ಸಾಲದ ಮೇಲಿನ ಬಡ್ಡಿ ದರಗಳನ್ನು 50 ಬೇಸಿಸ್‌ ಅಂಕಗಳಷ್ಟು ಏರಿಸಿದ ರಿಸರ್ವ್‌ ಬ್ಯಾಂಕ್‌

Update: 2022-06-08 15:27 GMT
ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ (PTI)

ಹೊಸದಿಲ್ಲಿ,ಜೂ.8: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಪ್ರಮುಖ ಬಡ್ಡಿದರವನ್ನು ಬುಧವಾರ 50 ಮೂಲ ಅಂಶಗಳಷ್ಟು ಹೆಚ್ಚಿಸಿದೆ. ಇದರಿಂದಾಗಿ ರೆಪೋ ದರ ಶೇ.4.9ಕ್ಕೇರಿದೆ. ಪ್ರಸಕ್ತ ವಿತ್ತವರ್ಷಕ್ಕಾಗಿ ಹಣದುಬ್ಬರದ ತನ್ನ ಮುನ್ನಂದಾಜನ್ನೂ ಆರ್ಬಿಐ ಶೇ.6.7ಕ್ಕೆ ಹೆಚ್ಚಿಸಿದೆ. ಹಣದುಬ್ಬರ ಶೇ.6ನ್ನು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಆರ್ಬಿಐ ಮೇಲಿದೆ ಮತ್ತು ಅದರ ಮುನ್ನಂದಾಜು ಇದಕ್ಕಿಂತ ಹೆಚ್ಚೇ ಇದೆ.

ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಎಲ್ಲ ಆರೂ ಸದಸ್ಯರು ರೆಪೋ ದರ ಏರಿಕೆಗೆ ಸರ್ವಾನುಮತದ ಒಪ್ಪಿಗೆಯನ್ನು ನೀಡಿದ್ದಾರೆ.ಆರ್ಬಿಐ ರೆಪೋ ದರವನ್ನು ಹೆಚ್ಚಿಸಿರುವುದರಿಂದ ಇಎಂಐಗಳು ಹೆಚ್ಚಲಿವೆ. ಇದು ಕಳೆದ ಐದು ವಾರಗಳಲ್ಲಿ ಎರಡನೇ ರೆಪೋ ದರ ಏರಿಕೆಯಾಗಿದೆ.
 
ಆರ್ಬಿಐ ತನ್ನ ಹಣಕಾಸು ನೀತಿಯನ್ನು ನಿರ್ಧರಿಸುವಾಗ ಪರಿಗಣನೆಗೆ ತೆಗೆದುಕೊಳ್ಳುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಸತತ ಏಳನೆಯ ತಿಂಗಳಲ್ಲಿಯೂ ಏರಿಕೆಯ ಹಾದಿಯಲ್ಲಿಯೇ ಇದ್ದು,ಎಪ್ರಿಲ್‌ನಲ್ಲಿ ಶೇ.7.79ನ್ನು ತಲುಪಿದೆ. ಇದು ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ಮಟ್ಟವಾಗಿದೆ. ಈ ವರ್ಷದ ಆರಂಭದಿಂದಲೇ ಚಿಲ್ಲರೆ ಹಣದುಬ್ಬರವು ಆರ್ಬಿಐನ ಶೇ.2-ಶೇ.6ರ ಗುರಿ ಶ್ರೇಣಿಯ ಮೇಲೆಯೇ ಇದೆ.

ಆರ್ಬಿಐ ಹಾಲಿ ಹಣಕಾಸು ವರ್ಷಕ್ಕಾಗಿ ಶೇ.5.7ರಷ್ಟು ಹಣದುಬ್ಬರವನ್ನು ನಿರೀಕ್ಷಿಸಿತ್ತು. ಅದೀಗ ತನ್ನ ಮುನ್ನಂದಾಜನ್ನು ಶೇ.6.7ಕ್ಕೆ ಪರಿಷ್ಕರಿಸಿದೆ.

ಹಣದುಬ್ಬರ ಹೆಚ್ಚುವ ಅಪಾಯ ಮುಂದುವರಿದಿದೆ. ಟೊಮೆಟೊ ಮತ್ತು ಕಚ್ಚಾ ತೈಲಗಳ ಬೆಲೆಗಳಲ್ಲಿನ ಇತ್ತೀಚಿನ ಏರಿಕೆಯು ಹಣದುಬ್ಬರ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದ ದಾಸ್,ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ 
ಶೇ.6ರ ಮೇಲೆಯೇ ಇರುವ ಸಾಧ್ಯತೆಯಿದೆ. ಹಣದುಬ್ಬರವನ್ನು ಶೇ.6ರ ಮಟ್ಟಕ್ಕೆ ಇಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಬೆಳವಣಿಗೆ ಕುರಿತಂತೆ ಆರ್ಬಿಐ,ಹಾಲಿ ವಿತ್ತವರ್ಷದಲ್ಲಿ ಭಾರತೀಯ ಆರ್ಥಿಕತೆಯು ಈ ಮೊದಲಿನ ಮುನ್ನಂದಾಜು ಶೇ.7.2ರ ದರದಲ್ಲಿ ಪ್ರಗತಿಯನ್ನು ಹೊಂದುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಈ ಮೊದಲು ಹೆಚ್ಚುತ್ತಿರುವ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಹಾಲಿ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರದ ತನ್ನ ಅಂದಾಜನ್ನು ಫೆಬ್ರವರಿಯಲ್ಲಿನ ತನ್ನ ಮುನ್ನಂದಾಜನ್ನು(ಶೇ.4.5) 120 ಮೂಲ ಅಂಶಗಳಷ್ಟು ಹೆಚ್ಚಿಸಿ ಶೇ.5.7ಕ್ಕೆ ಪರಿಷ್ಕರಿಸಿತ್ತು. ಇದೇ ವೇಳೆ ಜಿಡಿಪಿ ಬೆಳವಣಿಗೆಯ ತನ್ನ ಅಂದಾಜನ್ನು ಮೊದಲಿನ ಶೇ.7.8ರಿಂದ ಶೇ.7.2ಕ್ಕೆ ಪರಿಷ್ಕರಿಸಿತ್ತು.

ಆರ್ಬಿಐ ದ್ರವ್ಯತೆಯನ್ನು ಕಡಿಮೆ ಮಾಡಬೇಕು,ಹಣದುಬ್ಬರದ ವಿರುದ್ಧ ತನ್ನ ಹೋರಾಟವನ್ನು ಬಲಗೊಳಿಸಬೇಕು ಮತ್ತು ಕೋವಿಡ್ ಸಾಂಕ್ರಾಮಿಕದ ಮೊದಲಿನ ವಿತ್ತೀಯ ಸ್ಥಿತಿಗಳಿಗೆ ಮರಳಲು ತನ್ನ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ.

ಡಿಜಿಟಲ್ ಹಣಪಾವತಿ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸಲು ಕ್ರಮಗಳನ್ನು ಪ್ರಕಟಿಸಿದ ದಾಸ್,ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಪ್ಲಾಟ್ ಫಾರ್ಮ್‌ಗಳೊಂದಿಗೆ ಜೋಡಿಸುವುದನ್ನೂ ಪ್ರಸ್ತಾಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News