UPSC ಪರೀಕ್ಷೆ: ಮೊದಲ ಪ್ರಯತ್ನದಲ್ಲೇ ಪಾಸ್ ಆದ ದಾವಣಗೆರೆಯ ಅವಿನಾಶ್ ಗೆ 31ನೇ ರ್‍ಯಾಂಕ್

Update: 2022-05-30 13:22 GMT
 ಅವಿನಾಶ್ ವಿ. ರಾವ್

ದಾವಣಗೆರೆ : ನಗರದ ಹೊಟೇಲ್ ಉದ್ಯಮಿ ವಿಠಲ್ ರಾವ್ ಮಗನಾದ  ಅವಿನಾಶ್ ವಿ. ರಾವ್ ಅವರು ಯುಪಿಎಸ್ಸಿ  ಪರೀಕ್ಷೆಯಲ್ಲಿ  ದೇಶಕ್ಕೆ 31ನೇ  ರ್‍ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ಹೋಟೆಲ್ ಉದ್ಯಮಿ ಆನಂದ ರಾವ್ ಮಗನಾದ ವಿಠಲ್ ರಾವ್ ಅವರ ಪುತ್ರ ಅವಿನಾಶ್ ವಿ. ರಾವ್ ಇದೇ ಪ್ರಥಮ ಬಾರಿಗೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದು, ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗುವುದರ ಮೂಲಕ ದಾವಣಗೆರೆಗೆ ಕೀರ್ತಿ ತಂದಿದ್ದಾರೆ.

ಮೊಮ್ಮಗನ ಈ ಸಾಧನೆಗೆ ಆನಂದ ರಾವ್ ಪ್ರತಿಕ್ರಿಯಿಸಿ,  'ನಾವು ಮೂಲತಃ ಕುಂದಾಪುರದವರು ನಾವು ಇಲ್ಲಿಗೆ ಬಂದು 60 ವರ್ಷವಾಗಿದೆ. ಬಡ ಕುಟುಂಬದಿಂದ ಬಂದಂತಹ ನಾವುಗಳು, ನನ್ನ ಮೊಮ್ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿರುವುದು ತುಂಬಾನೇ ಸಂತೋಷವಾಗಿದೆ. ಇದರ ಹಿಂದೆ ಮೊಮ್ಮಗನ ಶ್ರಮ ಹೆಚ್ಚಿದೆ. ಇವತ್ತು ನಮ್ಮ ಕುಟುಂಬಕ್ಕೆ ಅತ್ಯಂತ ಸಂತೋಷದ ದಿನವಾಗಿದೆ' ಎಂದು ಹೇಳಿದರು.

ತಂದೆ ವಿಠಲ್‍ರಾವ್ ಮಾತನಾಡಿ,  'ರ್‍ಯಾಂಕ್ ಬಂದಿರುವುದ ಹೆಮ್ಮೆಯ ವಿಷಯ.  ಬಹಳ ಕಷ್ಟಪಟ್ಟು ಓದಿದ್ದಾನೆ. ಅವನು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅವರ ತಂದೆಯಾಗಿ ನಮಗೆ ಬಹಳ ಹೆಮ್ಮೆಯಿದೆ. ವಿದೇಶಾಂಗ ವಿಷಯದ ಬಗ್ಗೆ ಬಹಳ ಆಸಕ್ತಿಯಿತ್ತು. ದೆಹಲಿಗೆ ತೆರಳಿ ಮೂರು ತಿಂಗಳು  ಇದರ ಬಗ್ಗೆ ಅಧ್ಯಯನ ನಡೆಸಿದ್ದಾನೆ. ಮೊದಲನಿಂದಲೂ  ಐಎಫ್‍ಎಸ್  ಮಾಡುವ ಆಸಕ್ತಿಯಿದೆ. ಅದರಂತೆ ಈಗ ಸಾಧನೆ ಮಾಡಿದ್ದಾರೆ' ಎಂದರು.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ನಲ್ಲಿ ಅಭ್ಯಾಸ ಮಾಡಿದ್ದಾರೆ. ಇದರಲ್ಲಿ ಗೋಲ್ಡ್ ಮೆಡಲ್ ಸಹ ಪಡೆದಿದ್ದಾರೆ. ಕ್ಲಾಟ್ ಪರೀಕ್ಷೆಯಲ್ಲಿ ದೇಶಕ್ಕೆ 19 ನೇ ರ್‍ಯಾಂಕ್  ಹಾಗೂ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ ಎಂದು ಮಾಹಿತಿ ನೀಡಿದರು.  

ತಾಯಿ ಸ್ಮಿತಾ ರಾವ್ ಮಾತನಾಡಿ, ಯುಪಿಎಸ್‍ಸಿ ರಾಜ್ಯಕ್ಕೆ ಪ್ರಥಮ ಬಂದಿರುವುದು ತುಂಬಾ ಖುಷಿಯಾಗಿದೆ. 1 ರಿಂದ 7 ನೇ ತರಗತಿಯವರೆಗೂ ನಗರದ ಬಾಪೂಜಿ ಶಾಲೆಯಲ್ಲಿ ಓದಿದ್ದಾನೆ. ನಂತರ 8 ,9,10 ನಗರದ ತೋಳುಹುಣಿಸೆಯಲ್ಲಿ ಅಭ್ಯಾಸ ಮಾಡಿದ್ದಾನೆ. ಅಲ್ಲಿನ ಪ್ರಾಚಾರ್ಯ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News