VIDEO - ವಿಧಾನಸೌಧದಲ್ಲಿ ಮಹಿಳೆಯರದ್ದೇ ದರ್ಬಾರ್!

Update: 2022-05-28 17:49 GMT
ವಂದಿತಾ ಶರ್ಮಾ |  ಕೆ.ಆರ್ ಮಹಾಲಕ್ಷ್ಮಿ |  ಎಂ ಕೆ ವಿಶಾಲಾಕ್ಷಿ

ಬೆಂಗಳೂರು: ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಅವರು ನೇಮಕಗೊಂಡಿದ್ದು,  ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000 ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006 ನೇ ಇಸವಿಯಲ್ಲಿ ಮಾಲತಿ ದಾಸ್ ಹಾಗೂ 2017 ನೇ ಇಸವಿಯಲ್ಲಿ ಕೆ. ರತ್ನ ಪ್ರಭ ಅವರು ಅಲಂಕರಿಸಿದ್ದರು.

ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ  ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ರಾಜ್ಯದ ಶಕ್ತಿ ಕೇಂದ್ರದ ಪ್ರಭಾವೀ ಸ್ಥಾನಗಳಲ್ಲಿರುವ ಮಹಿಳೆಯರಾಗಿ  ಹೊಸ ದಾಖಲೆ ಸ್ಥಾಪಿಸಲಿದ್ದಾರೆ.

ಕೆ. ರತ್ನ ಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದ ವಿಶೇಷ ದಾಖಲೆ ಬರೆದಿದ್ದರು. 

ವಂದಿತಾ ಶರ್ಮಾ ಪರಿಚಯ:

ಪಂಜಾಬ್‌ ಮೂಲದ ವಂದಿತಾ ಶರ್ಮಾ  ರಾಜ್ಯ ಐಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷೆಯಾಗಿದ್ದಾರೆ. ಸಮಾಜಶಾಸ್ತ್ರದಲ್ಲಿ ಪದವಿ ಹಾಗು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಂದಿತ ಅವರು ದಕ್ಷ ಅಧಿಕಾರಿ ಎಂದು ಹೆಸರಾದವರು. 36 ವರ್ಷಗಳ ಸೇವಾವಧಿಯಲ್ಲಿ ಜಿಲ್ಲಾಡಳಿತ, ಕಂದಾಯ, ಕೃಷಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸಹಿತ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಕೇಂದ್ರ ಸರ್ಕಾರದಲ್ಲಿ ಬಾಹ್ಯಾಕಾಶ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ವಂದಿತಾ ಅವರ ಪತಿ ಐಎಸ್‌ಎನ್‌ ಪ್ರಸಾದ್‌ ಕೂಡ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು,  ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ವಂದಿತಾ ಶರ್ಮಾ ಮುಖ್ಯ ಕಾರ್ಯದರ್ಶಿಯಾಗಿ ಇಡೀ ರಾಜ್ಯದ ಅಧಿಕಾರ ಶಾಹಿಯ ಚುಕ್ಕಾಣಿ ಹಿಡಿಯಲಿದ್ದಾರೆ. ವಂದಿತಾ ಅವರ ಅವಧಿ ಮುಂದಿನ ನವೆಂಬರ್‌ 2023 ರವರೆಗೆ ಇರಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News