ಭೈರಪ್ಪನವರ ಜಾತಿಗ್ರಸ್ಥ ಮನಸ್ಥಿತಿ ಸ್ಪಷ್ಟ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-06-06 14:55 GMT

ಬೆಂಗಳೂರು, ಜೂ. 6: ‘ಹಳೆಯ ಪುಸ್ತಕದಲ್ಲಿ ‘ಅಂಬೇಡ್ಕರ್ ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ' ಎಂಬ ಸಾಲು ಇದೆ. ಆದರೆ, ಹೊಸ ಪುಸ್ತಕದಲ್ಲಿ ಈ ಸಾಲನ್ನೇ ಕಿತ್ತುಹಾಕಲಾಗಿದ್ದು ಸಂವಿಧಾನ ರಚನೆಯಲ್ಲಿ ಯಾವ ಶ್ರಮವೂ ಇಲ್ಲದ ಸದಸ್ಯರೊಬ್ಬರನ್ನು ಅವರೇ ಸಂವಿಧಾನ ರಚಿಸಿದರು ಎನ್ನುವ ಭಾವನೆ ಬರುವಂತೆ ಪರಿಚಯಿಸಲಾಗಿದೆ. ಭಾರತಕ್ಕೆ ಸಂವಿಧಾನ ಬರೆದುಕೊಟ್ಟಿದ್ದು ಅಂಬೇಡ್ಕರ್ ಮಾತ್ರವೇ ಎಂದು ಕರಡು ಸಮಿತಿ ಎಲ್ಲ ಸದಸ್ಯರೂ ಹೇಳಿದ್ದಾರೆ. ಹೀಗಿರುವಾಗ ಬಾಬಾ ಸಾಹೇಬರ ಕುರಿತು ಗೊತ್ತಿದ್ದ ತಪ್ಪು ಮಾಹಿತಿ ನೀಡುವ ತಿರುಚಿದ ಪಠ್ಯವನ್ನು ಮಕ್ಕಳೇಕೆ ಓದಬೇಕು?' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಇನ್ನು ಬಹು ಮುಖ್ಯವಾಗಿ ನಮ್ಮ ನಡುವಿನ ಸಾಹಿತಿ ಎನಿಸಿಕೊಂಡ ಎಸ್.ಎಲ್.ಭೈರಪ್ಪನವರು ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಆಗ್ರಹಿಸಿದ್ದು, ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು ಎಂದು ಹೇಳಿದ್ದಾರೆ. ಆದರೆ, ಬಾಬಾ ಸಾಹೇಬರ ವಿಷಯದಲ್ಲಿ ಮತ್ತು ಇನ್ನಿತರೆ ಸಂಗತಿಗಳ ಸಂದರ್ಭದೊಳಗೆ ವಾಸ್ತವ ಸಂಗತಿಗಳನ್ನು ಮರೆಮಾಚುವ ಸ್ಪಷ್ಟವಾದ ಸಂಗತಿಗಳು ಕಾಣಿಸುತ್ತಿದ್ದರೂ ಆ ಬಗ್ಗೆ ಮಾತನಾಡದೇ ಎಸ್.ಎಲ್.ಭೈರಪ್ಪನವರು ಜಾಣ ಮೌನ ವಹಿಸಿರುವುದು ಅವರ ಮಾನಸಿಕತೆ ಹಾಗೂ ಜಾತಿಗ್ರಸ್ಥ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತದೆ' ಎಂದು ಟೀಕಿಸಿದ್ದಾರೆ.

‘ಭೈರಪ್ಪನವರೇ, ಇಂದಿರಾ ಗಾಂಧಿ ಕಾಲದಲ್ಲಿ ಬುದ್ಧಿವಂತರು ಹಾಗೂ ಮಹಾನ್ ವಿದ್ವಾಂಸರಿದ್ದರು. ಅವರಿಗೆ ನೀವು ಆ ಕಾಲಕ್ಕೆ ಹೊಂದುತ್ತಿದ್ದ ಅಜ್ಞಾನಿ ಚಕ್ರತೀರ್ಥ ಎಂಬ ಸಂಗತಿಯು ತಿಳಿದಿದ್ದರಿಂದಲೇ ನಿಮ್ಮನ್ನು ಅವರು ಹೊರಗಿಟ್ಟಿದ್ದಾರೆ. ನನ್ನ ಪ್ರಕಾರ ನಿಮ್ಮಂತಹ ಜಾತಿವಾದಿ ಪೂರ್ವಗ್ರಹ ಪೀಡಿತರನ್ನು ಅವರು ಹೊರಗಿಟ್ಟಿದ್ದೇ ಸರಿಯಾದ ನಡೆ ಎಂಬುದು ನನ್ನ ಅಭಿಪ್ರಾಯ. ಓರ್ವ ಬರಹಗಾರ ತನ್ನ ಬರಹ ಸಾಮಥ್ರ್ಯವನ್ನು ಮತ್ತು ಆಲೋಚನಾ ಶಕ್ತಿಯನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಳಸಿದರೆ ಆತ ಸಮಾಜದ್ರೋಹಿ ಆಗಿರುತ್ತಾನೆ' ಎಂದು ಮಹದೇವಪ್ಪ ತಿಳಿಸಿದ್ದಾರೆ.

‘ಕಣ್ಣೆದುರಿಗೇ ಹತ್ತಾರು ಪಠ್ಯದ ಅಪದ್ಧಗಳು ಇದ್ದಾಗ ಅದನ್ನು ಸರಿಪಡಿಸದೇ ಜ್ಞಾನ ಭ್ರಷ್ಟತೆಯನ್ನು ಎಸಗುತ್ತಿರುವ ಭೈರಪ್ಪನವರು ಹಿಂದೆ ಹೇಳಿದಂತೆಯೇ ಓರ್ವ ಸಾಮಾಜಿಕ ವಂಚಕ. ಜ್ಞಾನ ಮತ್ತು ಸಂಸ್ಕಾರಕ್ಕೆ ಯಾವುದೇ ಜಾತಿಯಿಲ್ಲ, ಉತ್ತಮ ಸಂಸ್ಕಾರ ಮತ್ತು ಜ್ಞಾನ ಉಳ್ಳವನು ತಮ್ಮ ಜಾತಿಗೆ ಸೇರಬಲ್ಲ ಎಂಬ ಮಾತು ರೂಢಿಯಲ್ಲಿದ್ದರೂ ಜಾತಿ ಆಧಾರಿತವಾಗಿ ಬರಹಗಾರರ ಬರಹಗಳನ್ನು ಬಳಸಿಕೊಂಡು ಪಠ್ಯವನ್ನು ರಚಿಸಿರುವುದು ಇವರ ಮಾನಸಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಮನರಂಜನೆ ಕ್ಷೇತ್ರವನ್ನು ಭ್ರಷ್ಟಗೊಳಿಸಿ ಎಲ್ಲದರಲ್ಲೂ ವೈದಿಕಶಾಹಿಯ ದುರ್ಬುದ್ಧಿಯನ್ನು ತುರುಕಿ ಸಮಾಜವನ್ನು ಮೌಢ್ಯ ಮತ್ತು ಅಜ್ಞಾನ ಹಾಗೂ ಅಸಮಾನತೆಯ ಕಡೆಗೆ ಕೊಂಡೊಯ್ಯಲು ಹೊರಟಿರುವ ಭೈರಪ್ಪ ಅಂತವರ ಕೆಟ್ಟ ಮಾನಸಿಕ ಸಂತತಿಗೆ ನನ್ನ ಧಿಕ್ಕಾರ' ಎಂದು ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News