ಹೈಕೋರ್ಟ್ ಒಳಗೆ ನಮಾಜ್ ದೃಶ್ಯಾವಳಿ ಚಿತ್ರೀಕರಿಸಿ, ಪ್ರಸಾರ; ಆರೋಪಿ 'ಸಂವಾದ' ಸಂಪಾದಕ ವೃಷಾಂಕ ಭಟ್‍ಗೆ ಜಾಮೀನು

Update: 2022-06-10 14:20 GMT

ಬೆಂಗಳೂರು, ಜೂ.10: ಹೈಕೋರ್ಟ್‍ನ ಕಚೇರಿ ಕೊಠಡಿಯೊಳಗೆ ಇಬ್ಬರು ಮಹಿಳೆಯರು ನಮಾಝ್ ಮಾಡುತ್ತಿರುವ ದೃಶ್ಯಾವಳಿಯನ್ನು ಚಿತ್ರೀಕರಿಸಿ ಸಂವಾದದ ಯೂಟ್ಯೂಬ್ ಚಾನಲ್ ಹಾಗೂ ಫೇಸ್‍ಬುಕ್ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿದ್ದ ಪ್ರಕರಣದಲ್ಲಿ ಸಂವಾದದ ಸಂಪಾದಕ ವೃಷಾಂಕ ಭಟ್ ನಿವಣೆ ಅವರಿಗೆ ನಗರದ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಂವಾದ ಸಂಪಾದಕ ವೃಷಾಂಕ ಭಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆದೇಶ ನೀಡಿದೆ.

'ಕರ್ನಾಟಕ ಹೈಕೋರ್ಟ್‍ನಲ್ಲಿ ನಮಾಜ್’ ಹೆಸರಿನಲ್ಲಿ ಫೇಸ್‍ಬುಕ್ ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ 1.48 ನಿಮಿಷಗಳ ದೃಶ್ಯವನ್ನು ಮೇ 14 ರಂದು ಅಪ್‍ಲೋಡ್ ಮಾಡಲಾಗಿತ್ತು. ಅನುಮತಿ ಇಲ್ಲದೇ ಹೈಕೋರ್ಟ್ ಆವರಣದೊಳಗೆ ಪ್ರವೇಶಿಸುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಿದ್ದೂ, ಹೈಕೋರ್ಟ್ ಒಳಗೆ ಬಂದು ನಿಯಮ ಉಲ್ಲಂಘಿಸಿ ಚಿತ್ರೀಕರಿಸಲಾಗಿದೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೊ ತುಣುಕು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತದೆ. ಹೀಗಾಗಿ, ವಿಡಿಯೋ ಚಿತ್ರೀಕರಿಸಿ ಅಪ್‍ಲೋಡ್ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇವೆ ಎಂದು ಹೈಕೋರ್ಟ್ ಉಸ್ತುವಾರಿ ರಿಜಿಸ್ಟ್ರಾರ್(ಆಡಳಿತ) ಎನ್.ಜಿ.ದಿನೇಶ್ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಸಂವಾದ ಸಂಸ್ಥೆಯ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಮತ್ತು 505(2) (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆಗಳು) ಅಡಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News