ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ, ಉಡಾಫೆ ಮಾತಿಗೆ ಉತ್ತರಿಸಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್

Update: 2022-05-28 16:27 GMT
ಯಶವಂತರಾಯಗೌಡ ಪಾಟೀಲ್-ಶಾಸಕ 

ವಿಜಯಪುರ, ಮೇ 28: ‘ಕಾಂಗ್ರೆಸ್ ಪಕ್ಷ ನನಗೆ ಅಧಿಕಾರ, ಗೌರವ ಸೇರಿದಂತೆ ಎಲ್ಲವನ್ನು ಕೊಟ್ಟಿದೆ. ಹೀಗಿರುವಾಗ ಪಕ್ಷವನ್ನು ತೊರೆಯುವ ಅಥವಾ ಬಿಜೆಪಿ ಸೇರ್ಪಡೆ ಆಗುವಂತಹ ಸಂದರ್ಭವೇ ಉದ್ಬವಿಸುವುದಿಲ್ಲ' ಎಂದು ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರದ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಆಧಾರ ರಹಿತ ಹೇಳಿಕೆ ಕೊಡುವವರಿಗೆ ನಾನು ಉತ್ತರ ನೀಡುವುದಿಲ್ಲ. ಅವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೇ ಇಲ್ಲ. ಮೂರು ವರ್ಷಗಳಿಂದ ಅವರು ನೀಡುತ್ತಿರುವ ಹೇಳಿಕೆಗಳಲ್ಲಿ ಒಂದಾದರೂ ಸತ್ಯವಾಗಿದೇಯೇ?' ಎಂದು ಬಿಜೆಪಿ ಶಾಸಕ ಯತ್ನಾಳ್ ಹೆಸರು ಉಲ್ಲೇಖಿಸಿದೆ ಟೀಕಿಸಿದರು.

‘ರಾಜಕಾರಣದಲ್ಲಿ ಯಾರೂ ಶುದ್ಧಹಸ್ತರಾಗಿಸಲು ಸಾಧ್ಯವಿಲ್ಲ. ಆದರೆ, ಜನತೆ ಪ್ರಜ್ಞಾವಂತರಿದ್ದಾರೆ. ಅದರಲ್ಲೂ ನಗರದ ಜನತೆ ಎಂತಹವರನ್ನು ಆರಿಸಿ ಕಳುಹಿಸಿದ್ದೇವೆ ಎಂಬ ಭಾವನೆ ತಳೆದಿದ್ದಾರೆ' ಎಂದು ಲೇವಡಿ ಮಾಡಿದ ಯಶವಂತರಾಯಗೌಡ ಪಾಟೀಲ್, ‘ಬೇರೊಬ್ಬರ ಅಭಿಪ್ರಾಯ ಬಿಜೆಪಿ ಶಾಸಕರ ಬಾಯಲ್ಲಿ ಪ್ರಕಟವಾಗುತ್ತಿದೆ ಎಂಬ ಅನುಮಾನವಿದೆ. ಯಾರೋ ತಲೆಗೆ ತುರುಕಿದ ವಿಷಯವನ್ನು ಹೇಳುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಬಾಬಾನಗರದ ಜನರ ಆಹ್ವಾನದ ಮೇರೆಗೆ ಅಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ನಾನೂ ಮತ್ತು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ್ ಭಾಗವಹಿಸಿದ್ದೆವು. ಶಿವಾನಂದ ಪಾಟೀಲರು ಆ ಕ್ಷೇತ್ರದ ಮಾಜಿ ಶಾಸಕರಿರುವುದರಿಂದ ಜನರಿಗೆ ಅವರ ಮೇಲೆ ವಿಶೇಷ ಅಭಿಮಾನ, ನನ್ನ ಮೇಲೆ ಪ್ರೀತಿ ಅವರಿಗಿದೆ. ಹೀಗಾಗಿ ಆಹ್ವಾನಿಸಿದ್ದರು. ನಮ್ಮ ಭೇಟಿಗೆ ವಿಶೇಷ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಅವರು ಕೋರಿದರು.

‘ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ. ಹೀಗಾಗಿ ಬದಲಾವಣೆಯಾಗಬೇಕಿದೆ. ಪಕ್ಷ ಕೆಲವರ ಸ್ವತ್ತು ಆಗಬಾರದು, ಜನರ ನಾಡಿಮಿಡಿತ ಅರಿತು, ಕಾರ್ಯಕರ್ತರ ಭಾವನೆಗೆ ಸ್ಪಂದಿಸುವ ಕೆಲಸ ಆಗಬೇಕಿದೆ' ಎಂದ ಅವರು, ‘ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿಯಾದರೂ ಕ್ರಿಯಾಶೀಲವಾಗಿದೆ ಎಂದಾದರೆ ಅದು ಕರ್ನಾಟಕದಲ್ಲಿ. ವಿಪಕ್ಷವಾಗಿ ರಾಜ್ಯದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News