ನೂಪುರ್‌ ಶರ್ಮಾ ವಜಾ ಮಾತ್ರ ಸಾಕಾಗಲ್ಲ, ಆಕೆಯನ್ನು ಬಂಧಿಸಬೇಕು: ಉವೈಸಿ ಆಗ್ರಹ

Update: 2022-06-06 12:41 GMT

ಹೈದರಾಬಾದ್: ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ ಹೇಳಿಕೆಗಳಿಗೆ ಗಲ್ಫ್ ರಾಷ್ಟ್ರಗಳಿಂದ ತೀವ್ರ ಖಂಡನೆಗೆ ಗುರಿಯಾಗಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರನ್ನು ಬಂಧಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ.

"ಭಾರತ ನಾಚಿಕೆ ಪಟ್ಟುಕೊಳ್ಳುವಂತಾಗಿದೆ,. ದೇಶದ ವಿದೇಶಾಂಗ ನೀತಿ ನಾಶವಾಗಿದೆ, ನಾನು ನೂಪುರ್ ಶರ್ಮ ಅವರ ಬಂಧನಕ್ಕೆ ಆಗ್ರಹಿಸುತ್ತೇನೆ, ವಜಾಗೊಳಿಸುವಿಕೆಗೆ ಅಲ್ಲ" ಎಂದು ಉವೈಸಿ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯವನ್ನೂ ಟೀಕಿಸಿದ ಅವರು "ವಿದೇಶಾಂಗ ಸಚಿವಾಲಯ ಬಿಜೆಪಿಯ ಭಾಗವಾಗಿದೆಯೇ? ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ರಾಷ್ಟ್ರೀಯರ ವಿರುದ್ಧ ಅಪರಾಧ ಮತ್ತು ಹಿಂಸೆ ನಡೆದರೆ ಏನು ಮಾಡುತ್ತೀರಿ?"ಎಂದು ಅವರು ಪ್ರಶ್ನಿಸಿದರು.

ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲೆಂದೇ ಬಿಜೆಪಿ ತನ್ನ ವಕ್ತಾರರನ್ನು ಕಳುಹಿಸುತ್ತದೆ ಕೊನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳನ್ನು ಎದುರಿಸಿದ ನಂತರವಷ್ಟೇ ಕ್ರಮಕೈಗೊಂಡಿದೆ ಎಂದು ಅವರು ಹೇಳಿದರು.

"ನಾನು ಪ್ರಧಾನಿಗೆ ಮೊದಲೇ ಮನವಿ ಮಾಡಿದ್ದೆ, ಆದರೆ ಅವರು ಜಗ್ಗಿರಲಿಲ್ಲ. ಗಲ್ಫ್ ರಾಷ್ಟ್ರದಲ್ಲಿ ಸುದ್ದಿಯಾದ ನಂತರ ಕ್ರಮಕೈಗೊಳ್ಳಲಾಗಿದೆ. ಈ ಕ್ರಮ ಮೊದಲೇ ಕೈಗೊಳ್ಳಬೇಕಿತ್ತು. ತಮ್ಮ ವಕ್ತಾರೆ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆಂದು ಅರ್ಥೈಸಲು ಬಿಜೆಪಿಗೆ 10 ದಿನಗಳೇ ಬೇಕಾದವು" ಎಂದು ಅವರು ಹೇಳಿದರು.

ಈ ವಿವಾದದಿಂದ ಕತಾರ್‍ನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಗೌರವಾರ್ಥ ಏರ್ಪಡಿಸಲಾಗಿದ್ದ ಔತಣಕೂಟ ರದ್ದುಗೊಳಿಸಿರುವುದು ಹಾಗೂ ಮೂರು ಗಲ್ಫ್ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಕರೆಸಿ ಆಕ್ಷೇಪಣೆ ಸಲ್ಲಿಸಿರುವುದನ್ನೂ ಓವೈಸಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News