ಪಠ್ಯದಲ್ಲಿ ಜನಾಂಗೀಯ ದ್ವೇಷ ಹುಟ್ಟುಹಾಕುವ ಪ್ರಯತ್ನ: ಡಾ.ಎಲ್.ಹನುಮಂತಯ್ಯ

Update: 2022-05-26 14:45 GMT

ಬೆಂಗಳೂರು, ಮೇ 26: ಕಾಂಗ್ರೆಸ್ ಸುಮಾರು 50 ವರ್ಷಕ್ಕಿಂತ ಹೆಚ್ಚು ಕಾಲ ಆಡಳಿತ ಮಾಡಿದೆ. ಯಾರ ಕಾಲದಲ್ಲೂ ಪಠ್ಯ ಪುಸ್ತಕಗಳು ವಿವಾದದ ಕೇಂದ್ರ ಬಿಂದುವಾಗಿರಲಿಲ್ಲ. ಬಿಜೆಪಿ ಬಂದ ನಂತರ ವಿವಾದ ಸೃಷ್ಟಿಯಾಗಲು ಏನು ಕಾರಣ? ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಶ್ನಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಠ್ಯಪುಸ್ತಕಗಳ ವಿಚಾರ ವಿಷಯ ತಜ್ಞರಿಗೆ ಬಿಡಬೇಕು. ಪಕ್ಷಗಳು ಇದಕ್ಕೆ ಹಸ್ತಕ್ಷೇಪ ಮಾಡಬಾರದು ಎಂದರು.

ಅವರು ಕೇವಲ ಚರಿತ್ರೆಯನ್ನು ಮಾತ್ರ ತಮ್ಮ ಮೂಗಿನ ನೇರಕ್ಕೆ ಬರೆಯುತ್ತಿದ್ದಾರೆ. ಈ ಪಠ್ಯದಲ್ಲಿ ಜನಾಂಗೀಯ ದ್ವೇಷ ಹುಟ್ಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಟಿಪ್ಪು, ಹೈದರಾಲಿ ವಿರುದ್ಧ ತಪ್ಪು ದೂಷಣೆ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಇವರ ಹೊರತಾಗಿ ರಾಜ್ಯದ ಇತಿಹಾಸವಿರುವುದಿಲ್ಲ ಎಂದು ಹನುಮಂತಯ್ಯ ಹೇಳಿದರು.

ಮಕ್ಕಳಿಗೆ ರಾಜ್ಯ, ದೇಶ ಹಾಗೂ ಪ್ರಪಂಚದ ಚರಿತ್ರೆ ಕಲಿಸಬೇಕು. ಒಂದು ಜನಾಂಗದ ಮೇಲೆ ತಪ್ಪು ಸಂದೇಶ ನೀಡುವ ವಿಚಾರ ಸೇರಿಸಬಾರದು. ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಏಕಮುಖವಾಗಿದ್ದು, ಆರೆಸ್ಸೆಸ್ ಚಿಂತನೆ ಇರುವ ಸಮಿತಿಯಾಗಿದೆ. ಈ ವಿಚಾರವನ್ನು ವಿಷಯ ತಜ್ಞರಿಗೆ ಬಿಟ್ಟು, ಸರಕಾರ ಈ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅವರು ಆಗ್ರಹಿಸಿದರು.

ಶಾಲೆ ಆರಂಭವಾಗಿದ್ದು, ಮಕ್ಕಳು ಓದುವ ವಿಚಾರವನ್ನು ವಿವಾದ ಮಾಡಿ ಅವರ ಭವಿಷ್ಯದ ಜತೆ ಆಟವಾಡಬಾರದು. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ, ಹಿಂದಿನ ವರ್ಷದ ಪಠ್ಯಪುಸ್ತಕ ಮುಂದುವರೆಸಬೇಕು. ಶಿಕ್ಷಣ ಸಚಿವ ನಾಗೇಶ್ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ದೇವನೂರ ಮಹಾದೇವ, ಡಾ.ಜಿ.ರಾಮಕೃಷ್ಣ ಪಠ್ಯಪುಸ್ತಕದಲ್ಲಿ ತಮ್ಮ ಲೇಖನ ಪ್ರಕಟಿಸಬಾರದು ಎಂದು ಹೇಳುತ್ತಿದ್ದಾರೆ. ಇದೇ ರೀತಿ ಎಲ್ಲರೂ ಕೇಳಿದರೆ ಮಕ್ಕಳಿಗೆ ಯಾವ ಸರಕಾರ ಯಾವ ಪಠ್ಯ ಓದಿಸುತ್ತದೆ. ಮಾಜಿ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರೇ ಇದು ಅವಿವೇಕದ ನಿರ್ಣಯ ಎನ್ನುತ್ತಿದ್ದಾರೆ ಎಂದು ಹನುಮಂತಯ್ಯ ಹೇಳಿದರು.

ಪಠ್ಯಪುಸ್ತಕಗಳ ಪರಿಷ್ಕರಣೆ ಅಗತ್ಯವಿರಲಿಲ್ಲ, ಮಾಡಲೇಬೇಕಾಗಿದ್ದರೆ ಆ ವಿಷಯದ ತಜ್ಞರನ್ನು ನೇಮಿಸಬೇಕಿತ್ತು. ವಿಷಯ ತಜ್ಞರಲ್ಲದ ಉಡಾಳರನ್ನು ನೇಮಿಸಬಾರದಿತ್ತು. ಭಗತ್ ಸಿಂಗ್, ನಾರಾಯಣ ಗುರುಗಳ ಪಠ್ಯವನ್ನು ತೆಗೆದಿದ್ದು, ಈಗ ಮತ್ತೆ ಅವರ ಪಠ್ಯವನ್ನು ಸೇರಿಸಿದ್ದಾರೆ. ಕುವೆಂಪು ಬಗ್ಗೆ ಬೇಜವಾಬ್ದಾರಿಯಿಂದ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈಗ ಇರುವುದು ಸುಳ್ಳು ಚರಿತ್ರೆ, ನಾವು ನೈಜ ಚರಿತ್ರೆ ಬರೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ, ಈ ಸುಳ್ಳು ಇತಿಹಾಸ ಬರೆದವರು ಯಾರು, ಯಾವಾಗ? ನೈಜ ಚರಿತ್ರೆ ಬರೆದವರು ಯಾರು? ಇದನ್ನು ಬಿಜೆಪಿಯವರು ಓದಿದ್ದಾರಾ? ಎಂದು ಪ್ರಶ್ನಿಸಿದರು.

ಎನ್‍ಸಿಆರ್‍ಟಿಗೆ ಮೋದಿ ಅನೌಪಚಾರಿಕ ಆದೇಶ ನೀಡಿ ಹಿಂದೂ ಧರ್ಮದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದರು. ಅದರ ಭಾಗವಾಗಿ ನಾಗೇಶ್ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಲು ಮುಂದಾಗಿದ್ದಾರೆ. ಭಗವದ್ಗೀತೆ ಸಂವಿಧಾನಕ್ಕಿಂತ ದೊಡ್ಡ ಗ್ರಂಥ ಎಂದು ಬಿಜೆಪಿಯವರು ಹೇಳಿದರು. ಅದರ ಭಾಗವಾಗಿ ಸಂವಿಧಾನದಲ್ಲಿ ಜಾತ್ಯತೀತ ಅಂಶ ತೆಗೆಯುತ್ತೇವೆ. ನಾವು ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು ಎಂದು ಚಂದ್ರಶೇಖರ್ ಹೇಳಿದರು.

ಪಠ್ಯ ಪರಿಷ್ಕರಣ ಸಮಿತಿಯಲ್ಲಿರುವ 10 ಸದಸ್ಯರಲ್ಲಿ 9 ಮಂದಿ ಬ್ರಾಹ್ಮಣ ಸಮುದಾಯದವರು. ಈ ಸಮಿತಿಯಲ್ಲಿ ಯಾಕೆ ದಲಿತರನ್ನು ಸೇರಿಸಲಿಲ್ಲ? ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯವನ್ನಾದರೂ ಕೊಡಬೇಡವೇ? ತಮಗೆ ಅನ್ಯಾಯವಾಗಿರುವ ವಿಚಾರವಾಗಿ ದಲಿತರೇ ಹೇಳಬೇಕಲ್ಲವೇ? ಇದನ್ನು ಬ್ರಾಹ್ಮಣರು ಹೇಳುತ್ತಾರಾ? ಈ ಸಮಿತಿಯಲ್ಲಿ ಯಾವ ತಜ್ಞರಿದ್ದಾರೆ? ಒಬ್ಬ ವಿಜ್ಞಾನಿಯನ್ನು ಹೊಂದಿದ್ದಾರಾ? ಅತ್ಯುತ್ತಮ ಶಿಕ್ಷಕರು ಸಮಿತಿಯಲ್ಲಿ ಇದ್ದಾರಾ? ಎಂದು ಚಂದ್ರಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News