‘ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘ'ಗಳ ರಚನೆಗೆ ಒಂದು ತಿಂಗಳು ಗಡುವು: ಸಚಿವ ಡಾ.ನಾರಾಯಣಗೌಡ

Update: 2022-05-26 16:31 GMT

ಬೆಂಗಳೂರು, ಮೇ 26: ಒಂದು ತಿಂಗಳಲ್ಲಿ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳ ರಚಿಸಿ ನೋಂದಣಿ ಮಾಡಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು. 

ಗುರುವಾರ ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಳೆದ ವರ್ಷ ಪ್ರಗತಿಯಲ್ಲಿದ್ದ ಯೋಜನೆಗಳು, ಈ ವರ್ಷ ಬಜೆಟ್‍ನಲ್ಲಿ ಘೋಷಿಸಲಾದ ಯೋಜನೆಗಳ ಅನುಷ್ಠಾನ ಕುರಿತು ಅವರು ಪ್ರಗತಿ ಪರಿಶೀಲಿಸಿದರು. 

ಈ ವರ್ಷದ ಬಜೆಟ್‍ನಲ್ಲಿ ಇಲಾಖೆಯಿಂದ 12 ಯೋಜನೆಗಳನ್ನು ಘೋಷಿಸಲಾಗಿದ್ದು, ಈ ಪೈಕಿ ಈಗಾಗಲೇ 8 ಯೋಜನೆಗಳಿಗೆ ಸರಕಾರದ ಆದೇಶ ಹೊರಡಿಸಲಾಗಿದೆ. ಉಳಿದಿರುವ ಯೋಜನೆಗಳಿಗೂ ಶೀಘ್ರದಲ್ಲೇ ಆದೇಶ ಹೊರಡಿಸುವಂತೆ ನಾರಾಯಣಗೌಡ ಸೂಚಿಸಿದರು.

ಸ್ತ್ರೀ ಶಕ್ತಿ ಗುಂಪುಗಳ ರೀತಿಯಲ್ಲೇ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಸಾವಿರ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಬಜೆಟ್‍ನಲ್ಲಿ ಘೋಷಿಸಲಾಗಿದೆ. ಕೂಡಲೇ ಯುವ ಸಂಘಗಳನ್ನು ರಚಿಸಿ, ನೋಂದಣಿ ಮಾಡಿಸುವಂತೆ ಸೂಚಿಸಿದ ಅವರು, ಸ್ವಾಮಿ ವಿವೇಕಾನಂದ ಯುವ ಸ್ವಸಹಾಯಗಳ ರಚನೆ, ಪ್ರೋತ್ಸಾಹ ಧನ, ಉದ್ದೇಶದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು. 

ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ದತ್ತು ಪಡೆದಿರುವ ಕ್ರೀಡಾಪಟುಗಳಿಗೆ ಮೊದಲ ಹಂತದ ಹಣ ಬಿಡುಗಡೆಯಾಗಿದ್ದು, ಉಳಿದಿರುವ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಕ್ರೀಡಾಪಟುಗಳ ತರಬೇತಿ, ಪ್ರಗತಿ ಕುರಿತು 15 ದಿನಗಳಿಗೊಮ್ಮೆ ವರದಿ ನೀಡುವಂತೆ ಅಧಿಕಾರಿಗಳಿಗೆ ನಾರಾಯಣಗೌಡ ಸೂಚಿಸಿದರು.

ಕಟ್ಟಡಗಳನ್ನು ತೆರವುಗೊಳಿಸಿ: ಜಕ್ಕೂರು ಸರಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ನಡೆಯುತ್ತಿರುವ ಪೈಲಟ್ ತರಬೇತಿ ಬಗ್ಗೆ ನಾರಾಯಣಗೌಡ ಮಾಹಿತಿ ಪಡೆದುಕೊಂಡರು. ಜಕ್ಕೂರು ವೈಮಾನಿಕ ತರಬೇತಿ ಶಾಲೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ 9 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೂಡಲೇ ಅಂತಿಮ ಹಂತದ ನೋಟಿಸ್ ನೀಡಿ, ಕಟ್ಟಡಗಳನ್ನು ತೆರವು ಮಾಡುವಂತೆ ಆದೇಶಿಸಿದರು. 

ಅಮೃತ ಸಮುದಾಯ ದತ್ತು ಯೋಜನೆ ಅನುಷ್ಠಾನ ಪ್ರಗತಿ, ಕ್ರೀಡಾ ಅಂಕಣ ಯೋಜನೆ ಅನುಷ್ಠಾನ, ವಿಜಯಪುರ ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳ ಕುರಿತು ನಾರಾಯಣಗೌಡ ಪ್ರಗತಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News