ಸಾಮಾಜಿಕ ಅಶಾಂತಿ ಮತ್ತು ರಾಷ್ಟ್ರೀಯ ಭದ್ರತೆ

Update: 2022-06-10 05:31 GMT

ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಭಾರತೀಯ ಮುಸ್ಲಿಮರು ಆಕ್ರೋಶಿತರಾಗಿದ್ದಾರೆ. ಕುವೈತ್, ಒಮಾನ್, ಬಹರೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ಖತರ್, ಸೌದಿ ಅರೇಬಿಯ ಮತ್ತು ಇರಾನ್ ಮುಂತಾದ ಮುಸ್ಲಿಮ್ ದೇಶಗಳು ಗಂಭೀರ ರಾಜತಾಂತ್ರಿಕ ಆಕ್ಷೇಪ ವ್ಯಕ್ತಪಡಿಸಿವೆ. ಭಾರತ ‘ಸಾರ್ವಜನಿಕವಾಗಿ ಕ್ಷಮೆ ಕೋರಬೇಕು’ ಎಂಬುದಾಗಿ ಖತರ್ ಒತ್ತಾಯಿಸಿದೆ ಎನ್ನಲಾಗಿದೆ.

ಈ ಪೈಕಿ ಕೆಲವು ದೇಶಗಳಲ್ಲಿ, ‘‘ಭಾರತೀಯ ರಾಯ ಭಾರ ಕಚೇರಿಗಳಿಗೆ ಪ್ರತಿಭಟನೆಗಳನ್ನು ಸಲ್ಲಿಸಲಾಗುತ್ತಿದೆ, ಸೂಪರ್‌ಮಾರ್ಟ್‌ಗಳಿಂದ ಭಾರತೀಯ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ, ತನ್ನ ಮುಸ್ಲಿಮ್ ಪ್ರಜೆಗಳನ್ನು ಭಾರತ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಹ್ಯಾಶ್‌ಟ್ಯಾಗ್‌ಗಳು ಹರಿದಾಡುತ್ತಿವೆ ಮತ್ತು ಕೊಲ್ಲಿ ವಲಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಕೆಲಸಗಳನ್ನು ಕಳೆದುಕೊಳ್ಳಬಹುದು ಎಂಬ ಅಷ್ಟೇನೂ ಪರೋಕ್ಷವಲ್ಲದ ಬೆದರಿಕೆಗಳು ಹೊರಬೀಳುತ್ತಿವೆ. ಖತರ್ ಒಂದು ಹೆಜ್ಜೆ ಮುಂದೆ ಹೋಗಿ ಪ್ರವಾಸದಲ್ಲಿರುವ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗಾಗಿ ಆಯೋಜಿಸಲಾಗಿದ್ದ ಅಧಿಕೃತ ಭೋಜನವನ್ನು ರದ್ದುಗೊಳಿಸಿದೆ’’.

ಶರ್ಮಾ ಮತ್ತು ಜಿಂದಾಲ್ ಭಾರತೀಯ ಜನತಾ ಪಕ್ಷದ ಸದಸ್ಯರೆನ್ನಲಾಗಿದೆ. ಆದರೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ಭಾರತೀಯರು, ಭಾರತೀಯ ಸಂವಿಧಾನ ಮತ್ತು ಭಾರತದ ಕಾನೂನುಗಳಿಗೆ ಒಳಪಟ್ಟವರು. ಅವರು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಮತ್ತು ಮುಜುಗರಕ್ಕೆ ಸಿಲುಕಿಸಿದ್ದಾರೆ. ಅವರ ಹೇಳಿಕೆಗಳು ಭಾರತದ ಅಂತರ್‌ರಾಷ್ಟ್ರೀಯ ಸ್ಥಾನಮಾನಕ್ಕೆ ಚ್ಯುತಿ ತಂದದ್ದಷ್ಟೇ ಅಲ್ಲ, ಸಾಮಾಜಿಕ ಅಶಾಂತಿಗೂ ಕಾರಣವಾಗಿವೆ. ಆ ಮೂಲಕ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಲವಾರು ವಿಧಗಳಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿವೆ.

ಸಾಮಾಜಿಕ ಭದ್ರತೆ

ಸುಳ್ಳುಗಳು, ದ್ವೇಷ, ಅಪನಂಬಿಕೆ ಮತ್ತು ಭಯದಿಂದಾಗಿ ಸಾಮಾಜಿಕ ವಾತಾವರಣವು ಈಗಾಗಲೇ ಹಳಸಿದೆ. ನೂಪುರ್ ಶರ್ಮಾ ಮತ್ತು ಜಿಂದಾಲ್‌ರ ಹೇಳಿಕೆಗಳಿಂದಾಗಿ ಅದು ಈಗ ಇನ್ನಷ್ಟು ಹದಗೆಟ್ಟಿದೆ. ಈ ಪರಿಸ್ಥಿತಿಯು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಭದ್ರತೆ ಮತ್ತು ಸಾಮಾಜಿಕ ಭದ್ರತೆಯ ಮೇಲೆಯೂ ಪರಿಣಾಮ ಬೀರುತ್ತದೆ.

ಸಾಮಾಜಿಕ ಅಶಾಂತಿಯಿಂದಾಗಿ ಕಾನೂನು ಮತ್ತು ವ್ಯವಸ್ಥೆಯು ಹದಗೆಡುತ್ತದೆ. ಅದು ಮತ, ಜಾತಿ, ಭಾಷೆ, ಉದ್ಯೋಗ ಯಾವುದನ್ನೂ ನೋಡದೆ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಸಹಜವಾಗಿಯೇ ಕೆಳಸ್ತರದ ಸಾಮಾಜಿಕ-ಆರ್ಥಿಕ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು ಎಂದಿನಂತೆ ಅತಿಹೆಚ್ಚಿನ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಆದರೆ, ಬಹುಷಃ ಉನ್ನತ ಸ್ತರದ ಒಂದು ಶೇಕಡಾ ಜನರನ್ನು ಹೊರತುಪಡಿಸಿ ಉಳಿದ ಎಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುರಕ್ಷತೆ ಮತ್ತು ಭದ್ರತೆಯಿಂದ ವಂಚಿತರಾಗುತ್ತಾರೆ. ಅವರಿಗೆ ಶಾಂತಿಯುತ ಬದುಕನ್ನು ಜೀವಿಸಲು ಕಷ್ಟವಾಗುತ್ತದೆ.

ಆರ್ಥಿಕ ಭದ್ರತೆ

ಭಾರತೀಯ ಆರ್ಥಿಕತೆಯು ಹಲವಾರು ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಇತ್ತೀಚಿನ ಕಾರಣ ಕೊರೋನ ವೈರಸ್ ಸಾಂಕ್ರಾಮಿಕ. ಅದು ಈಗಲೂ ಸಂಕಷ್ಟದತ್ತ ವಾಲುತ್ತಲೇ ಇದೆ. ಜನಸಂಖ್ಯೆಯ ಅಗ್ರ ಒಂದು ಶೇಕಡಾ ಜನರ ಆದಾಯ ರಾಷ್ಟ್ರೀಯ ಆದಾಯದ ಶೇ. 5-7ರಷ್ಟು ಇದೆ. ಶ್ರಮಿಕ ವರ್ಗದ ಶೇ. 15 ಮಂದಿ ತಿಂಗಳಿಗೆ 5,000 ರೂಪಾಯಿಗಿಂತಲೂ ಕಡಿಮೆ ಸಂಪಾದನೆ ಮಾಡುತ್ತಿದ್ದಾರೆ. ತಿಂಗಳಿಗೆ 25,000 ರೂಪಾಯಿ ಸಂಪಾದಿಸುವವರ ಪ್ರಮಾಣ ಶೇ. 10 ಹಾಗೂ ರಾಷ್ಟ್ರೀಯ ಆದಾಯದಲ್ಲಿ ಅವರ ಪಾಲು ಶೇ. 30-35. ಇನ್ನೊಂದು ಅಂಶವನ್ನು ಗಮನಿಸಬೇಕು. ಅಗ್ರ ಶೇ. 1 ಜನರ ಆದಾಯ ಹೆಚ್ಚುತ್ತಿದೆ, ಆದರೆ ತಳದಲ್ಲಿರುವ ಶೇ. 10 ಜನರ ಆದಾಯ ಕುಗ್ಗುತ್ತಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಸಮಾಜದೊಳಗಿನ ಆರ್ಥಿಕ ಅಂತರ ವಿಸ್ತರಿಸುತ್ತಿದೆ ಹಾಗೂ ಅದರ ಜೊತೆಗೆ ಆಕ್ರೋಶ ಮತ್ತು ಅತೃಪ್ತಿ ಹೆಚ್ಚುತ್ತಿದೆ.

ಮುಸ್ಲಿಮ್ ದೇಶಗಳು ಭಾರತದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಅಥವಾ ತಮ್ಮಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಕೆಲಸದಿಂದ ತೆಗೆದರೆ ಭಾರತದ ಮೇಲೆ ಅದರ ಪರಿಣಾಮ ಏನು? ಅದರ ಕನಿಷ್ಠ ಪರಿಣಾಮವೆಂದರೆ ಅಪಾರ ನಿರುದ್ಯೋಗ ಮತ್ತು ಆದಾಯ ಭದ್ರತೆ ನಷ್ಟ. ಇದು ಸಹಜವಾಗಿಯೇ ಆರ್ಥಿಕ ಕಾರಣಗಳಿಂದ ಹುಟ್ಟಿಕೊಳ್ಳುವ ಸಾಮಾಜಿಕ ಅಶಾಂತಿಯನ್ನು ಹೆಚ್ಚಿಸುತ್ತದೆ.

ರಾಷ್ಟ್ರೀಯ ಭದ್ರತೆ

ಈ ಪರಿಸ್ಥಿತಿಯು ರಾಷ್ಟ್ರೀಯ ಭದ್ರತೆಯ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ನಮ್ಮ ಸೈನಿಕರು ಚೀನಾ ಮತ್ತು ಪಾಕಿಸ್ತಾನಗಳ ಸೈನಿಕರನ್ನು ಎದುರಿಸುತ್ತಾ ನಮ್ಮ ಗಡಿಗಳನ್ನು ಕಾಯುತ್ತಾರೆ ಅಥವಾ ಆಂತರಿಕ ಭದ್ರತೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ತಮ್ಮ ಕುಟುಂಬಗಳಿಂದ ತುಂಬಾ ದೂರದಲ್ಲಿರುತ್ತಾರೆ. ಸಾಮಾಜಿಕ ಅಶಾಂತಿಯು ಸೈನಿಕರ ಕುಟುಂಬಗಳ ಭದ್ರತೆಯ ಮೇಲೂ ಪರಿಣಾಮ ಬೀರಬಹುದು. ಆಗ ಸೈನಿಕರ ಮನಸ್ಸುಗಳು ವಿಚಲಿತಗೊಳ್ಳಬಹುದು. ಆಗ ಅತಿಕ್ರಮಣ, ಒಳನುಸುಳುವಿಕೆ, ಆಕ್ರಮಣ ಮುಂತಾದುವುಗಳಿಂದ ನಮ್ಮ ಗಡಿಗಳನ್ನು ರಕ್ಷಿಸುವ ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸೈನಿಕರಿಗೆ ಸಾಧ್ಯವಾಗದೇ ಇರಬಹುದು.

ಭಾರತದ ಸಾಮಾಜಿಕ ಅಶಾಂತಿಯ ಪ್ರಯೋಜನಗಳನ್ನು ಚೀನಾ ಮತ್ತು ಪಾಕಿಸ್ತಾನ ಮುಂತಾದ ನಮ್ಮ ಶತ್ರು ರಾಷ್ಟ್ರಗಳು ಚೆನ್ನಾಗಿಯೇ ಪಡೆದುಕೊಳ್ಳಬಹುದು. ಸಾಮಾಜಿಕ ಅಶಾಂತಿ ಸಂಭವಿಸಿದರೆ ಹಾಗೂ ನಿಯಂತ್ರಣಕ್ಕೆ ಬಾರದಿದ್ದರೆ ಅದರ ನಿಯಂತ್ರಣಕ್ಕೆ ಅಂತಿಮವಾಗಿ ಕೇಂದ್ರ ಅಥವಾ ರಾಜ್ಯ ಸರಕಾರಗಳು ಸೇನೆಯನ್ನು ನಿಯೋಜಿಸಬಹುದಾಗಿದೆ. ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ಪೊಲೀಸರದ್ದು. ಆದರೆ ಸಾಮಾಜಿಕ ಅಶಾಂತಿಯಿಂದಾಗಿ ಅದನ್ನು ನಿಭಾಯಿಸಲು ಸಾಧ್ಯವಾಗದ ಸ್ಥಿತಿ ಏರ್ಪಟ್ಟರೆ ನಮ್ಮ ಸಶಸ್ತ್ರ ಪಡೆಗಳ ಗಣನೀಯ ಭಾಗವನ್ನು ದೇಶದೊಳಗೆ ನಿಯೋಜಿಸಬಹುದಾಗಿದೆ.

ಸಾಮಾಜಿಕ ಅಶಾಂತಿಯಿಂದಾಗಿ ಸೈನಿಕರು ಮತ್ತು ಸೇನಾ ಉಪಕರಣಗಳ ಕ್ಷಿಪ್ರ ಸಾಗಾಟವೂ ಅಸಾಧ್ಯವಾಗುತ್ತದೆ. ಒಂದು ವೇಳೆ ಇದೇ ಸಂದರ್ಭದಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ತಮ್ಮ ಆಕ್ರಮಣಕಾರಿ ಧೋರಣೆಯನ್ನು ಹೆಚ್ಚಿಸಿದರೆ ದೇಶದೊಳಗೆ ಇರುವ ಸೈನಿಕರಿಗೆ ಗಡಿಗಳಿಗೆ ಧಾವಿಸುವುದು ಕಷ್ಟವಾಗಬಹುದು. ಹಾಗಾಗಿ, ಸಾಮಾಜಿಕ ಅಶಾಂತಿಯು ನಮ್ಮ ಸೇನೆಯ ಕಾರ್ಯಾಚರಣೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದೆ. ಅದು ಅಂತಿಮವಾಗಿ ನಮ್ಮ ಬಾಹ್ಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ.

ರಾಷ್ಟ್ರೀಯ ಭದ್ರತೆಯು ಮೂರು ಮಹತ್ವದ ಅಂಶಗಳನ್ನು ಒಳಗೊಂಡಿದೆ: ಅವುಗಳೆಂದರೆ- ನಮ್ಮ ವೈವಿಧ್ಯ ದೇಶದ ಜನರು, ಸಮಾಜಗಳು ಮತ್ತು ಸಮುದಾಯಗಳ ಭದ್ರತೆಯನ್ನು ಒಳಗೊಂಡ ಸಾಮಾಜಿಕ ಭದ್ರತೆ; ಆರ್ಥಿಕ ಭದ್ರತೆ; ಮತ್ತು ಆಂತರಿಕ ಮತ್ತು ಬಾಹ್ಯ ರಾಜಕೀಯ ಮತ್ತು ಭೌಗೋಳಿಕ ಸಾರ್ವಭೌಮತೆ ಮತ್ತು ಭದ್ರತೆ.

ಇಂಧನ ಭದ್ರತೆ, ಆಹಾರ ಮತ್ತು ನೀರಿನ ಭದ್ರತೆ ಮುಂತಾದ ಇತರ ಅಂಶಗಳೂ ಮಹತ್ವದ್ದಾಗಿವೆ. ಆದರೆ ಪ್ರಸಕ್ತ ವಿಷಯಕ್ಕೆ ಅವುಗಳು ಪ್ರಸ್ತುತವಲ್ಲ.

ರಾಷ್ಟ್ರೀಯ ಭದ್ರತೆಯ ಯಾವುದೇ ಅಂಶವನ್ನು ಬಾಧಿಸುವ ವಿಷಯದತ್ತ ಭಾರತ ಸರಕಾರವು ತುರ್ತು ಗಮನ ನೀಡುವುದು ಅಗತ್ಯವಾಗಿದೆ. ಹಾಗಾಗಿ, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಬಹುಷಃ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಭಾರತ ಸರಕಾರ ಪರಿಶೀಲಿಸಬೇಕಾಗಬಹುದು. ಅದು ತೆಗೆದುಕೊಳ್ಳುವ ಕ್ರಮವು ಮಾದರಿಯಾಗಿರಬೇಕು.

 - thecitizen.in

Writer - ಎಸ್.ಜಿ. ಒಂಬತ್ತುಕೆರೆ

contributor

Editor - ಎಸ್.ಜಿ. ಒಂಬತ್ತುಕೆರೆ

contributor

Similar News