ಶಿಕ್ಷಣ ಇಲಾಖೆಯ ಸಮಾರಂಭ ಬಹಿಷ್ಕರಿಸಿದ ಶಿಕ್ಷಣತಜ್ಞ ನಿರಂಜನಾರಾಧ್ಯ

Update: 2022-05-30 15:02 GMT

ಬೆಂಗಳೂರು, ಮೇ 30: ಶಿಕ್ಷಣ ಇಲಾಖೆಯು ಇತ್ತೀಚೆಗೆ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಹಾಗಾಗಿ ಅಭಿನಂದನಾ ಸಮಾರಂಭದಲ್ಲಿ ಪ್ರತಿಭಟನಾ ಸಂಕೇತವಾಗಿ ನಾನು ಭಾಗವಹಿಸುತ್ತಿಲ್ಲ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅವರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‍ಇಆರ್‍ಟಿ)ಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಶಿಕ್ಷಣ ಸಚಿವರ ಅಧ್ಯಕತೆಯಲ್ಲಿ ಜೂ.6ರಂದು ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭಕ್ಕೆ ಸಮುದಾಯದ ಭಾಗವಹಿಸುವಿಕೆಯಲ್ಲಿ ಉದಯೋನ್ಮುಖ ಬೆಳೆವಣಿಗೆಗಳ ಪೊಸಿಸನ್ ಪೇಪರ್ ತಯಾರಿಕೆಯ ತಂಡದ ಮುಖ್ಯಸ್ಥನಾಗಿ ನಿರಂಜನಾರಾಧ್ಯ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ ಎಂದು ಬಹಿಷ್ಕರಿಸಿ, ಸೂಕ್ತ ಕಾರಣಗಳನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿನ ಬೆಳೆವಣಿಗೆಗಳು ಮನಸ್ಸಿಗೆ ತುಂಬಾ ನೋವು ಮತ್ತು ಆಘಾತವನ್ನು ಉಂಟು ಮಾಡಿವೆ. ಹಿಜಾಬ್ ಹೆಸರಿನಲ್ಲಿ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ರೀತಿಯಲ್ಲಿ ಒಂದು ಸಮುದಾಯವನ್ನು ಸರಕಾರ ಗುರಿಯಾಗಿಸಿದೆ. ನ್ಯಾಯಾಲಯದ ಆದೇಶ ಒಂದು ರೀತಿಯಾದರೆ, ಇಲಾಖೆ ಅದನ್ನು ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಭಗತ್ ಸಿಂಗ್, ಮೂರ್ತಿರಾವ್, ಸಾರಾ ಅಬೂಬಕರ್ ಅವರ ಪಠ್ಯಗಳನ್ನು ಕೈ ಬಿಟ್ಟು ಸಂವಿಧಾನ ವಿರೋಧಿ ಹೆಡ್ಗೆವಾರ್ ಅವರ ಪಾಠಗಳನ್ನು ಸೇರಿಸಿ ಶಿಕ್ಷಣವನ್ನು ಕೋಮುವಾದೀಕರಣ ಮತ್ತು ಕೇಸರೀಕರಣಗೊಳಿಸುವ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಪ್ರಮಾಣೀಕರಿಸಿದ ಪಠ್ಯಕ್ರಮ ಚೌಕಟ್ಟು, ಸಂವಿಧಾನದ ಮೌಲ್ಯಗಳು ಮತ್ತು ಶಿಕ್ಷಣ ನೀತಿಯ ತತ್ವಗಳನ್ನು ಪರಿಪಾಲಿಸುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳು ಮಾನ್ಯ ಶಿಕ್ಷಣ ಸಚಿವರ ಮುಂದಾಳತ್ವದಲ್ಲಿ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ಹಾಗಾಗಿ ಅವರ ಅಧ್ಯಕತೆಯಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News