ಪ.ಬಂ.:ಬಾಂಗ್ಲಾದೇಶ ಹೈಕಮಿಷನ್ ಹೊರಗೆ ಗುಂಡು ಹಾರಿಸಿ, ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸ್‌ಟೆಬಲ್

Update: 2022-06-10 18:26 GMT

ಕೋಲ್ಕತಾ, ಜೂ. 10: ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಉಪ ಹೈಕಮಿಷನ್‌ನಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಕಾನ್ಸ್‌ಟೆಬಲ್ ಓರ್ವರು ಹಲವು ಸುತ್ತು ಗುಂಡು ಹಾರಿಸಿ, ಅನಂತರ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ ಮಹಿಳೆಯೋರ್ವರು ಗುಂಡು ತಗುಲಿ ಮೃತಪಟ್ಟಿದ್ದಾರೆ.

ಕೊಲ್ಕತ್ತಾ ಪೊಲೀಸ್ ಕಾನ್ಸ್‌ಟೆಬಲ್ ಚೋಡಪ್ ಲೆಪ್ಚಾ ಅವರು ರಜೆಯಲ್ಲಿದ್ದರು. ಶುಕ್ರವಾರ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ನಗರ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

ಲೆಪ್ಚಾ ಅವರು ತನ್ನ ಸೇವಾ ಆಯುಧ ಎಸ್‌ಎಲ್‌ಆರ್‌ನಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅನಂತರ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

‘‘ಚೋಡಪ್ ಲೆಪ್ಚಾ ಒಂದು ವರ್ಷದ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದರು’’ ಎಂದು ಕೋಲ್ಕತ್ತಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ‘‘ಲೆಪ್ಚಾ ಹಾರಿಸಿದ ಗುಂಡಿನಿಂದ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’’ಎಂದು ಅವರು ತಿಳಿಸಿದ್ದಾರೆ.

ಚೋಡಪ್ ಲೆಪ್ಚಾ ಅವರು ಖಿನ್ನತೆಯಿಂದ ಬಳಲುತ್ತಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಪೂರ್ಣ ಘಟನೆ ಸುಮಾರು ಐದು ನಿಮಿಷಗಳಲ್ಲಿ ಅಂತ್ಯಗೊಂಡಿದೆ’’ ಎಂದು ಪ್ರತ್ಯಕ್ಷದರ್ಶಿ ಬಬ್ಲು ಶೇಖ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News