ಕಸ ಗುಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

Update: 2022-05-26 12:20 GMT

ಶಿವಮೊಗ್ಗ : ಗ್ರಾಮ ಪಂಚಾಯತ್ ಅಧಿಕಾರವನ್ನು ಮೊಟಕುಗೊಳಿಸಿ‌, ಅಧಿಕಾರಿಗಳೇ ಫಲಾನಭವಿಗಳ ಪಟ್ಟಿ ಸಿದ್ಧಪಡಿಸಿದ ಕ್ರಮ ಖಂಡಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.‌

ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಮ ಪಂ. ಅಧ್ಯಕ್ಷ ಕರುಣಾಕರ ಶೆಟ್ಟಿ ಅರೆ ಬೆತ್ತಲಾಗಿ ಹೊಸನಗರ ತಾಲೂಕು ಪಂ. ಕಚೇರಿಯಲ್ಲಿ ಕಸ ಗುಡಿಸಿದರು.

ಏನಿದು ವಿವಾದ: ನರೇಗಾ ಯೋಜನೆ ಅಡಿ ಅಡಕೆ ಗಿಡ ನೆಡಲು ಅನುದಾನ ಬಿಡುಗಡೆ ವಿಚಾರದಲ್ಲಿ ಗ್ರಾಮ ಪಂಚಾಯತ್ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಮೂಡುಗೊಪ್ಪ ಗ್ರಾಮ ಪಂ. ಅಧ್ಯಕ್ಷ ಕರುಣಾಕರ ಶೆಟ್ಟಿ ಆರೋಪಿಸಿದ್ದಾರೆ.‌

ಅನುದಾನ ಬಿಡುಗಡೆ ವಿಚಾರ ಗ್ರಾಮ ಪಂ. ಸಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು. ಫಲಾನುಭವಿಗಳ ಪಟ್ಟಿಗೆ ಗ್ರಾಮ ಪಂ. ಅಧ್ಯಕ್ಷರು ಮತ್ತು ಪಿಡಿಒ ಅವರು ಸಹಿ ಮಾಡಿ ತಾಲೂಕು ಕಚೇರಿಗೆ ಕಳುಹಿಸಬೇಕು. ಆ ಬಳಿಕ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಲಿದೆ. ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯನ್ನು ಪರಿಗಣಿಸದೆಯೆ ಪಟ್ಟಿ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಿರುವ ಸಂಗತಿ ಕುರುಣಾಕರ ಶೆಟ್ಟಿ ಅವರ ಆಕ್ರೋಶಕ್ಕೆ ಕಾರಣವಾಗಿದೆ.

36 ಲಕ್ಷ ರೂ. ಬಿಡುಗಡೆ: ಮೂಡುಗೊಪ್ಪ ಗ್ರಾಮ ಪಂ. ವ್ಯಾಪ್ತಿಯಲ್ಲಿ ರೈತರಿಗೆ 36 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ‘ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 36 ರೈತರಲ್ಲ ಇನ್ನೂ ಹೆಚ್ಚಿನ ರೈತರಿಗೆ ಅನುದಾನ ಬಿಡುಗಡೆ ಮಾಡಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಗ್ರಾಮ ಪಂಚಾಯಿತಿ ಗಮನಕ್ಕೆ ತರಾದೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ’ ಎಂದು ಕುರಣಾಕರ ಶೆಟ್ಟಿ ಆರೋಪಿಸಿದ್ದಾರೆ.

ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು. ಇದು ಗ್ರಾಮ ಪಂಚಾಯಿತಿಗೆ ಇರುವ ಪರಮಾಧಿಕಾರ. ಆದರೆ ಅಧಿಕಾರಿಗಳು ತಮ್ಮ ಪರಮಾಧಿಕಾರವನ್ನು ಕಸಿದುಕೊಂಡಿದ್ದಾರೆ ಎಂದು ಕರುಣಾಕರ ಶೆಟ್ಟಿ ಆರೋಪಿಸಿದ್ದಾರೆ.

‘ಗ್ರಾಮ ಪಂಚಾಯಿತಿ ಮಾಡಬೇಕಿದ್ದ ಕೆಲಸವನ್ನು ಅಧಿಕಾರಿಗಳೇ ಮಾಡಿದ್ದಾರೆ. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲಿ ನಮಗೇನು ಕೆಲಸವಿಲ್ಲ. ಆದ್ದರಿಂದ ನಮ್ಮ ಕೆಲಸ ಮಾಡಿದ ಅಧಿಕಾರಿಗಳಿಗೆ ಸಹಾಯ ಮಾಡಬೇಕಿದೆ. ಅವರ ಕೆಲಸವನ್ನು ನಾವು ಮಾಡಬೇಕಿದೆ. ಹಾಗಾಗಿ ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸಿದ್ದೇನೆ’ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.

ತಮ್ಮ ಬೇಡಿಕೆ ಈಡೇರುವವರೆಗೂ ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸಿ, ಪ್ರತಿಭಟನೆ ಮುಂದುವರೆಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ನಿರ್ಧರಿಸಿದ್ದಾರೆ.

ವಿಭಿನ್ನ ಪ್ರತಿಭಟನೆಗಳಿಂದ ಗಮನ ಸೆಳೆದವರು

ಮೂಡುಗೊಪ್ಪ ಗ್ರಾಮ ಪಂಚಾಯಿತ್ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ವಿಭಿನ್ನ ಪ್ರತಿಭಟನೆಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ಪಾದಯಾತ್ರೆ ಮಾಡಿದ್ದರು. ಒಮ್ಮೆ ಅರಣ್ಯ ಇಲಾಖೆಯ ರೇಂಜ್ ಕಚೇರಿ ಛಾವಣಿ ಏರಿ ಕುಳಿತು ಪ್ರತಿಭಟಿಸಿದ್ದರು. ಮತ್ತೊಮ್ಮೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮರ ಏರಿ ಕುಳಿತು ಹೋರಾಟ ಮಾಡಿದ್ದರು. ಈಗ  ತಾಲೂಕು ಪಂಚಾಯತ್ ಕಚೇರಿಯ ಕಸ ಗುಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News