ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹ: ಮಂಡ್ಯದಲ್ಲಿ ಪರಿಷ್ಕೃತ ಪಠ್ಯಪುಸ್ತಕದ ‘ಪ್ರತಿಗಾಮಿ’ ಪಠ್ಯಗಳ ದಹಿಸಿ ಆಕ್ರೋಶ

Update: 2022-05-26 17:19 GMT

ಮಂಡ್ಯ, ಮೇ 26: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ರದ್ದತಿ ಹಾಗೂ ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಸಮಾನಮನಸ್ಕರ ವೇದಿಕೆ ವತಿಯಿಂದ ಗುರುವಾರ ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯ ಸಂಜಯ ವೃತ್ತದಲ್ಲಿ ಪರಿಷ್ಕøತ ಪಠ್ಯದಲ್ಲಿನ ‘ಪ್ರತಿಗಾಮಿ’ ಪಾಠಗಳನ್ನು ಸುಟ್ಟು ಪ್ರತಿಭಟಿಸಲಾಯಿತು.

ರೈತಸಭಾಂಗಣದ ಕುವೆಂಪು ಪ್ರತಿಮೆ ಮುಂಭಾಗದಿಂದ ಮೆರವಣಿಗೆಯಲ್ಲಿ ವೃತ್ತಕ್ಕೆ ತೆರಳಿದ ದಲಿತ, ರೈತ, ಮಹಿಳಾ, ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಚಿಂತಕರು ರಾಜ್ಯ ಸರಕಾರ, ರೋಹಿತ್ ಚಕ್ರತೀರ್ಥ, ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಜಯ ವೃತ್ತದ ಹೆದ್ದಾರಿಯಲ್ಲಿ ಪರಿಷ್ಕೃತ ಪಠ್ಯಪುಸ್ತಕದಲ್ಲಿನ ಕೆಲವು ‘ಪ್ರತಿಗಾಮಿ’ ಪಾಠಗಳ  ಪ್ರತಿಗಳನ್ನು ಸುಡುವ ಮೂಲಕ ಪರಿಷ್ಕರಣೆ ಸಮಿತಿ ಶಿಫಾರಸ್ಸುಗಳನ್ನು ಕೈಬಿಡುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಶಿಫಾರಸ್ಸುತಳನ್ನು ಕೈಬಿಡಬೇಕು. ಚಕ್ರತೀರ್ಥ ಅಧ್ಯಕತೆಯ ಸಮಿತಿ ವಜಾಮಾಡಿ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು. ಶುದ್ರತಪಸ್ವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿರು ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭಗತ್‍ಸಿಂಗ್, ನಾರಾಯಣಗುರು, ಟಿಪ್ಪು ಕುರಿತ ಪಾಠಗಳು, ಸಾರಾ ಅಬೂಬಕರ್, ಪಿ.ಲಂಕೇಶ್, ಕೆ.ನೀಲಾ ಮುಂತಾದ ಪ್ರಗತಿಪರ, ಜೀವಪರ ಬರಹಗಾರರ ಬರಹಗಳನ್ನು ತೆಗೆದು ಅಲ್ಲಿ ಕೋಮುವಾದಿ ಸನಾತನಿ ಹೆಡಗೇವಾರ್, ಬನ್ನಂಜೆ ಗೋವಿಂದಾಚಾರ್ಯ, ಅವಧಾನಿ ಗಣೇಶ್ ಮತ್ತು ದ್ವೇಷ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯಂತಹವರ ಬರಹಗಳನ್ನು ಸೇರಿಸಿ ಇಡೀ ಪಠ್ಯಪುಸ್ತಕಗಳನ್ನು ‘ಮನುಸ್ಮøತಿ’ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ಕುವೆಂಪು ಬರೆದಿರುವ ನಾಡಗೀತೆಯನ್ನು ಅಣಕಿಸಿ ಟ್ರೋಲ್ ಮಾಡಿ ಕನ್ನಡ ನಾಡಿಗೆ, ಕನ್ನಡ ಶೂದ್ರ ಮನಸ್ಸುಗಳಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥರೆಂಬ “ರೋಗಿಷ್ಟ”ನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಪರಿಷ್ಕೃತ ಪಾಠಗಳನ್ನು ಕೈಬಿಡಬೇಕು. ತಡಮಾಡಿದರೆ ಈ ಚಳವಳಿ ರಾಜ್ಯವ್ಯಾಪಿ ಹರಡಿಕೊಳ್ಳಲಿದೆ ಎಂದು ಅವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಂತಕರಾದ ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಹುಲ್ಕೆರೆ ಮಹದೇವ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಪ್ರಾಂತ ರೈತಸಂಘದ ಟಿ.ಯಶವಂತ, ಎನ್.ಎಲ್.ಭರತ್‍ರಾಜ್, ನಾರಾಯಣ್ ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಎಲ್.ಸಂದೇಶ್, ವಕೀಲರಾದ ಚೀರನಹಳ್ಳಿ ಲಕ್ಷ್ಮಣ್, ಬಿ.ಟಿ.ವಿಶ್ವನಾಥ್, ರಾಮಯ್ಯ, ಮುಸ್ಲಿಂ ಒಕ್ಕೂಟದ ಮುಹಮ್ಮದ್ ತಾಹೇರ್, ರೈತಸಂಘದ ಹುರುಗಲವಾಡಿ ಉಮೇಶ್, ಕನ್ನಡ ಸೇನೆಯ ಎಚ್.ಸಿ.ಮಂಜುನಾಥ್, ಕರವೇ ಎಚ್.ಡಿ.ಜಯರಾಂ, ದಸಂಸ ಎಂ.ವಿ.ಕೃಷ್ಣ, ಸಮಾನಮನಸ್ಕರ ವೇದಿಕೆಯ ಟಿ.ಡಿ.ನಾಗರಾಜು, ಮುಕುಂದ, ಟಿ.ಡಿ.ಬಸವರಾಜು, ಷಣ್ಮುಖೇಗೌಡ, ರಾಜೇಂದ್ರಪ್ರಸಾದ್, ಬೋರಪ್ಪ, ಸಂಜು ಕಲಾವಿದ ಸೋಮುವರದ, ಇತರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

“ನಾವು ಕುವೆಂಪು ಅನುಯಾಯಿಗಳು, ಟಿಪ್ಪು ಅನುಯಾಯಿಗಳು. ಇವತ್ತು ಮನುಸ್ಮøತಿಯ ಮರುರೂಪವಾಗಿರುವ ರೋಹಿತ್ ಚಕ್ರತೀರ್ಥನ ಪಠ್ಯವನ್ನು ಮಂಡ್ಯದಲ್ಲಿ ಸುಡ್ತಾ ಇದ್ದೇವೆ. ಇಲ್ಲಿ ಹಚ್ಚುತ್ತಿರುವ ಬೆಂಕಿ ಕಾಳ್ಗಿಚ್ಚಾಗುತ್ತದೆ ಎಂದು ನಾವು ಸರಕಾರಕ್ಕೆ ಎಚ್ಚರಿಸುತ್ತಿದ್ದೇವೆ.”

-ಟಿ.ಎಲ್.ಕೃಷ್ಣೇಗೌಡ, ಸಿಪಿಎಂ ಕಾರ್ಯದರ್ಶಿ.

“ನಾಡಗೀತೆಗೆ  ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥನನ್ನ ಕೂಡಲೇ ಬಂಧಿಸಬೇಕು. ಭಾರತ ದೇಶ ಯಾವುದೇ ಒಂದು ಕೋಮು, ಧರ್ಮಕ್ಕೆ, ಜಾತಿಗೆ ಮೀಸಲಾದ ದೇಶವಲ್ಲ. ಇದು ಬಹುಸಂಸ್ಕøತಿಯಲ್ಲಿ ಏಕತೆ ಸಾರುತ್ತಿರುವ ದೇಶ. ಒಂದು ಸೀಮಿತವಾದ ವರ್ಗ, ಜನಾಂಗ ಇಡೀ ರಾಷ್ಟ್ರದ ಬಹುಸಂಖ್ಯಾತ ಜನರನ್ನು ದಿಕ್ಕುತಪ್ಪಿಸುವ, ಅವಮಾನವ ಮಾಡುವಂತಹ ಕೆಲಸ ಮಾಡುತ್ತಿದೆ.”

-ಪ್ರೊ.ಜಿ.ಟಿ.ವೀರಪ್ಪ, ನಿವೃತ್ತ ಪ್ರಾಧ್ಯಾಪಕ.

“ಈ ಸರಕಾರದಲ್ಲಿ ರಾಜ್ಯಾಂಗದ ಪಾಠ ನಡೀತಾ ಇಲ್ಲ. ಪಂಚಾಂಗದ ಪಾಠಗಳನ್ನು ಹೇಳಿಕೊಡುವ ಕೆಲಸವನ್ನು ಸರಕಾರ ಮಾಡುತ್ತಾ ಇದೆ. ಈ ಸಾಂಕೇತಿಕ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ.”

-ಎಲ್.ಸಂದೇಶ್, ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News