ರಾಜ್ಯಸಭಾ ಚುನಾವಣೆ ಆರಂಭ: ನಾಲ್ಕು ರಾಜ್ಯಗಳಲ್ಲಿ ಕಠಿಣ ಸ್ಪರ್ಧೆ

Update: 2022-06-10 04:54 GMT
photo:PTI

ಹೊಸದಿಲ್ಲಿ: ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಖಾಲಿ ಇರುವ 16 ಸ್ಥಾನಗಳನ್ನು ತುಂಬಲು  ಗುರುವಾರ ಚುನಾವಣೆ  ಆರಂಭವಾಗಿದೆ. 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ದೃಷ್ಟಿಯಿಂದ ರಾಜ್ಯಸಭಾ ಚುನಾವಣೆ ನಿರ್ಣಾಯಕವಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಹಾಗೂ  ಹರ್ಯಾಣ ರಾಜ್ಯಗಳಲ್ಲಿ 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ನಾಲ್ಕು ರಾಜ್ಯಗಳಲ್ಲಿ ಕಠಿಣ ಸ್ಪರ್ಧೆ ಇದೆ.

57 ಖಾಲಿ ಇರುವ ಸೀಟುಗಳು 15 ರಾಜ್ಯಗಳಲ್ಲಿ ಹರಡಿಕೊಂಡಿವೆ. ಈ ಪೈಕಿ ಬಿಜೆಪಿ 23 ಸ್ಥಾನಗಳನ್ನು ಹೊಂದಿದ್ದು, ಎಂಟು ಸ್ಥಾನಗಳು ಕಾಂಗ್ರೆಸ್‌ ಪಾಲಾಗಿದೆ. ಉಳಿದವುಗಳು ಇತರ ಪಕ್ಷಗಳ ನಡುವೆ ಹಂಚಿಹೋಗಿದೆ.

ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ ಹಾಗೂ  ಮಹಾರಾಷ್ಟ್ರದಲ್ಲಿ ಕಠಿಣ ಸ್ಪರ್ಧೆಗಳನ್ನು ನಿರೀಕ್ಷಿಸಲಾಗಿದೆ. ಅಲ್ಲಿ ಎರಡೂ ಕಡೆಯವರು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ.

ಗರಿಷ್ಠ 11 ಸ್ಥಾನಗಳು ಉತ್ತರ ಪ್ರದೇಶದಲ್ಲಿದೆ. ಇದರ ನಂತರ ಮಹಾರಾಷ್ಟ್ರ ಹಾಗೂ ತಮಿಳುನಾಡು ತಲಾ ಆರು ಸ್ಥಾನಗಳನ್ನು ಹೊಂದಿವೆ.

ಬಿಹಾರದಿಂದ ಐದು ಸ್ಥಾನಗಳು, ಕರ್ನಾಟಕ, ರಾಜಸ್ಥಾನ ಹಾಗೂ  ಆಂಧ್ರಪ್ರದೇಶದಿಂದ ತಲಾ ನಾಲ್ಕು, ಮಧ್ಯಪ್ರದೇಶ ಹಾಗೂ  ಒಡಿಶಾದಿಂದ ತಲಾ ಮೂರು ಸ್ಥಾನಗಳು ಖಾಲಿಯಾಗಿವೆ.

ಅಲ್ಲದೆ, ಪಂಜಾಬ್, ಜಾರ್ಖಂಡ್, ಹರ್ಯಾಣ, ಛತ್ತೀಸ್‌ಗಢ ಹಾಗೂ ತೆಲಂಗಾಣದಿಂದ ತಲಾ ಎರಡು ಸ್ಥಾನಗಳು ಮತ್ತು ಉತ್ತರಾಖಂಡದಿಂದ ಒಂದು ಸ್ಥಾನವೂ ಖಾಲಿ ಇದೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ  ಪಿಯೂಷ್ ಗೋಯಲ್, ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್ ಹಾಗೂ  ಮುಕುಲ್ ವಾಸ್ನಿಕ್ ಮತ್ತು ಶಿವಸೇನೆಯ ಸಂಜಯ್ ರಾವತ್ ಸ್ಪರ್ಧಿಸಿರುವವರಲ್ಲಿ ಪ್ರಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News