ದೇಶವನ್ನು ಕಾಡುತ್ತಿರುವ ಕಾಶ್ಮೀರ

Update: 2022-06-03 05:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಶ್ಮೀರದ ಪರಿಸ್ಥಿತಿ, ಬಾಣಲೆಯಿಂದ ಬೆಂಕಿಗೆ ಬಿದ್ದಂತಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತು ಹಾಕಿ, ಆ ರಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಸೇರಿಸಿಕೊಂಡೆವು ಎನ್ನುವ ಕೇಂದ್ರ ಸರಕಾರದ ಹೆಗ್ಗಳಿಕೆಯ ಮಾತು ಅದೆಷ್ಟು ಪೊಳ್ಳುತನದಿಂದ ಕೂಡಿದೆ ಎನ್ನುವುದಕ್ಕೆ ಸದ್ಯದ ಕಾಶ್ಮೀರ ದೇಶಕ್ಕೆ ಜಾಹೀರುಗೊಳಿಸುತ್ತಿದೆ. ಇಡೀ ಕಾಶ್ಮೀರವನ್ನು ಪೂರ್ಣ ಪ್ರಮಾಣದಲ್ಲಿ ಸೇನೆಯ ನಿಯಂತ್ರಣಕ್ಕೆ ತಳ್ಳಿ ಶಾಂತಿ ಸ್ಥಾಪಿಸಲು ಮುಂದಾದ ಕೇಂದ್ರ ಸರಕಾರದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಅಲ್ಲಿ ಉಗ್ರರಿಂದ ನಡೆಯುತ್ತಿರುವ ನಾಗರಿಕರ ಹತ್ಯೆಗಳು ತಿಳಿಸುತ್ತವೆ. ರಾಜಸ್ತಾನ ಮೂಲದ ಬ್ಯಾಂಕ್ ಅಧಿಕಾರಿಯೊಬ್ಬ ಉಗ್ರರಿಂದ ಹತ್ಯೆಗೀಡಾಗಿರುವುದು ಕಾಶ್ಮೀರದಲ್ಲಿ ನಿಯೋಜಿತರಾಗಿರುವ ವಿವಿಧ ಸಂಸ್ಥೆ ಮತ್ತು ಇಲಾಖೆಗಳ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ರಜನಿಬಾಲಾ ಎಂಬ ಶಿಕ್ಷಕಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದರು. 90ರ ದಶಕದ ಅವಾಂತರಗಳ ಬಳಿಕ ಕಾಶ್ಮೀರದಲ್ಲಿ ನಾಗರಿಕರ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದು ಇದೇ ಮೊದಲು. ಜೊತೆಗೆ ಕಾಶ್ಮೀರದ ಪಂಡಿತರು ಇದೇ ಮೊದಲ ಬಾರಿಗೆ ಅಭದ್ರತೆಯ ಕಾರಣಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

1990ರ ಕಾಲಘಟ್ಟದಲ್ಲಿ ಕಾಶ್ಮೀರದ ಪಂಡಿತರ ವ್ಯಾಪಕ ವಲಸೆಗೆ ಕಾರಣವಾದ ಹಿಂಸಾಚಾರಗಳಿಗೆ ಕಾರಣವಾದದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ಬೆಂಬಲಿತ ಜನತಾದಳ ಸರಕಾರ. ಆ ಸಂದರ್ಭದಲ್ಲಿ ಕಾಶ್ಮೀರದ ರಾಜ್ಯಪಾಲರಾಗಿದ್ದವರು ಇಂದು ಬಿಜೆಪಿಯ ಪ್ರಮುಖರಾಗಿ ರಾರಾಜಿಸುತ್ತಿದ್ದಾರೆ. ಅಂದಿನ ಕೇಂದ್ರ ಸರಕಾರದ ದುರ್ಬಲ ನೀತಿಯೇ ಪಂಡಿತರ ಮೇಲಿನ ದೌರ್ಜನ್ಯಗಳಿಗೆ ಕಾರಣವಾಯಿತು ಎನ್ನುವುದನ್ನು ಇಂದಿಗೂ ಕಾಶ್ಮೀರದ ಪಂಡಿತರು ಆರೋಪಿಸುತ್ತಿದ್ದಾರೆ. ದೇಶವನ್ನು ಒಡೆಯುವುದಕ್ಕೆ ಕಾಶ್ಮೀರದಲ್ಲಿರುವ ಪಂಡಿತರು ಮತ್ತು ಹಿಂದೂಗಳ ಮೇಲೆ ಹೆಚ್ಚು ಹೆಚ್ಚು ದೌರ್ಜನ್ಯಗಳು ನಡೆಯುವುದು ಬಿಜೆಪಿಗೂ ಅಗತ್ಯವಿದ್ದಂತಿತ್ತು. ಕಾಶ್ಮೀರವನ್ನು ತೋರಿಸಿ, ಇಡೀ ಭಾರತದಲ್ಲಿ ಹಿಂದುತ್ವ ರಾಜಕೀಯವನ್ನು ಬಲಪಡಿಸುವುದು ಅವರ ಗುರಿಯಾಗಿತ್ತು. ಈ ಕಾರಣಕ್ಕೆ, ಉಗ್ರರು ಸ್ಥಳೀಯರ ಮೇಲೆ ದಾಳಿ ನಡೆಸಿದಾಗ ಕೇಂದ್ರ ಸರಕಾರ ಸಂಪೂರ್ಣ ಅಸಹಾಯಕತೆಯನ್ನು ವ್ಯಕ್ತಪಡಿಸಿತು. ಬಳಿಕ, ‘ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ’ಕ್ಕಾಗಿ ಮೊಸಳೆ ಕಣ್ಣೀರು ಸುರಿಸಿ, ದೇಶದೆಲ್ಲೆಡೆ ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸಿತು. ಈ ಸಂದರ್ಭದಲ್ಲಿ ಸುಮಾರು 80 ಮಂದಿ ಪಂಡಿತರು ಹತ್ಯೆಗೀಡಾದರು ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಇದೇ ಸಂದರ್ಭದಲ್ಲಿ ಅಮಾಯಕ ಮುಸ್ಲಿಮರು ಸೇರಿದಂತೆ ಇತರ ಸಮುದಾಯದ ಸಾವಿರಕ್ಕೂ ಅಧಿಕ ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದರು.

ಆದರೆ ಬಳಿಕ ಉಗ್ರರು ನಾಗರಿಕರನ್ನು ಗುರಿಯಾಗಿಸುವುದನ್ನು ನಿಲ್ಲಿಸಿ, ನೇರವಾಗಿ ಸೇನೆಯ ತುಕಡಿಗಳ ಮೇಲೆ ದಾಳಿಗಳನ್ನು ಆರಂಭಿಸಿದರು. ಸೇನೆಯಿಂದ ನಾಗರಿಕರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಮಗೆ ಪೂರಕವಾಗಿ ಬಳಸುವುದಕ್ಕೆ ಶುರು ಹಚ್ಚಿದರು. ತಮ್ಮ ಗುರಿ ನಾಗರಿಕರಲ್ಲ, ಸೇನೆ ಮತ್ತು ಪೊಲೀಸರು ಎನ್ನುವುದನ್ನು ಕಾಶ್ಮೀರಿ ಜನತೆಗೆ ಸ್ಪಷ್ಟವಾಗುವಂತೆ ತಮ್ಮ ಹಿಂಸಾ ರಾಜಕೀಯವನ್ನು ಮುಂದುವರಿಸಿದರು. ಯುಪಿಎ ಅಧಿಕಾರಾವಧಿಯಲ್ಲಿ ಮಾತ್ರವಲ್ಲ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ದಾಳಿಗಳು ಇನ್ನಷ್ಟು ಹೆಚ್ಚಿದವು. ಕಾಶ್ಮೀರದಲ್ಲಿ ಸೇನೆಯ ಒಂದು ತಲೆಗೆ ಹತ್ತು ಪಾಕಿಸ್ತಾನಿ ಉಗ್ರರ ತಲೆಗಳನ್ನು ತರುತ್ತೇವೆ ಎಂಬ ಭರವಸೆ ಕೊಟ್ಟ ಮೋದಿ ಸರಕಾರ, ದೊಡ್ಡ ಪ್ರಮಾಣದಲ್ಲಿ ನಮ್ಮ ಸೇನೆಯ ಯೋಧರನ್ನು ಉಗ್ರರಿಗೆ ಬಲಿಕೊಟ್ಟ ಕಳಂಕವನ್ನು ಇದೀಗ ಹೊತ್ತುಕೊಂಡಿದೆ. ಈ ಕಳಂಕವನ್ನು ತೊಳೆಯುವುದಕ್ಕಾಗಿ ಸರ್ಜಿಕಲ್ ಸ್ಟ್ರೈಕ್‌ಗಳೆಂಬ ಅಗೋಚರ ದಾಳಿಗಳನ್ನು ನಡೆಸಿ ‘ಉಗ್ರರನ್ನು ಮಟ್ಟ ಹಾಕಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರಾದರೂ, ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆ ನಿಂತಿಲ್ಲ. ಇಂದು ಕಾಶ್ಮೀರ ಎನ್ನುವ ಜೇನು ಗೂಡಿಗೆ ಕೈ ಹಾಕಿ ಮುಖ ಸುಟ್ಟುಕೊಂಡಿರುವ ಕೇಂದ್ರ ಸರಕಾರ, ಅಲ್ಲಿನ ಸಮಸ್ಯೆಗೆ ಒಂದು ಪೂರ್ಣ ಪರಿಹಾರವನ್ನು ಒದಗಿಸಲಾಗದೆ ಕಂಗಾಲಾಗಿ ನಿಂತಿದೆ. ಸರಕಾರದ ಇತ್ತೀಚಿನ ನೀತಿಗಳಿಂದಾಗಿ ಇದೀಗ ಉಗ್ರರು ತಮ್ಮ ಗುರಿಯನ್ನು ಸೇನೆಯ ಕಡೆಯಿಂದ ಮತ್ತೆ ನಾಗರಿಕರ ಕಡೆಗೆ ಬದಲಿಸಿದ್ದಾರೆ.

ತಮ್ಮ ರಾಜಕೀಯಕ್ಕಾಗಿ ಕಾಶ್ಮೀರದ ಪಂಡಿತರನ್ನು ಉಗ್ರರಿಗೆ ಬಲಿಕೊಟ್ಟ ಬಿಜೆಪಿ, ಅದೇ ಕಾಶ್ಮೀರಿ ಪಂಡಿತರ ಹೆಣಗಳನ್ನು ಮತ್ತೆ ದೇಶದ ಜನರಿಗೆ ತೋರಿಸಿ ಜನರನ್ನು ಒಡೆಯುವ ಅತ್ಯಂತ ನೀಚ ಕೃತ್ಯವನ್ನು ಎಸಗಿತು. ಆದರೆ ಇದನ್ನು ಕಾಶ್ಮೀರದ ಪಂಡಿತರೇ ದೊಡ್ಡ ಧ್ವನಿಯಲ್ಲಿ ವಿರೋಧಿಸಿದರು. ಕಾಶ್ಮೀರದಲ್ಲಿ ಉಗ್ರರು ತಮ್ಮ ಮೇಲೆ ದೌರ್ಜನ್ಯ ಎಸಗಿದಾಗ ಸ್ಥಳೀಯ ಮುಸ್ಲಿಮರೇ ನಮ್ಮನ್ನು ಕಾಪಾಡಿದ್ದರು ಎನ್ನುವುದನ್ನು ನೆನೆದುಕೊಂಡರು. ಸರಕಾರವೇ ತಮ್ಮ ವಲಸೆಗೆ ಕಾರಣ ಎಂದರು ಮಾತ್ರವಲ್ಲದೆ, ರಾಜಕೀಯ ಉದ್ದೇಶಕ್ಕಾಗಿ ಮಾಡಿರುವ ‘ಕಾಶ್ಮೀರ್ ಫೈಲ್ಸ್’ ಚಿತ್ರದಿಂದಾಗಿ ಕಾಶ್ಮೀರದ ಪಂಡಿತರು ಮತ್ತು ನಾಗರಿಕರ ಬದುಕಿನ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದರು ಮತ್ತು ಆ ಎಚ್ಚರಿಕೆ ಇದೀಗ ನಿಜವಾಗುತ್ತಿದೆ. ಕಾಶ್ಮೀರದಲ್ಲಿ ಅಳಿದುಳಿದ ನೆಮ್ಮದಿಯನ್ನು ಕೆಡಿಸುವ ಕೆಲಸವನ್ನು ‘ಕಾಶ್ಮೀರ್ ಫೈಲ್ಸ್’ ಮಾಡಿದೆ ಎಂದು ಅಲ್ಲಿನ ನಾಗರಿಕರು ಹೇಳುತ್ತಿದ್ದಾರೆ. ಸ್ಥಳೀಯರ ನಡುವೆ ಸರಕಾರ ಸೃಷ್ಟಿಸಿದ ವಿಭಜನೆ, ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು, ಕಾಶ್ಮೀರದೊಳಗೆ ‘ಹೊರ ರಾಜ್ಯಗಳ’ ಜನರನ್ನು ತುರುಕಿಸುವ ಸರಕಾರದ ಪ್ರಯತ್ನ ಸ್ಥಳೀಯರಲ್ಲಿ ತೀವ್ರ ಅಭದ್ರತೆಯನ್ನು ಹುಟ್ಟಿಸಿದೆ. ಈವರೆಗೆ ಸೇನೆಯ ಕೋವಿಗೆ ಹೆದರಿ ಬದುಕುತ್ತಿದ್ದ ಕಾಶ್ಮೀರಿಗಳು, ತಮ್ಮ ನೆಲವನ್ನೇ ತಮ್ಮ ಕೈಯಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆತಂಕದಲ್ಲಿದ್ದಾರೆ. ಈ ಆತಂಕವನ್ನು ಉಗ್ರರು ತಮಗೆ ಪೂರಕವಾಗಿ ಬಳಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅವರು ಹೊರಗಿನಿಂದ ಬಂದ ಅಧಿಕಾರಿಗಳನ್ನು, ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ, ‘ಹೊರಗಿನವರಿಗೆ’ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ. ಹೊರಗಿನಿಂದ ಬಂದು ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಸಿಬ್ಬಂದಿ ಜೀವ ಭಯದಿಂದ ಬೀದಿಗಿಳಿದಿದ್ದು, ತಮಗೆ ಭದ್ರತೆ ಬೇಕು ಎಂದು ಸರಕಾರವನ್ನು ಕೇಳುತ್ತಿದ್ದಾರೆ. 1990ರ ಪರಿಸ್ಥಿತಿ ಕಾಶ್ಮೀರದಲ್ಲಿ ಮರುಕಳಿಸಿದೆ ಎಂದು ನಾಗರಿಕರು ಕೇಂದ್ರವನ್ನು ದೂರುತ್ತಿದ್ದಾರೆ. ಹಾಗಾದರೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿ ಸೇನೆಯನ್ನು ಜಮಾವಣೆಗೊಳಿಸಿ, ಕಾಶ್ಮೀರಿಗಳ ಬದುಕನ್ನು ಸಂಪೂರ್ಣ ಲಾಕ್‌ಡೌನ್‌ಗೆ ತಳ್ಳಿ, ಸರ್ವ ನಾಶ, ನಷ್ಟಗಳಿಗೆ ಕಾಶ್ಮೀರವನ್ನು ಈಡು ಮಾಡಿದ ಕೇಂದ್ರ ಸರಕಾರ ತನ್ನದಾಗಿಸಿಕೊಂಡಿದ್ದು ಏನನ್ನು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News