ಪಠ್ಯ ಪರಿಷ್ಕರಣೆಯನ್ನು ಶಿಕ್ಷಣ ಇಲಾಖೆಗೆ ಬಿಟ್ಟು ಬಿಡಿ, ರಾಜಕಾರಣ ಬೇಡ: ಬಸವರಾಜ ಹೊರಟ್ಟಿ

Update: 2022-06-10 12:24 GMT

ಧಾರವಾಡ, ಜೂ. 10: ‘ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ರಾಜಕಾರಣ ಮಾಡುವುದು ಸರಿಯಲ್ಲ. ಪಠ್ಯ ಪರಿಷ್ಕರಣೆಯನ್ನು ಶಿಕ್ಷಣ ಇಲಾಖೆಗೆ ಬಿಡಬೇಕು' ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೇರೆ ದೇಶಗಳಲ್ಲಿ ಶಿಕ್ಷಣ ನೀತಿಯಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆಗಳು ಆಗುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮಾತ್ರ ಸರಕಾರ, ಸಚಿವರು ಬದಲಾವಣೆ ಮಾಡಿದಾಗಲೆಲ್ಲ ಶಿಕ್ಷಣ ಕ್ರಮದಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದೀಗ ವಿಧಾನ ಪರಿಷತ್ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ನಡೆಯುತ್ತಿದ್ದು, ಆ ಬಳಿಕ ಪರಿಷ್ಕøತ ಪಠ್ಯಗಳನ್ನು ಅಧ್ಯಯನ ಮಾಡುತ್ತೇನೆ. ನಂತರ ನನ್ನ ಸಲಹೆಯನ್ನು ಸರಕಾರಕ್ಕೆ ನೀಡುತ್ತೇನೆ' ಎಂದ ಬಸವರಾಜ ಹೊರಟ್ಟಿ, ‘ಸಮಾಜ ಸುಧಾರಕ ಬಸವಣ್ಣನವರ ವಿಚಾರದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ನನಗಿಂತ ದೊಡ್ಡವ: ‘ವಿಪಕ್ಷ ನಾಯಕ ಸಿದ್ದರಾಮಯ್ಯ ನನಗಿಂತ 1ವರ್ಷ ಹತ್ತು ತಿಂಗಳು ದೊಡ್ಡವ. ಅವನಿಗೆ ಎರಡ್ಮೂರು ಮೊಮ್ಮಕ್ಕಳಿದ್ದಾರೆ. ಕರೆದುಕೊಂಡು ಕುಳಿತುಕೊಳ್ಳಬೇಕಿತ್ತಲ್ಲ? ಒಬ್ಬರ ಕಣ್ಣಲ್ಲಿ ಬೆರಳು ಚುಚ್ಚಲು ಹೋದಾಗ ತಮ್ಮ ಕಣ್ಣನ್ನು ನೋಡಿಕೊಳ್ಳಬೇಕು' ಎಂದು ಬಸವರಾಜ ಹೊರಟ್ಟಿ ತಿರುಗೇಟು ನೀಡಿದರು.

‘ನಾನು ನನ್ನ ಅನುಭವದಲ್ಲಿ 16 ಮಂದಿ ಮುಖ್ಯಮಂತ್ರಿಗಳು, 482 ಮಾಜಿ ಸಚಿವರನ್ನು ನೋಡಿದ್ದೇನೆ. ಇದೇ ವೇಳೆ 1,200 ಮಂದಿ ತೀರಿ ಹೋದ ಪರಿಷತ್ ಸದಸ್ಯರನ್ನು ಕಂಡಿದ್ದೇನೆ. ಆದರೆ, ರಾಜಕಾರಣದಲ್ಲಿ ಯಾರೂ ವೈರಿಗಳಲ್ಲ, ಗೆಳೆಯರೂ ಅಲ್ಲ. ಪ್ರಾಮಾಣಿಕ, ಅಪ್ರಾಮಾಣಿಕ ಎಂದೂ ಹೇಳಲು ಸಾಧ್ಯವಿಲ್ಲ. ನನಗೆ ಎಲ್ಲವೂ ಗೊತ್ತಿದೆ' ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News