ಡೀಸೆಲ್-ಪೆಟ್ರೋಲ್‌ ಪೂರೈಕೆಯಲ್ಲಿ ವ್ಯತ್ಯಯ: ದೇಶದ ಹಲವು ರಾಜ್ಯಗಳಲ್ಲಿ ಇಂಧನ ಕೊರತೆ; ವರದಿ

Update: 2022-06-15 18:42 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅಧಿಕ ಹಣದುಬ್ಬರದ ನಡುವೆಯೇ ದೇಶದಲ್ಲಿ ಮತ್ತೊಂದು ಬಿಕ್ಕಟ್ಟು ತಲೆ ಎತ್ತುತ್ತಿರುವ ಲಕ್ಷಣ ಗೋಚರಿಸತೊಡಗಿದೆ.  ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇದೆ ಎಂದು ವರದಿಯಾಗುತ್ತಿದೆ.

ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿದೆ. ಈ ರಾಜ್ಯಗಳ ಬಹುತೇಕ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಇಲ್ಲದಿರುವದರಿಂದ, ಪೆಟ್ರೋಲ್ ಪಂಪ್‌ಗಳಲ್ಲಿ ವಾಹನಗಳ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಅದರಲ್ಲೂ ಡೀಸೆಲ್ ಕೊರತೆ ಎದ್ದು ಕಾಣುತ್ತಿದೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಮತ್ತು ಎಸ್ಸಾರ್‌ನ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಗಿದೆ ಎಂದು patrika.com ವರದಿ ಮಾಡಿದೆ.

ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯಿಂದ, ಖಾಸಗಿ ಕಂಪನಿಗಳಿಗೆ ಇಂಧನ ಮಾರಾಟದಲ್ಲಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳು ಸರಬರಾಜು ತೆಗೆದುಕೊಳ್ಳುವುದನ್ನು ನಿಲ್ಲಿಸಿವೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಒಂದು ಸಾವಿರ ಪೆಟ್ರೋಲಿಯಂ ಬಂಕ್‌ಗಳು ಶುಷ್ಕ ಸ್ಥಿತಿಯಲ್ಲಿವೆ. ರಾಜಸ್ಥಾನದಲ್ಲಿ ಸುಮಾರು 2500 ಪೆಟ್ರೋಲ್ ಪಂಪ್‌ಗಳು ಇಂಧನವಿಲ್ಲದೆ ಒಣಗಿದೆ. ಆಗ್ರಾ-ಮುಂಬೈ ರಸ್ತೆ ಮತ್ತು ಇತರ ಹೆದ್ದಾರಿಗಳಲ್ಲಿ ಅರ್ಧಕ್ಕಿಂತ ಹೆಚ್ಚು (60%) ಪಂಪ್‌ಗಳಲ್ಲಿ ಡೀಸೆಲ್ ಖಾಲಿಯಾಗಿವೆ. ಕೆಲವು ಪಂಪ್‌ಗಳಲ್ಲಿ ಇಂಧನವಿದ್ದರೂ, ಅದು ಕೇವಲ ಮೂರು-ನಾಲ್ಕು ದಿನಗಳಿಗೆ ಬೇಕಾದಷ್ಟು ಮಾತ್ರ ಉಳಿದಿದೆ ಎಂದು ವರದಿಯಾಗಿದೆ.

ಇಂಡಿಯನ್ ಆಯಿಲ್ ಪೂರೈಕೆ ಉತ್ತಮವಾಗಿದೆ, ಆದರೆ ಹಿಂದೂಸ್ತಾನ್ ಮತ್ತು ಭಾರತ್ ಪೆಟ್ರೋಲಿಯಂ ಪೂರೈಕೆಯನ್ನು ಕಡಿಮೆ ಮಾಡಿದೆ. ಭುನಾರಿಯಲ್ಲಿನ ಡಿಪೋದ ಸಮಯವನ್ನು ಸಹ 2 ಗಂಟೆಗಳಷ್ಟು ಕಡಿಮೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡೀಲರ್‌ಗಳಿಗೆ ಸಾಕಷ್ಟು ಇಂಧನ ಸಿಗುತ್ತಿಲ್ಲ ಎಂದು ಮಧ್ಯಪ್ರದೇಶ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ​​ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

  ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ದೊಡ್ಡ ಪರಿಣಾಮ ರಾಜಸ್ಥಾನದಲ್ಲಿ ಗೋಚರಿಸಿದೆ. ರಾಜಸ್ಥಾನದಲ್ಲಿ ಕಳೆದ 3 ದಿನಗಳಿಂದ ಎರಡು ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಬೇಡಿಕೆ-ಪೂರೈಕೆ ಅನುಪಾತವು ಅಸ್ಥಿರವಾಗಿದೆ ಎಂದು ರಾಜಸ್ಥಾನ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುನೀತ್ ಬಗೈ ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ ತೈಲ ಕಂಪನಿಗಳಿಂದ ಪೆಟ್ರೋಲ್-ಡೀಸೆಲ್ ಬೇಡಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ತೊಂದರೆಯಾದ ನಂತರ ರಾಜಸ್ಥಾನದಲ್ಲಿ ಸುಮಾರು 2500 ಪೆಟ್ರೋಲ್ ಪಂಪ್‌ಗಳು ಒಣಗಿವೆ. ರಾಜಸ್ಥಾನದಲ್ಲಿ ಒಟ್ಟು 6 ಸಾವಿರದ ಏಳುನೂರು ಪಂಪ್‌ಗಳಿದ್ದು,  ಅದರಲ್ಲಿ ಸುಮಾರು 2 ಸಾವಿರ ಪೆಟ್ರೋಲ್ ಪಂಪ್ ಗಳು ಬತ್ತಿರುವುದು  ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿಕೊಟ್ಟಿದೆ. ರಾಜ್ಯದ 1500-2000 ಪೆಟ್ರೋಲ್ ಪಂಪ್‌ಗಳು ಅಂದರೆ ಮೂರನೇ ಒಂದು ಭಾಗದಷ್ಟು ಪಂಪ್‌ಗಳು ಏಕಾಏಕಿ ಮುಚ್ಚಿರುವುದರಿಂದ ಉಳಿದ ಪೆಟ್ರೋಲ್ ಪಂಪ್‌ಗಳು ಈಗ ಮೊದಲಿಗಿಂತ ಹೆಚ್ಚು ಒತ್ತಡದಲ್ಲಿವೆ ಎಂದು ಸುನೀತ್ ಬಗೈ ಹೇಳಿದ್ದಾರೆ. ಐಒಸಿಎಲ್‌ನ ಪೆಟ್ರೋಲ್ ಪಂಪ್‌ನಲ್ಲಿ ಯಾವುದೇ ಕೊರತೆಯಿಲ್ಲದಿರುವುದು ಅದೃಷ್ಟ, ಇಲ್ಲದಿದ್ದರೆ ರಾಜ್ಯದಲ್ಲಿ ತೀವ್ರ ಆಕ್ರೋಶದ ಪರಿಸ್ಥಿತಿ ಉಂಟಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಅದಾಗ್ಯೂ, ಭಾರತ ಸರ್ಕಾರವು ಈ ಬಿಕ್ಕಟ್ಟನ್ನು ತ್ವರಿತವಾಗಿ ಪರಿಹರಿಸಲು ಕೆಲಸ ಮಾಡುತ್ತಿದೆ. ಜೂನ್ 14 ಕ್ಕಿಂತ ಇಂದು ಪರಿಸ್ಥಿತಿ ಉತ್ತಮವಾಗಿದೆ ಎಂದು ಬಗೈ ಹೇಳಿದ್ದಾರೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದ್ದು, ಶ್ರೀಲಂಕಾದಂತಹ ಪರಿಸ್ಥಿತಿ ಬರುವ ಸಾಧ್ಯತೆಯಿಲ್ಲ ಎಂದು ಬಗೈ ಹೇಳಿರುವುದಾಗಿ patrika.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News