ಬಿಜೆಪಿ ಸೋಲಿಗೆ ಕೋವಿಡ್ 2ನೇ ಅಲೆ ಕಾರಣ: ಜೆಪಿ ನಡ್ಡಾ ಹೇಳಿದ್ದೇನು ?

Update: 2022-06-10 02:34 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿ ಒಂದು ವರ್ಷದ ಬಳಿಕ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, "ಭಯಾನಕ ಕೋವಿಡ್-19 ಎರಡನೇ ಅಲೆ ಪ್ರಚಾರ ಕಾರ್ಯಕ್ಕೆ ಧಕ್ಕೆ ಉಂಟು ಮಾಡದಿದ್ದರೆ ಪಕ್ಷ ಬಂಗಾಳದಲ್ಲಿ ಅಧಿಕಾರಕ್ಕೆ ಬರುತ್ತಿತ್ತು" ಎಂದು ಹೇಳಿಕೆ ನೀಡಿದ್ದಾರೆ.

ಗುರುವಾರ ಪಶ್ಚಿಮ ಬಂಗಾಳದಲ್ಲಿ ಜನರನ್ನು ತಲುಪುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, "ಪಕ್ಷ ಬಂಗಾಳದ ಘನತೆಯನ್ನು ಎತ್ತಿ ಹಿಡಿಯುವ ಸಂಬಂಧ ತನ್ನ ಹೋರಾಟ ಮುಂದುವರಿಸಲಿದೆ" ಎಂದು ಹೇಳಿದರು.

"ಚುನಾವಣೆ ಪ್ರಚಾರ ವೇಗ ಪಡೆಯುವ ಅವಧಿಯಲ್ಲಿ ಅಧಿಕಾರಕ್ಕೆ ಬರಲು ನಾವು ಸರಿಯಾದ ಕಡೆ ಹೊಡೆಯಬೇಕಿತ್ತು. ಆದರೆ ಕೋವಿಡ್ ಅಲೆ ನಮ್ಮ ಪ್ರಚಾರವನ್ನು ಮುಕ್ತಾಯಗೊಳಿಸುವಂತೆ ಮಾಡಿತು" ಎಂದು ನಾಗರಿಕ ಸಮಾವೇಶದಲ್ಲಿ ಮಾತನಾಡುವ ವೇಳೆ ನಡ್ಡಾ ಹೇಳಿರುವುದಾಗಿ ndtv.com ವರದಿ ಮಾಡಿದೆ. ಕಳೆದ ವರ್ಷ ಪಶ್ಚಿಮ ಬಂಗಾಳ 8 ಹಂತಗಳ ಮ್ಯಾರಥಾನ್ ಚುನಾವಣೆಗೆ ಸಾಕ್ಷಿಯಾಗಿತ್ತು.

"ನಾಲ್ಕನೇ ಅಲೆ ಬಳಿಕ ಪ್ರಚಾರ ಅಕ್ಷರಶಃ ಸ್ತಬ್ಧವಾಯಿತು. ಮುಂದಿನ ಹಂತಗಳ ಮತದಾನ ಯಾವ ಪ್ರಚಾರವೂ ಇಲ್ಲದೇ ನಡೆಯಿತು. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ನಮಗಿದೆ. ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಾವು ವಿಜಯದ ರ್ಯಾಲಿ ನಡೆಸುತ್ತೇವೆ" ಎಂದು ಹೇಳಿದರು.

ರಾಜ್ಯದ ಕಾನೂನು ರಹಿತ ಸ್ಥಿತಿ ಬಗ್ಗೆ ಜನತೆ ರೋಸಿ ಹೋಗಿದ್ದು, ಜನ ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕಂಡುಬಂದ ಚಿತ್ರಣದಿಂದ ಮನವರಿಕೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News