ರಾಜ್ಯದಲ್ಲಿ 10 ಮಹಿಳಾ ಪದವಿ ಕಾಲೇಜು ನಿರ್ಮಾಣ: ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ

Update: 2022-05-30 15:13 GMT

ಕಲಬುರಗಿ, ಮೇ 30: ರಾಜ್ಯ ವಕ್ಫ್ ಮಂಡಳಿಯಿಂದ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ ರಾಜ್ಯದ 10 ಕಡೆ ಮಹಿಳಾ ಪದವಿ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು. 

ನಗರದ ಕೆ.ಬಿ.ಎನ್.ಕಾಲೇಜು ಎದುರಿರುವ ಅಂಜುಮ್-ಎ-ತರಖ್ಖಿ ಉರ್ದು ಹಾಲ್‍ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯದ ಯುವಕ-ಯುವತಿಯರು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ವಕ್ಫ್ ಮಂಡಳಿಯಿಂದ ಆಧುನಿಕ ತಂತ್ರಜ್ಞಾನವುಳ್ಳ ತರಬೇತಿ ಕೇಂದ್ರವನ್ನು ಬೆಂಗಳೂರಿನಲ್ಲಿ 30 ಸಾವಿರ ಚದರ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ಉದ್ಯಮಿ ಝಿಯಾಉಲ್ಲಾ ಶರೀಫ್ ಅವರು ಈ ತರಬೇತಿ ಕೇಂದ್ರಕ್ಕಾಗಿ 15 ಕೋಟಿ ರೂ. ದೇಣಿಗೆ ನೀಡುತ್ತಿದ್ದಾರೆ. ಅಲ್ಲದೇ ತುಮಕೂರಿನ ಹಝ್ರತ್ ಮದಾರ್ ಶಾ ಮಕಾನ್ ಸಂಸ್ಥೆಯಲ್ಲಿ ಮಹಿಳಾ ಕಾಲೇಜು ಹಾಗೂ ವಸತಿ ನಿಲಯ ನಿರ್ಮಾಣಕ್ಕಾಗಿ ಸರಕಾರದಿಂದ 2.5 ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದು ಶಾಫಿ ಸಅದಿ ಹೇಳಿದರು.

ವಕ್ಫ್ ಮಂಡಳಿ ವತಿಯಿಂದ 6 ಅಂಶಗಳ ಕಾರ್ಯಕ್ರಮ ಕೈಗೊಂಡಿದ್ದು, ಹೊಸದಾಗಿ ನೋಂದಾಯಿಸಿದ ಆಸ್ತಿಗಳ 2ನೇ ಹಂತದ ಸರ್ವೆ ಕಾರ್ಯ ಮಾಡಲಾಗುವುದು. ಆಸ್ತಿಗಳ ಸಂರಕ್ಷಣೆಗಾಗಿ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿರಿಯ ವಕೀಲರೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು ವಕ್ಫ್ ಮಂಡಳಿಗೆ ಅಂದಾಜು 2 ಲಕ್ಷ ಕೋಟಿ ರೂ.ಗಳ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಮಂಡಳಿಯ ಅಧೀನದಲ್ಲಿಲ್ಲ. ಬೇರೆ ಬೇರೆ ಸಂಸ್ಥೆಗಳ ಅಧೀನದಲ್ಲಿದೆ. ಅವುಗಳನ್ನು ಶೀಘ್ರದಲ್ಲಿ ಲೆಕ್ಕ ಪರಿಶೋಧನೆ ಮಾಡಲಾಗುವುದು ಎಂದು ಶಾಫಿ ಸಅದಿ ಹೇಳಿದರು.

ವಕ್ಫ್ ಮಂಡಳಿ ಆಸ್ತಿಗಳಲ್ಲಿ ಕೇವಲ ಮದರಸಾ ಹಾಗೂ ಮಸೀದಿ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ನಿರ್ಮಾಣ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಲಾಗುವುದು. ವಕ್ಫ್ ಸಂಸ್ಥೆಗಳ ಮೂಲ ಆಸ್ತಿಗಳ ದಾಖಲೆಗಳ ಸಂರಕ್ಷಣೆ ಮತ್ತು ಗಣಕೀಕರಣ(ಡಿಜಿಟಲೈಸೇಷನ್), ವಕ್ಫ್ ಆಸ್ತಿಗಳ ಬಾಡಿಗೆ ನಿಯಮಗಳು 2014 ಮತ್ತು ತಿದ್ದುಪಡಿ-2019 ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. 

ಮಂಡಳಿ ವತಿಯಿಂದ ನೋಂದಾಯಿತ ಪೇಶ್ ಇಮಾಮ್‍ಗಳಿಗೆ 4,000 ರೂ. ಹಾಗೂ ಮುಅದ್ದೀನ್(ಮೌಝನ್)ಗಳಿಗೆ 3,000 ರೂ.ಗಳ ಗೌರವಧನ ನೀಡಲಾಗುತ್ತಿದೆ. ಒಟ್ಟು ರಾಜ್ಯದ 7 ಸಾವಿರ ಮಸೀದಿಗಳ 13,809 ಪೇಶ್ ಇಮಾಮ್ ಮತ್ತು ಮೌಝನ್‍ಗಳಿಗೆ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗಿನ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. 

ಬೆಂಗಳೂರಿನಲ್ಲಿರುವ ವಕ್ಫ್ ಮಂಡಳಿಯ ಕೇಂದ್ರ ಕಚೇರಿ ದಾರುಲ್ ಔಕಾಫ್ ಜೀರ್ಣೋದ್ಧಾರಕ್ಕಾಗಿ ಸರಕಾರ 2 ಕೋಟಿ ರೂ.ಅನುದಾನ ಮಂಜೂರು ಮಾಡಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿನ್ಗ್ ಅಪ್ಲಿಕೇಷನ್ಸ್ ಸೆಂಟರ್‍ರವರ ಸಹಭಾಗಿತ್ವದೊಂದಿಗೆ ಎಲ್ಲ ವಕ್ಫ್ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಸರ್ವೆಗೆ ಒಳಪಡಿಸಲಾಗುವುದು ಎಂದು ಶಾಫಿ ಸಅದಿ ತಿಳಿಸಿದರು.

ಚಿಂತಾಮಣಿಯಲ್ಲಿರುವ ದರ್ಗಾ ಹಝ್ರತ್ ಫಕೀ ಶಾ ವಲಿ ಮುರಗಮಲ್ಲಾ(ಅಮ್ಮಾ ಜಾನ್ ಬಾವಾ ಜಾನ್) ಸಂಸ್ಥೆಯನ್ನು ಪುನರ್ವಸತಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ 2 ಕೋಟಿ ರೂ.ಮಂಜೂರು ಮಾಡಿದೆ ಎಂದು ಅವರು ಹೇಳಿದರು.  ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಪದೋನ್ನತಿ: ಮೊದಲ ಬಾರಿಗೆ ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದ್ದು, ಇಬ್ಬರು ಅಧಿಕಾರಿಗಳಿಗೆ ವಿಭಾಗೀಯ ವಕ್ಫ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಬೆಳಗಾವಿ ಮತ್ತು ಮೈಸೂರು ವಿಭಾಗೀಯ ಕಚೇರಿ ಆರಂಭಿಸಲಾಗಿದೆ. 15 ವಕ್ಫ್ ನಿರೀಕ್ಷಕರಿಗೆ ವಕ್ಫ್ ಅಧಿಕಾರಿಯಾಗಿ, 7 ದ್ವಿತೀಯ ದರ್ಜೆ ಸಹಾಯಕರಿಗೆ ವಕ್ಫ್ ನಿರೀಕ್ಷಕರಾಗಿ ಮುಂಭಡ್ತಿ ನೀಡಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.

ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಸದಸ್ಯ ಜಿ.ಯಾಕೂಬ್, ಕೆ.ಎಂ.ಡಿ.ಸಿ ನಿರ್ದೇಶಕ ಸದ್ದಾಮ್ ಹುಸೇನ್ ವಜೀರಗಾಂವ್, ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷ ಖಾಜಾ ಹುಸೇನ್ ಅತನೂರ್, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಹಝ್ರತ್ ಅಲಿ ನದಾಫ್, ಸೈಯದ್ ಖಾದ್ರಿ ಸಾಬ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News