ಜನರ ಹಕ್ಕುಗಳ ಬಗ್ಗೆ ಧ್ವನಿಯೆತ್ತುವವರ ವಿರುದ್ಧ ದೇಶದ್ರೋಹದ ಆರೋಪ: ನ್ಯಾ. ಚಂದ್ರು ವಿಷಾದ

Update: 2022-05-27 18:15 GMT
photo -twitter

ದಾವಣಗೆರೆ: ನೊಂದವರಿಗೆ ನ್ಯಾಯಾಂಗದಿಂದ ನ್ಯಾಯ ಸಿಗಬಹುದೆಂಬ ಕೊನೆಯಾಸೆ ಜನಸಾಮಾನ್ಯರದಾಗಿತ್ತು. ಆದರೆ, ಈಗ ಅದು ಸಹ ಕಳೆದು ಹೋಗಿದೆ ಎಂದು ಮದರಾಸ್ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಬೇಸರ ವ್ಯಕ್ತಪಡಿಸಿದರು.

ನಗರದ ತಾಜ್ ಪ್ಯಾಲೇಸ್‍ನಲ್ಲಿ ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗ ಸಂಯುಕ್ತಾಶ್ರಯಲ್ಲಿ ಶುಕ್ರವಾರದಿಂದ `ಸ್ವಾತಂತ್ರ್ಯ-75: ನೆಲದ ದನಿಗಳು ಗಳಿಸಿದ್ದೇನು? ಕಳಕೊಂಡಿದ್ದೇನು?' ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ 8ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು.

ಕೋರ್ಟುಗಳಿಗೆ ಜನರ ಪರವಾಗಿ ಮಧ್ಯಪ್ರವೇಶಿಸಲು ಸೆಕ್ಷನ್ 227, 334 ಸೇರಿದಂತೆ  ಅನೇಕ ಕಾಯ್ದೆಗಳಿವೆ. ಆದರೆ, ಅದನ್ನು ಬಳಸಲು ತಯಾರಿಲ್ಲ. ಮಾನವ ಹಕ್ಕುಗಳ ರಕ್ಷಣೆಗೆ ಬರಬೇಕಾದ ಕೋರ್ಟುಗಳು ಏನು ಮಾಡುತ್ತಿವೆ? ಎಂದು ಪ್ರಶ್ನಿಸಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸಿದ ನರೇಂದ್ರ ಧಾಬೋಲ್ಕರ್, ಗೋವಿಂದ್ ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಕೊಂದ ಆರೋಪಿಗಳನ್ನು ದೇಶದ ನ್ಯಾಯ ವ್ಯವಸ್ಥೆಗೆ ಕಟಕಟೆಗೆ ತಂದುನಿಲ್ಲಿಸಲಾಗಿಲ್ಲ ಎಂದು ವಿಷಾದಿಸಿದರು.

ಪ್ರಸ್ತುತ ದೇಶದ್ರೋಹದ ಕಾನೂನು ದುರುಪಯೋಗ ಆಗುತ್ತಿದೆ.  ಜನರ ಹಕ್ಕುಗಳ ಬಗ್ಗೆ ಮಾತನಾಡುವವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಈಗ ಕರ್ನಾಟಕವು ಒಂದು ಪ್ರಯೋಗಶಾಲೆಯಾಗಿದೆ ಎಂದು ಆರೋಪಿಸಿದರು.

ಪ್ರಾಸ್ತಾವಿಕ ಮಾತನಾಡಿದ ಬಿ.ಶ್ರೀನಿವಾಸ್, ಇಂದಿನಿಂದ ಆರಂಭವಾಗಿರುವ ಮೇ ಸಾಹಿತ್ಯ ಮೇಳವು ದಲಿತರ, ದಮನಿತರ ಧ್ವನಿಯಾಗಿದೆ. ನಮಗೆ ನಾಳೆಯೇ ಬದಲಾವಣೆ ಮಾಡುತ್ತೇವೆ ಎಂಬ ಭ್ರಮೆ ಇಲ್ಲ. ಕೋಮುವಾದದ ಕತ್ತಲೆಯನ್ನು ಓಡಿಸುವ ಮಿಣಿಕು ದೀಪವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ.ಸಾಯಿನಾಥ್, ದೆಹಲಿಯ ಹೋರಾಟಗಾರ್ತಿ ಕವಿತಾ ಕೃಷ್ಣನ್, ಮಂಗಳೂರಿನ ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ ದಿಕ್ಸೂಚಿ ಮಾತುಗಳನ್ನಾಡಿದರು. ಡಾ.ಎಂ.ಜಿ. ಈಶ್ವರಪ್ಪ, ಐವನ್ ಡಿಸಿಲ್ವಾ, ಡಿ.ಬಿ ರಜಿಯಾ, ಅಶೋಕ್ ಬರಗುಂಡಿ, ಎಲ್.ಎಚ್. ಅರುಣಕುಮಾರ್ ಉಪಸ್ಥಿತರಿದ್ದರು. ಎಚ್.ಎಸ್. ಅನುಪಮಾ ನಿರೂಪಿಸಿದರು. ಇಪ್ಟಾ ಕಲಾವಿದರು ಮತ್ತು ದಲಿತ ಕಲಾ ಮಂಡಳಿ ಕಲಾವಿದರು ಹೋರಾಟದ ಹಾಡುಗಳನ್ನು ಹಾಡಿದರು.

---------------------------

ನಾಗಪುರದಿಂದ ಆಮದು ಮಾಡಿಕೊಂಡ ಜನರು ಎಲ್ಲ ಕಡೆಯೂ ಕೂತಿದ್ದು, ಅದರ ಪರಿಣಾಮವನ್ನು ನಾವು ಈಗ ಎಲ್ಲ ಕಡೆಯು ಎದುರಿಸುತ್ತಿದ್ದೇವೆ. ಬಿಜೆಪಿ ಮತ್ತು ಸಂಘಪರಿವಾರದ ಮೊದಲ ಅಜೆಂಡಾ ಶಿಕ್ಷಣದ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ. ಹೀಗಾಗಿಯೇ, ಶಿಕ್ಷಣದ ಕೇಸರೀಕರಣಕ್ಕೆ ಮುಂದಾಗಿದ್ದು, ಈ ಕಾರಣಕ್ಕಾಗಿಯೇ ಭಗತ್‍ಸಿಂಗ್,  ಪೆರಿಯಾರ್ ಮತ್ತಿತರರನ್ನು ಪಠ್ಯದಿಂದ ಹೊರಗೆ ಇಡಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಆರೋಪಿಸಿದರು.

ಸಮಸ್ಯೆಯೇ ಅಲ್ಲದ ಹಲಾಲ್, ಹಿಜಾಬ್, ಆಜಾನ್‍ಗಳನ್ನು ಮುನ್ನೆಲೆಗೆ ತಂದು ಸಾಮರಸ್ಯವನ್ನು ಹಾಳುಗೆಡವಲಾಗುತ್ತಿದೆ. ಸಮವಸ್ತ್ರದ ಹೆಸರಿನಲ್ಲಿ ಕೆಲ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆದಿದೆ. ನಾವು ಈ ದೇಶದಲ್ಲಿ ತನ್ನ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸುವ ಪ್ರತಿ ವ್ಯಕ್ತಿಗೂ ಜೈಲಾಗುವ ಸಾಧ್ಯತೆಯ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News