ವಿಶ್ವವಾಣಿ ಪತ್ರಿಕೆ ಅಂಕಣದಲ್ಲಿ ಶೃಂಗೇರಿ ಶ್ರೀಗಳಿಗೆ ಅಪಮಾನ ಆರೋಪ: ಕ್ಷಮೆಯಾಚನೆಗೆ ಬ್ರಾಹ್ಮಣ ಮಹಾಸಭಾ ಒತ್ತಾಯ

Update: 2022-05-26 16:14 GMT

ಚಿಕ್ಕಮಗಳೂರು, ಮೇ 26: ವಿಶ್ವವಾಣಿ  ಪತ್ರಿಕೆಯ ಲೇಖನದ ಅಂಕಣವೊಂದರಲ್ಲಿ ವಿಷಯವನ್ನು ಪರಿಷ್ಕರಣೆಗೆ ಒಳಪಡಿಸದೆ ಶೃಂಗೇರಿ ಪೀಠದ ಶ್ರೀಗಳನ್ನು ವಿಶಿಷ್ಟ ತಲೆಬರಹದ ಮೂಲಕ ಅವಹೇಳನ ಮಾಡಿರುವ ಪತ್ರಿಕೆ ಸಂಪಾದಕರು ಬೇಷರತ್ ಕ್ಷಮೆಯಾಚಿಸಬೇಕು. ಸರಕಾರ ಪತ್ರಿಕೆ ಹಾಗೂ ಸಂಪಾದಕರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.

ಗುರುವಾರ ಅಪರ ಜಿಲ್ಲಾಧಿಕಾರಿ ಬಿ.ರೂಪಾ ಅವರಿಗೆ ಮನವಿ ಸಲ್ಲಿಸಿದ ಬಳಿಕ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಕಳೆದ ಮೇ 21ರಲ್ಲಿ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಜಯವೀರಸಂಪತ್‍ಗೌಡ ಅವರು ಬರೆದಿರುವ ಲೇಖನವನ್ನು ಸರಿಯಾಗಿ ಪರಿಷ್ಕರಣೆ ಮಾಡದೇ ನೇರವಾಗಿ ಮುದ್ರಣಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸ್ವತಃ ಲೇಖಕರೇ ಒಪ್ಪಿಕೊಂಡಿದ್ದಾರೆ. ಮುಖ್ಯ ವಿಷಯದಲ್ಲಿ ಶ್ರೀಗಳನ್ನು ಘನತೆ ಗೌರವದಿಂದ ಸಂಬೋಧಿಸಿ ಅತ್ಯಂತ ನಾಜೂಕಿನಿಂದ ಟೀಕಿಸಿ ಅವಮಾನ ಮಾಡಲಾಗಿದೆ. ಪೊಲೀಸ್ ಠಾಣೆಗೆ ಶಾರದ ಪೀಠದ ಶ್ರೀಗಳು ಪಾದ ಬೆಳೆಸುವುದು ಅಂದರೇನು? ಎಂದು ತಲೆಬರಹ ನೀಡಿ ಸಾಮಾನ್ಯ ಜನರಲ್ಲಿ ಗೊಂದಲ ಮೂಡಿಸಿ, ಭಕ್ತರಲ್ಲಿ ಅನುಮಾನ ಉಂಟಾಗುವಂತೆ ಮಾಡಲಾಗಿದೆ. ಪೀಠದ ಬಗ್ಗೆ ಅಸಹನೆ ಉಂಟು ಮಾಡುವಂತೆ ಮಾಡಲಾಗಿದೆ. ತೀವ್ರ ಟೀಕೆಗೆ ಗುರಿಯಾದ ಬಳಿಕ ಲೇಖಕರು ಕ್ಷಮೆ ಯಾಚಿಸಿದ್ದಾರೆ. ಆದರೆ ಯಾವುದೇ ಪರಿಷ್ಕರಣೆಯಾಗದೆ ಲೇಖನ ಮುದ್ರಣಕ್ಕೆ ಹೋಗಿರುವುದು ಸಂಪಾದಕರ ದುರಾಹಂಕಾರ, ಹಾಗೂ ಬೇಜವಾಬ್ದಾರಿಯಾಗಿದೆ, ಆದ್ದರಿಂದ ಶ್ರೀಗಳು ಇರುವಲ್ಲಿಗೆ ಸಂಪಾದಕರು ತೆರಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಠಾಣೆ ಕಾರ್ಯಾಂಗದ ಒಂದು ಅಂಗವಾಗಿದೆ. ಅಲ್ಲಿಗೆ ಸಭ್ಯರು ಹೋಗಬಾರದ ಸ್ಥಳ ಎಂದು ಲೇಖಕರು ಹಾಗೂ ಸಂಪಾದಕರು ತೀರ್ಮಾನಿಸಿದಂತಿದೆ, ಈ ಮೂಲಕ ಆರಕ್ಷಕರನ್ನು ಅಪಮಾನಗೊಳಿಸಲಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿ ಕೆ.ಎಲ್.ಶ್ರೀಧರ್, ಖಜಾಂಚಿ  ಬಿ.ಸಿ.ಜಯರಾಮ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News