''ಕಾಂಗ್ರೆಸ್ ನಲ್ಲಿ 50 ದಾಟಿದರೂ ಯುವ ನಾಯಕ, 70 ದಾಟಿದರೂ ಯುವ ಮುಖಂಡ'': ಬಿಜೆಪಿ

Update: 2022-06-06 15:24 GMT

ಬೆಂಗಳೂರು, ಜೂ. 6: ‘ಕಾಂಗ್ರೆಸ್ ಪಕ್ಷವೀಗ ಯುವಜನತೆಯ ಜಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ‘ಯುವ' ಎನ್ನುವ ಪದ ರಾಹುಲ್ ಗಾಂಧಿಯ ಸ್ಥಾನಮಾನದ ಮೇಲೆ ಅವಲಂಬಿತವಾಗಿದೆ. 50 ದಾಟಿದರೂ ಯುವ ನಾಯಕ, 70 ದಾಟಿದರೂ ಯುವ ಮುಖಂಡ!' ಎಂದು ಬಿಜೆಪಿ ಲೇವಡಿ ಮಾಡಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘2023ರ ಚುನಾವಣೆಗೆ 70 ವರ್ಷ ಮೇಲ್ಪಟ್ಟವರ ತಂಡ ಸಜ್ಜುಗೊಂಡಿದೆ, 35 ಕೆಳಗಿನವರಿಗೆ ಬರೇ ಭರವಸೆ ಮಾತ್ರ. ಮಹಿಳಾ ಸಬಲೀಕರಣಕ್ಕಾಗಿ ನಾ-ನಾಯಕಿ ಕಾರ್ಯಕ್ರಮ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಪರಿಷತ್ ಹಾಗೂ ರಾಜ್ಯಸಭೆಗೆ ಒಂದೇ ಒಂದು ಸ್ಥಾನ ಮಹಿಳೆಯರಿಗೆ ನೀಡದ ಕಾಂಗ್ರೆಸ್ ಈಗ ಮಹಿಳೆಯರ ಪರ ನಾವಿದ್ದೇವೆ ಎನ್ನುವುದು ಹಾಸ್ಯಾಸ್ಪದವಲ್ಲವೇ?' ಎಂದು ವಾಗ್ದಾಳಿ ನಡೆಸಿದೆ.

‘ಮಹಿಳೆಯರಿಗೆ ಅವಕಾಶ ಕೊಡಿ ಎಂದವರಿಗೆ ಕಾಂಗ್ರೆಸ್ ಈಗ ನೋಟಿಸ್ ನೀಡುತ್ತಿದೆ! ಕಾಂಗ್ರೆಸ್ ಪಕ್ಷ ಈಗ ಪಕ್ಷವು ಜಿಲ್ಲಾವಾರು, ತಾಲೂಕುವಾರು, ಬೂತ್ ಮಟ್ಟದಲ್ಲಿ ಚಿಂತನ ಶಿಬಿರ ನಡೆಸಲು ತೀರ್ಮಾನಿಸಿದೆ. ರಾಷ್ಟ್ರ ಮಟ್ಟದಿಂದ ಬೂತ್ ಮಟ್ಟದವರೆಗೆ ಕಾಂಗ್ರೆಸ್ ಪಕ್ಷ ಖಾಲಿಯಾಗಲು ಸ್ವತಃ ಅವರೇ ಅಡಿಗಲ್ಲು ಹಾಕುತ್ತಿದ್ದಾರೆಯೇ? ಕಾಂಗ್ರೆಸ್ ಪಕ್ಷ ಬುಡಸಮೇತ ಬೀಳಲು ಕ್ಷಣಗಣನೆ ಆರಂಭಗೊಂಡಿದೆ' ಎಂದು ಬಿಜೆಪಿ ಟೀಕಿಸಿದೆ.

‘ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದ ಬಳಿಕ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ತೊರೆದರು. ರಾಜ್ಯದಲ್ಲಿ ಚಿಂತನ ಶಿಬಿರದ ಬಳಿಕ ರಾಜ್ಯ ನಾಯಕರು ಕಾಂಗ್ರೆಸ್ ತ್ಯಜಿಸುತ್ತಿದ್ದಾರೆ. ಈಗ ಕಾಂಗ್ರೆಸ್ ಜಿಲ್ಲಾ ಮಟ್ಟದಲ್ಲಿ ಚಿಂತನ ಶಿಬಿರ ನಡೆಸುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಖಾಲಿಯಾಗುವುದೇ?' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಮರೆತಿತ್ತೇ ಹೊರತು, ನಾವಲ್ಲ: ‘ಅಂಬೇಡ್ಕರ್ ಅವರ ರಾಜಕೀಯ ಜೀವನ ಮುಗಿಸುವಾಗ ‘ಸಂವಿಧಾನ ಶಿಲ್ಪಿ'ಯ ಮೇಲಿನ ಪ್ರೇಮ ಎಲ್ಲಿತ್ತು? ತಮ್ಮ ಕೊರಳಿಗೆ ತಾವೇ ಭಾರತ ರತ್ನ ಗೌರವ ಸುತ್ತಿಕೊಳ್ಳುವಾಗ ಸಂವಿಧಾನ ಶಿಲ್ಪಿಯ ನೆನಪಾಗಲಿಲ್ಲವೇಕೆ? ಶವಸಂಸ್ಕಾರಕ್ಕೂ ಜಾಗ ನೀಡಲು ನಿರಾಕರಿಸುವಾಗ ಸಂವಿಧಾನ ಶಿಲ್ಪಿ ಎನ್ನುವ ಪರಿಜ್ಞಾನ ಇರಲಿಲ್ಲವೇ?' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘1956ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಧನರಾದಾಗ ದಿಲ್ಲಿಯ ಪ್ರತಿಷ್ಠಿತರ ಸ್ಮಾರಕ ಸ್ಥಳದಲ್ಲಿ ಅಂಬೇಡ್ಕರ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಾಡಲೂ ನೆಹರೂ ಒಪ್ಪಲಿಲ್ಲ. ಇದು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನೀಡಿದ ಗೌರವ! ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ. ನಮ್ಮ ಸರಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ. ಸಂವಿಧಾನ ಪಿತಾಮಹರನ್ನು ಕಾಂಗ್ರೆಸ್ ಮರೆತಿತ್ತೇ ಹೊರತು, ನಾವಲ್ಲ' ಎಂದು ಬಿಜೆಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News