ವನ್ಯಜೀವಿ ಧಾಮದ ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ: ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದ ಹೈಕೋರ್ಟ್

Update: 2022-05-30 13:28 GMT

ಬೆಂಗಳೂರು, ಮೇ 30: ಉಡುಪಿ ಜಿಲ್ಲೆಯ ಸೋಮೇಶ್ವರ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಮತ್ತು ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಉಲ್ಲಂಘಿಸಿ ಯೂನಿಟಿ ರಾಕ್ ಇಂಡಸ್ಟ್ರೀಸ್ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದಕ್ಕೆ ನೀಡಲಾಗಿರುವ ಅನುಮತಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್, ಎರಡು ವಾರಗಳ ಕಾಲಾವಕಾಶ ನೀಡಿದೆ.

ಉಡುಪಿ ಜಿಲ್ಲೆಯ ಸಂಜೀವ್ ನಾಯ್ಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

2020ರ ಆ.28ರಂದು ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಉಲ್ಲಂಘಿಸಿ ಉಡುಪಿಯ ನಲ್ಕೂರು ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಯೂನಿಟಿ ರಾಕ್ ಇಂಡಸ್ಟ್ರೀಸ್‍ಗೆ ನೀಡಲಾಗಿರುವ ಗುತ್ತಿಗೆ ಅನುಮತಿ ಮತ್ತು ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಯೂನಿಟಿ ರಾಕ್ ಇಂಡಸ್ಟ್ರೀಸ್ ಕಾನೂನುಬಾಹಿರ ಗಣಿಗಾರಿಕೆಯಿಂದ ಸೋಮೇಶ್ವರ ವನ್ಯಜೀವಿ ಧಾಮದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹುಲಿ ಸೇರಿ ಹಲವು ಅಪರೂಪದ ವನ್ಯಜೀವಿಗಳು ವಾಸಿಸುತ್ತಿದ್ದು, ಅವುಗಳ ಬದುಕಿಗೆ ಕಂಟಕ ಉಂಟಾಗಿದೆ. ಅಲ್ಲದೆ, ಗಣಿಗಾರಿಕೆ ನಡೆಸಲು ಯೂನಿಟಿ ರಾಕ್ ಇಂಡಸ್ಟ್ರೀಸ್ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಮತ್ತು ಗಣಿಗಾರಿಕೆ ನಡೆಸದಂತೆ ನಿಬರ್ಂಧಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

ಅಕ್ರಮ ಗಣಿಗಾರಿಕೆ, ಕಟ್ಟಡ ನಿರ್ಮಾಣ ಕಲ್ಲುಗಳ ಸಂಗ್ರಹದ ಮೂಲಕ ನಲ್ಕೂರು ಗ್ರಾಮಸ್ಥರ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಮತ್ತು ಸೋಮೇಶ್ವರ ವನ್ಯಜೀವಿ ಧಾಮಕ್ಕೆ ಧಕ್ಕೆ ಉಂಟು ಮಾಡಿರುವ ಯೂನಿಟಿ ರಾಕ್ ಇಂಡಸ್ಟ್ರೀಸ್‍ಗೆ ಒಂದು ಕೋಟಿ ರೂ. ದಂಡ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ. ಅರ್ಜಿದಾರರ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ವಾದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News