ಮಹಿಳೆ ಪದವೀಧರೆ ಎಂದ ಮಾತ್ರಕ್ಕೆ ಉದ್ಯೋಗಕ್ಕೆ ಹೋಗಬೇಕೆಂದೇನೂ ಇಲ್ಲ: ಬಾಂಬೆ ಹೈಕೋರ್ಟ್

Update: 2022-06-11 09:31 GMT
ಸಾಂದರ್ಭಿಕ ಚಿತ್ರ

ಮುಂಬೈ: ಮಹಿಳೆಯೊಬ್ಬಳು ಶಿಕ್ಷಿತಳಾಗಿದ್ದಾಳೆ ಎಂಬ ಒಂದೇ ಕಾರಾಣಕ್ಕೆ ಆಕೆ ಉದ್ಯೋಗಕ್ಕೆ ಹೋಗಬೇಕೆಂದೇನೂ ಇಲ್ಲ, ಆಕೆ ಉದ್ಯೋಗ ಪಡೆಯಲು ಅರ್ಹತೆ ಹೊಂದಿದ್ದರೂ ಮನೆಯಲ್ಲಿಯೇ ಉಳಿಯುವ ಅಥವಾ ಉದ್ಯೋಗಕ್ಕೆ ಹೋಗುವ ಕುರಿತಾದ ಆಯ್ಕೆ ಆಕೆಯದ್ದಾಗಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.

ಮಹಿಳೆಯೊಬ್ಬಳು ಪದವೀಧರೆ ಎಂದ ಮಾತ್ರಕ್ಕೆ ಆಕೆ ಉದ್ಯೋಗ ಮಾಡಬೇಕು ಮನೆಯಲ್ಲಿರುವಂತಿಲ್ಲ ಎಂದು ಹೇಳುವಂತಿಲ್ಲ ಎಂದು ಜಸ್ಟಿಸ್ ಭಾರತಿ ಡಂಗ್ರೆ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದರು.

"ಇಂದು ನಾನೊಬ್ಬ ನ್ಯಾಯಾಧೀಶೆ, ನಾಳೆ ನಾನು ಮನೆಯಲ್ಲಿಯೇ ಉಳಿದುಕೊಳ್ಳಲು ಬಯಸಬಹುದು. ಆಗ ನೀವು ನ್ಯಾಯಾಧೀಶೆಯಾಗಲು ಅರ್ಹರು ಮನೆಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ ಎಂದು ಹೇಳುತ್ತೀರಾ,''ಎಂದು ಅವರು ಪ್ರಶ್ನಿಸಿದರು.

ಪತ್ನಿ ನಿಯಮಿತ ಆದಾಯ ಗಳಿಸುತ್ತಿರುವ ಹೊರತಾಗಿಯೂ ಆಕೆಗೆ ಜೀವನಾಂಶ ಕೊಡಬೇಕೆಂದು ಸೂಚಿಸಿ ಪುಣೆಯ ಕುಟುಂಬ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಮೇಲಿನಂತೆ ಹೇಳಿದ್ದಾರೆ.

ಅರ್ಜಿದಾರರ ಪತ್ನಿಗೆ ಉದ್ಯೋಗವಿರುವ ಹೊರತಾಗಿಯೂ ಆಕೆಗೆ ಮಾಸಿಕ ರೂ. 5000 ಜೀವನಾಂಶ ಹಾಗೂ ಪುತ್ರಿಯ ಪಾಲನೆಗಾಗಿ ರೂ. 7000 ನೀಡಬೇಕೆಂಬ ಕುಟುಂಬ ನ್ಯಾಯಾಲಯದ ತೀರ್ಪು ನ್ಯಾಯೋಚಿತವಲ್ಲ ಎಂದು ಆತ ವಾದಿಸಿದ್ದರು.

ಈ ನಿರ್ದಿಷ್ಟ ಪ್ರಕರಣದಲ್ಲಿ 2010ರಲ್ಲಿ ವಿವಾಹವಾಗಿದ್ದ ದಂಪತಿ 2013ರಲ್ಲಿ ಪ್ರತ್ಯೇಕಗೊಂಡ ನಂತರ ಅರ್ಜಿದಾರನ ಪತ್ನಿ ತನ್ನ ಪುತ್ರಿಯೊಂದಿಗೆ ಪ್ರತ್ಯೇಕ ವಾಸಿಸಲಾರಂಭಿಸಿದ್ದರು. ನಂತರ 2013ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಮಹಿಳೆ ತನ್ನ ಪತಿ ಮತ್ತಾತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಳು. ಇದು ಬಾಕಿಯಿರುವಂತೆಯೇ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು.

ಆದರೆ ಜೀವನಾಂಶ ನೀಡಬೇಕಂದು ನ್ಯಾಯಾಲಯ ಆದೇಶಿಸಿದಾಗ ತನ್ನ ಬಳಿ ಅದನ್ನು ನೀಡಲು ಸಂಪನ್ಮೂಲಗಳು ಉಳಿದಿಲ್ಲ, ಮೇಲಾಗಿ ಪತ್ನಿಗೆ ನಿಯಮಿತ ವೇತನ ದೊರೆಯುವ ಉದ್ಯೋಗವೂ ಇದೆ ಎಂದು ಅರ್ಜಿದಾರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News