ಸಾರಿಗೆ ನೌಕರರ ವೇತನ ಪರಿಷ್ಕರಣೆ: ಕಾನೂನು ಬಾಹಿರ ಸುತ್ತೋಲೆ ಹಿಂಪಡೆಯಲು ಆಗ್ರಹ

Update: 2022-06-10 18:00 GMT

ಬೆಂಗಳೂರು, ಜೂ. 10: ‘ನಿಗಮ ಮಂಡಳಿಗಳು, ಕೈಗಾರಿಕೆಗಳು ಮತ್ತಿತ್ತರ ಘಟಕಗಳ ನೌಕರರ ವೇತನ ಮತ್ತು ಭತ್ತೆಗಳ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಹೊರಡಿಸಿರುವ ಸುತ್ತೋಲೆ, ಕಾನೂನುಬಾಹಿರ, ಅನೈತಿಕ, ಕಾರ್ಮಿಕ ವಿರೋಧಿಯಾಗಿದೆ. ಆದುದರಿಂದ ಈ ಸುತ್ತೋಲೆ ಹಿಂಪಡೆದು, ಸಾರಿಗೆ ನಿಗಮಗಳಲ್ಲಿ ವೇತನ ಒಪ್ಪಂದವನ್ನು ಕಾರ್ಮಿಕ ಸಂಘಟನೆಗಳೊಂದಿಗೆ ಮಾಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು' ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ಸಿಎಂಗೆ ಮನವಿ ಮಾಡಿದೆ.

ಶುಕ್ರವಾರ ಈ ಸಂಬಂಧ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ‘ವೇತನ ಪರಿಷ್ಕರಣೆಗೆ ಯಾವುದೇ ಪ್ರಸ್ತಾವನೆಗೆ ಮೊದಲು ಹಣಕಾಸು ಇಲಾಖೆ ಪ್ರತಿನಿಧಿ ಸಹಿತ ತಜ್ಞರ ಸಮಿತಿ ಪರಿಗಣಿಸಬೇಕು ಮತ್ತು ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆ ಪೂರ್ವಾನುಮತಿ ಕಡ್ಡಾಯ. ಇಂತಹ ಪರಿಷ್ಕರಣೆಯಿಂದ ನೇರವಾಗಿ ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳಕೂಡದು ಎಂಬುದು ಹಾಸ್ಯಾಸ್ಪದ ಶಿಫಾರಸ್ಸು. ಸರಕಾರ ವೇತನ ಪರಿಷ್ಕರಣೆಗೆ ಯಾವುದೇ ಹಣ ಕೊಡದಿದ್ದರೆ, ಅದರ ಅನುಮತಿ ಏತಕ್ಕೆ ಬೇಕು? ಹೊಳೆಯ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ಸಂಸ್ಥೆಯನ್ನು ನಡೆಸುವ ಆಡಳಿತದ ನೀತಿ-ನಿರೂಪಣೆಯಲ್ಲಿ ಕಾರ್ಮಿಕನ ಪಾತ್ರ ಏನೆಂದು ತಿಳಿಸಿಲ್ಲ. ಆಡಳಿತಗಾರರ ಹುಚ್ಚು ಮತ್ತು ಅದಕ್ಷ ಆಡಳಿತದಿಂದ ನಷ್ಟವಾದರೆ ನೌಕರರಿಗೆ ವೇತನ ಪರಿಷ್ಕರಣೆ ಇಲ್ಲದೆ ಶಿಕ್ಷಿಸುವುದು ಯಾವ ನ್ಯಾಯ? ಸರಕಾರದ ಸುತ್ತೋಲೆ ಕಾರ್ಮಿಕ ವಿರೋಧಿ ಮಾತ್ರವಲ್ಲ, ಪಾಳೆಗಾರ ಮತ್ತು ಪ್ರತಿಗಾಮಿ ದಿಕ್ಕಿನಲ್ಲಿದೆ ಹಾಗೂ ಸಂವಿಧಾನ ವಿರೋಧಿ. ಜತೆಗೆ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ' ಎಂದು ಅನಂತಸುಬ್ಬರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ಅನ್ವಯಿಸಿದರೆ ಈ ನಿಗಮಗಳು ನಿರಂತರವಾಗಿ ನಷ್ಟ ಅನುಭವಿಸುತ್ತಿರುವುದರಿಂದ ಅವರ ಜನ್ಮದಲ್ಲೇ ವೇತನ ಹೆಚ್ಚಳ ಆಗುವುದಿಲ್ಲ. ಸರಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಮೊದಲು ನಾಲ್ಕು ನಿಗಮಗಳನ್ನು ವಿಲೀನಗೊಳಿಸಬೇಕು. ಸರಕಾರದ ಸಾರ್ವಜನಿಕ ಉದ್ದಿಮೆ ಇಲಾಖೆಗೆ ವಾಸ್ತವದ ಅರಿವಿಲ್ಲ. ಅವರು ದಂತಗೋಪುರದಲ್ಲಿದ್ದಾರೆ. ಈ ವಿಷಯದಲ್ಲಿ ಏಕಪಕ್ಷೀಯವಾಗಿ ಮನಸೋ ಇಚ್ಛೆ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಸಂಬಂಧಪಟ್ಟ ಭಾಗೀದಾರರ ಜೊತೆ ಸೌಜನ್ಯಕ್ಕೂ ಚರ್ಚಿಸಿಲ್ಲ' ಎಂದು ಅನಂತ ಸುಬ್ಬರಾವ್ ಆಕ್ಷೇಪಿಸಿದ್ದಾರೆ.

‘ಸುತ್ತೋಲೆಯಲ್ಲಿ ಸಾರಿಗೆ ನಿಗಮಗಳ ಅಥವಾ ಸಾರ್ವಜನಿಕ ಉದ್ದಿಮೆಗಳ ಲಾಭ, ನಷ್ಟಗಳ ಬಗ್ಗೆ ಒತ್ತಿ ಹೇಳಲಾಗಿದೆ. ಈ ವಿಷಯದಲ್ಲಿ ಸಂಸ್ಥೆಯ ನಷ್ಟಗಳಿಗೆ ಕಾರ್ಮಿಕರು ಕಾರಣರಲ್ಲ, ಆಡಳಿತ ವರ್ಗದ ತಪ್ಪು ನೀತಿಗಳಿಗೆ ಕಾರ್ಮಿಕರನ್ನು ಬಲಿ ಕೊಡುವುದು ಅಕ್ಷಮ್ಯ ಅಪರಾಧ. ಇತ್ತೀಚೆಗೆ ಮಂತ್ರಿ-ಶಾಸಕರ ವೇತನ, ಭತ್ಯೆಯನ್ನು ಸರಕಾರ ಆಳೆತ್ತರಕ್ಕೆ ಏರಿಸಿತು. ಜೊತೆಗೆ ಐದು ವರ್ಷಕೊಮ್ಮೆ ಸ್ವಯಂ ಏರಿಕೆಗೆ ನಿರ್ಧರಿಸಿತು. ಹಾಗಾದರೆ ಸರಕಾರ ಲಾಭದಲ್ಲಿದೆಯೇ?' ಎಂದು ಪ್ರಶ್ನಿಸಿರುವ ಅನಂತಸುಬ್ಬರಾವ್, ‘ಸರಕಾರದ ಸುತ್ತೋಲೆ ಕೂಡಲೇ ಹಿಂಪಡೆಯಬೇಕು' ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News