ರಾಜ್ಯ ಪಕ್ಷಗಳ ಆದಾಯ: ಡಿಎಂಕೆಗೆ ಅಗ್ರಸ್ಥಾನ

Update: 2022-05-28 02:04 GMT
 ತಮಿಳುನಾಡು ಸಿಎಂ ಸ್ಟಾಲಿನ್ (PTI) 

ಹೈದರಾಬಾದ್: ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ 31 ಪ್ರಾದೇಶಿಕ ಪಕ್ಷಗಳ 2020-21ನೇ ಸಾಲಿನ ಆದಾಯ ಮತ್ತು ಖರ್ಚಿನಲ್ಲಿ ಅಗ್ರಸ್ಥಾನದಲ್ಲಿದೆ ಎನ್ನುವುದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ಶುಕ್ರವಾರ ಬಹಿರಂಗಪಡಿಸಿದೆ.

ಸ್ಟಾಲಿನ್ ನೇತೃತ್ವದ ಪಕ್ಷ 150 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದರ ವೆಚ್ಚ 218 ಕೋಟಿ ರೂಪಾಯಿಗಳು. ಡಿಎಂಕೆ ಆದಾಯ ಏರಿಕೆ ಇತರ ಪಕ್ಷಗಳಿಗಿಂತ ಅಧಿಕವಾಗಿದ್ದು, ಈ ಪಕ್ಷದ ಆದಾಯ 85 ಕೋಟಿ ರೂಪಾಯಿ ಹೆಚ್ಚಿದೆ. ಉಳಿದಂತೆ ಜೆಡಿಎಸ್ ಹಾಗೂ ವೈಎಸ್‍ಆರ್ ಕಾಂಗ್ರೆಸ್ ನಂತರದ ಸ್ಥಾನಗಳಲ್ಲಿವೆ.

ದೇಶದ 31 ಪ್ರಾದೇಶಿಕ ಪಕ್ಷಗಳ ಪಟ್ಟು ಆದಾಯ 2021ನೇ ಹಣಕಾಸು ವರ್ಷದಲ್ಲಿ 529 ಕೋಟಿ ಆಗಿದೆ. ಡಿಎಂಕೆ ಈ ಪೈಕಿ ಸಿಂಹಪಾಲು ಹೊಂದಿದ್ದು, ಪಕ್ಷದ ಆದಾಯ ಒಟ್ಟು ಆದಾಯದ ಶೇಕಡ 28ರಷ್ಟಾಗಿದೆ. ವೈಎಸ್‍ಆರ್ ಕಾಂಗ್ರೆಸ್ 108 ಕೋಟಿ ರೂಪಾಯಿ ಆದಾಯ ಹೊಂದಿದ್ದು, ಇದರ ಪಾಲು ಶೇಕಡ 20ರಷ್ಟು ಹಾಗೂ ಶೇಕಡ 13ರಷ್ಟು ಅಥವಾ 73 ಕೋಟಿ ಆದಾಯ ಹೊಂದಿದ ಬಿಜೆಡಿ ಮೂರನೇ ಸ್ಥಾನದಲ್ಲಿದೆ.

ಎಲೆಕ್ಟೊರಲ್ ಬಾಂಡ್ ಮೂಲಕ 2020-21ನೇ ಅವಧಿಯಲ್ಲಿ 250.60 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಿರುವುದಾಗಿ ಪ್ರಾದೇಶಿಕ ಪಕ್ಷಗಳು ಘೋಷಿಸಿವೆ.

ಐದು ಪ್ರಾದೇಶಿಕ ಪಕ್ಷಗಳು ಗರಿಷ್ಠ ವೆಚ್ಚವನ್ನೂ ಮಾಡಿದ್ದು, ಡಿಎಂಕೆ (218.49 ಕೋಟಿ), ತೆಲುಗುದೇಶಂ ಪಕ್ಷ (ರೂ. 54.769 ಕೋಟಿ), ಎಐಎಡಿಎಂಕೆ (ರೂ. 42.37 ಕೋಟಿ), ಜೆಡಿಯು (24.35 ಕೋಟಿ) ಮತ್ತು ಟಿಆರ್‍ಎಸ್ (22.35 ಕೋಟಿ) ಪಾಲು ಒಟ್ಟು ಖರ್ಚಿನ ಶೇಕಡ 82ರಷ್ಟಾಗಿವೆ ಎಂದು ವರದಿ ವಿವರಿಸಿದೆ. ವೈಎಸ್‍ಆರ್ ಕಾಂಗ್ರೆಸ್‍ನಲ್ಲಿ ಗರಿಷ್ಠ (99%) ಖರ್ಚಾಗದ ಹಣ ಇದ್ದು, ಬಿಜೆಡಿ (90%), ಎಐಎಂಐಎಂ (88)%) ನಂತರದ ಸ್ಥಾನಗಳಲ್ಲಿವೆ. ಟಿಡಿಪಿ 51 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಟಿಆರ್‍ಎಸ್ 22 ಕೋಟಿ ವೆಚ್ಚ ಮಾಡಿದ್ದಾಗಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News