ವಿಜಯದಶಮಿ ವೇಳೆಗೆ ರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳು ಆಗಲಿವೆ: ಎಚ್.ಡಿ.ಕುಮಾರಸ್ವಾಮಿ

Update: 2022-05-26 12:42 GMT

ಬೆಂಗಳೂರು, ಮೇ 26: ದೇಶದಲ್ಲಿ ಕಾಂಗ್ರೆಸ್ ಶಕ್ತಿ ದಿನೇ ದಿನೇ ಕ್ಷೀಣಿಸುತ್ತಿದೆ. ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದೇವೆ. ಜನತೆಯ ಹಿತದೃಷ್ಟಿಯಿಂದ ಪರ್ಯಾಯ ಶಕ್ತಿ ಬರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರರಾವ್ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ವಿಶ್ವಾಸ ಮೂಡಿಸಿ, ಅಭಿವೃದ್ಧಿ ಪೂರಕವಾಗಿ ಮುನ್ನಡೆಯಲು ಮುಂದಿನ ಸಿದ್ಧತೆಗಳು ನಡೆಯುತ್ತಿವೆ. ಇವತ್ತು ತೃತೀಯ ರಂಗ ಚರ್ಚೆ ಅಲ್ಲ, ದೇಶಕ್ಕೆ ಅಗತ್ಯವಿರುವ ಪರ್ಯಾಯ ವ್ಯವಸ್ಥೆ ಎಂದು ಹೇಳಬೇಕು ಎಂದರು.

ಹಿಂದಿನ ಹಲವಾರು ವೈಫಲ್ಯಗಳನ್ನು ನಾವು ನೋಡಿದ್ದೇವೆ. ಬಿಜೆಪಿಗೆ ಪರ್ಯಾಯವಾಗಿ ಹಲವಾರು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಚಂದ್ರಶೇಖರರಾವ್ ಭೇಟಿಯಾಗಿ ಇವತ್ತಿನ ದೇಶದ ಪರಿಸ್ಥಿತಿಗಳ ಬಗ್ಗೆ ಸುದೀರ್ಘ ಚರ್ಚೆಗಳನ್ನು ನಡೆಸಿದ್ದಾರೆ. ಇವತ್ತು ದೇವೇಗೌಡರ ಭೇಟಿ ಸಂದರ್ಭದಲ್ಲಿ ಆ ವಿಚಾರಗಳನ್ನೆಲ್ಲ ಹಂಚಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ದೇಶದ ಹಿತದೃಷ್ಟಿಯಿಂದ ಒಂದು ವೇದಿಕೆ ಸೃಷ್ಟಿ ಮಾಡಲು ಚಂದ್ರಶೇಖರರಾವ್ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಸಂಪತ್ತಿನ ಪಾಲು ಸಮಾಜದಲ್ಲಿರುವ ಕಡು ಬಡವರಿಗೂ ತಲುಪಬೇಕು. ಪ್ರಾಕೃತಿಕ ಸಂಪತ್ತು ದೇಶದ ಬೆಳವಣಿಗೆಗೆ ಅಗತ್ಯವಿರುವಂತೆ ಬಳಕೆಯಾಗಬೇಕು ಎಂಬುದು ಅವರ ಆಶಯ. ಈ ನಿಟ್ಟಿನಲ್ಲಿ ದೇವೇಗೌಡರ ಅನುಭವದ ಆಧಾರದಲ್ಲಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಪಾಲಿಗೆ ದಸರಾ ಹಬ್ಬವು ಬಹಳ ವಿಶಿಷ್ಟವಾದದ್ದು. ಇದೇ ವೇಳೆ ಬರುವ ವಿಜಯದಶಮಿ ಅತ್ಯಂತ ಮಹತ್ವದ್ದು. ಈ ವರ್ಷದ ವಿಜಯದಶಮಿ ವೇಳೆಗೆ ರಾಷ್ಟ್ರಮಟ್ಟದಲ್ಲಿ ಹಲವಾರು ಅಚ್ಚರಿಯ ಬೆಳವಣಿಗೆಗಳು ಆಗಲಿವೆ. ಮುಂದಿನ ಹೋರಾಟಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಇನ್ನೆರಡು ತಿಂಗಳಲ್ಲಿ ಎಲ್ಲ ಮುಖಂಡರು ದೇಶದ ಮುಂದೆ ಬಂದು ವಿಷಯ ಪ್ರಸ್ತಾಪಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News