ಕೆಲವು ಸಾಹಿತಿಗಳಿಂದ ರಾಜ್ಯದಲ್ಲಿ ಗೊಂದಲ ಸೃಷ್ಟಿ: ಕೆ.ಎಸ್.ಈಶ್ವರಪ್ಪ ಆರೋಪ

Update: 2022-06-06 12:42 GMT

ಶಿವಮೊಗ್ಗ, ಜೂ.6: ಒಂಬತ್ತು ಸಾಹಿತಿಗಳು ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದಾರೆ. ಅದರಲ್ಲಿ ಏಳು ಜನರ ವಿಚಾರವನ್ನು ಪಠ್ಯದಲ್ಲಿ ಹಾಕೇ ಇಲ್ಲ. ಇದರಲ್ಲಿ ಎಷ್ಟು ರಾಜಕಾರಣ ಇದೆ ನೋಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾದ ಅವಧಿಯಲ್ಲಿ ಅವರ ವಿಚಾರಕ್ಕೆ ತಕ್ಕಂತೆ ಪಠ್ಯಪುಸ್ತಕಗಳನ್ನು ತಂದಿದ್ದರು. ಇವತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಯಾವುದು ಸರಿ ಇಲ್ಲ ಎಂಬ ಅಂಶದ ಬಗ್ಗೆ ಪ್ರಮಾಣಿಕವಾಗಿ ತಿದ್ದುಕೊಳ್ಳಿ ಎಂದು ಹೇಳಿ ತಿದ್ದಿಸಬೇಕಿತ್ತು. ಇದರಲ್ಲಿ ರಾಜಕೀಯ ತಂದು, ಅವರ ವೈಚಾರಿಕ ಸಿದ್ದಾಂತಗಳನ್ನು ಇಲ್ಲಿಗೆ ತರಬಾರದು. ಆ ಮೂಲಕ ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದು ಸರಿ ಇಲ್ಲ ಎಂಬುದನ್ನು ಮಾಧ್ಯಮಗಳಿಗೆ ಹೇಳಿಕೆ ನೀಡುವುದು. ನಮ್ಮ ಪಠ್ಯವನ್ನು ವಾಪಸ್ ತೆಗೆದುಕೊಳ್ಳಿ ಎಂದು ಹೇಳುವುದು ರಾಜಕಾರಣ. ಒಂಬತ್ತು ಸಾಹಿತಿಗಳು ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದಾರೆ. ಅದರಲ್ಲಿ ಏಳು ಜನರ ವಿಚಾರವನ್ನು ಪಠ್ಯದಲ್ಲಿ ಹಾಕೇ ಇಲ್ಲ. ಇದರಲ್ಲಿ ಎಷ್ಟು ರಾಜಕಾರಣ ಇದೆ ನೋಡಿ. ಪಠ್ಯದಲ್ಲಿ ಯಾವುದು ಸತ್ಯ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಅಮೃತ ಮಹೋತ್ಸವ ಬರುವವರೆಗೂ ತಿಳಿಸಿಲ್ಲ.

ಟಿಪ್ಪು ಮೈಸೂರು ಹುಲಿ, ಅಲೆಕ್ಸಾಂಡರ್ ದಿ ಗ್ರೇಟ್ ಎಂದು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಒಳ್ಳೆ ಆಡಳಿತಗಾರರು ಇರಲಿಲ್ವಾ. ಒಬ್ಬರನ್ನಾದರೂ ಮೈಸೂರು ಹುಲಿ ಅಂತ ಕರೆದಿದ್ದೇವಾ. ವಿದೇಶಿ ವ್ಯಕ್ತಿಗಳನ್ನು, ಮೊಘಲರನ್ನು ಗ್ರೇಟ್ ಅಂತ ಕರೆದಿದ್ದಾರೆ. ನಮ್ಮಲ್ಲಿ ಯಾರು ಗ್ರೇಟ್ ಅಂತ ಇರಲಿಲ್ವಾ. ನಮ್ಮ ದೇಶದ ಮಹಾಪುರಷರ ಬಗ್ಗೆ ಹೇಳಬಾರದ.ಯಾವುದಾದರೂ ವ್ಯತ್ಯಾಸವಾಗಿದ್ದರೆ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಸರಿಯಿಲ್ಲ ಎಂದರೆ ಪರಿಶೀಲನೆ ಮಾಡಲು ಸಹ ಅವಕಾಶವಿದೆ. ಆದರೆ, ವಿರೋಧ ಮಾಡುವುದಕ್ಕಾಗಿಯೇ ವಿರೋಧ ಮಾಡಿದ್ರೆ ನಾವು ಅದನ್ನು ನೋಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News