ಅಕ್ರಮ ಕಟ್ಟಡ: ಸಿರಿವಂತರಿಗೆ ಮಾತ್ರ ಕಾನೂನು ಯಾಕೆ ಮೆತ್ತಗಾಗುತ್ತದೆ?

Update: 2022-06-17 09:05 GMT

ನಮ್ಮ ಕಾನೂನುತಜ್ಞರು ಕಾನೂನುಗಳನ್ನು ಮರುರಚಿಸುವುದರಲ್ಲಿ ಮಗ್ನರಾಗಿದ್ದಾರೆ. ಆದರೆ ಅವರು ನಮ್ಮ ಸಮಾಜದ ಬಡ ಅಥವಾ ಕಡೆಗಣಿಸಲ್ಪಟ್ಟ ವರ್ಗಗಳ ಕೈಯಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಗುವಂತಹ, ಅಧಿಕಾರಿಗಳು, ರಾಜಕೀಯ ಪ್ರಭಾವಶಾಲಿಗಳು ಕೂಡಾ ಕಾನೂನಿಗೆ ಉತ್ತರದಾಯಿಗಳಾಗುವಂತೆ ಮಾಡುವ ರೀತಿಯಲ್ಲಿ ಕಾನೂನುಗಳನ್ನು ಪುನಾರಚಿಸಿದರೆ ಅದು ಉತ್ತಮ ಯೋಚನೆಯಾಗಲಿದೆ. ಆಗ ಮಾತ್ರವಷ್ಟೇ ಸಂಪನ್ಮೂಲಗಳು ಹಾಗೂ ಸಾಮರ್ಥ್ಯಗಳಿಲ್ಲದ ಸಣ್ಣ ಮನುಷ್ಯರಿಗೂ ಕೂಡಾ ಬದುಕುವ ಹಕ್ಕು ಹಾಗೂ ಘನತೆಯಿಂದ ಬಾಳುವ ಹಕ್ಕನ್ನು ಸಂವಿಧಾನವು ನಮಗೆ ಖಾತರಿಪಡಿಸಿರುವುದಕ್ಕೆ ಅರ್ಥ ಸಿಗಲಿದೆ.

ದೇಶದಲ್ಲಿ ಎರಡು ಕಾನೂನು ವ್ಯವಸ್ಥೆಗಳು  ಜಾರಿಯಲ್ಲಿವೆಯೇ? ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಮಾರ್ಮಿಕವಾಗಿ ಪ್ರಶ್ನಿಸಿತ್ತು. ‘‘ಶ್ರೀಮಂತರು, ಸಂಪನ್ಮೂಲಭರಿತರು ಹಾಗೂ ರಾಜಕೀಯ ಶಕ್ತಿಯನ್ನು ಬಳಸುವವರು ಮತ್ತು ಪ್ರಭಾವ ಬೀರುವವರಿಗೊಂದು, ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳಿಲ್ಲದ ಸಣ್ಣ ವ್ಯಕ್ತಿಗಳಿಗೆ,  ನ್ಯಾಯವನ್ನು ಪಡೆಯಲು ಅಥವಾ ಅನ್ಯಾಯದ ವಿರುದ್ಧ ಹೋರಾಡುವವರಿಗೆ ಇನ್ನೊಂದು’’ ಎಂಬಂತಹ ಎರಡು ಸಮಾನಾಂತರ ಕಾನೂನು ವ್ಯವಸ್ಥೆಗಳನ್ನು ಹೊಂದಲು ಸಾಧ್ಯವಿಲ್ಲವೆಂದು ಅದು ಖಾರವಾಗಿ ಹೇಳಿತ್ತು.

ಒಳ್ಳೆಯದು. ಆದರೆ ವಾಸ್ತವವಾಗಿ ದೇಶದಲ್ಲಿ ಎರಡು ಸಮಾನಾಂತರ ಕಾನೂನು ವ್ಯವಸ್ಥೆಗಳು  ಕಾರ್ಯನಿರ್ವಹಿಸುತ್ತಿವೆ ಎಂಬಂತಹ ಪರಿಸ್ಥಿತಿಯಿದೆ. ಮುಂಡ್ಕಾದಲ್ಲಿ ನಡೆದ ಅಗ್ನಿದುರಂತ ಹಾಗೂ ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಬುಲ್‌ಡೋಜರ್ ಬೆಂಬಲಿತ ನೆಲಸಮ ಕಾರ್ಯಾಚರಣೆಗಳು, ಇಂತಹ ವ್ಯವಸ್ಥೆ ಅಸ್ತಿತ್ವದಲ್ಲಿರುವುದನ್ನು ಜಗಜ್ಜಾಹೀರುಗೊಳಿಸಿದೆ.

ದೇಶದ ಇತರ ಭಾಗಗಳಲ್ಲಿರುವ ಹಾಗೆ, ದಿಲ್ಲಿ ಹಾಗೂ ಅದರ ಆಸುಪಾಸಿನ ಪ್ರದೇಶಗಳಲ್ಲಿ ಹಲವಾರು ಅಕ್ರಮ ಕಟ್ಟಡಗಳು ಇರುವುದು ಬಹಿರಂಗ ರಹಸ್ಯವಾಗಿದೆ. ದಿಲ್ಲಿಯ ಮಟ್ಟಿಗೆ ಹೇಳುವುದಾದರೆ, ಅಲ್ಲಿನ ಶೇ.80ರಷ್ಟು ಕಟ್ಟಡಗಳನ್ನು ಅಕ್ರಮ ಹಾಗೂ ಅತಿಕ್ರಮಿತವಾದವು ಎಂಬುದಾಗಿ ಕರೆಯಬಹುದಾಗಿದೆಯೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದರು. ಒಂದು ವೇಳೆ ಇತ್ತೀಚೆಗೆ ನಡೆದ ಅನಧಿಕೃತ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಮುಂದುವರಿದದ್ದೇ ಆದಲ್ಲಿ ಸುಮಾರು 63 ಲಕ್ಷ ಜನರು ನಿರ್ವಸಿತರಾಗಲಿದ್ದಾರೆಂದು ಅಂದಾಜಿಸಲಾಗಿದೆ.

ಹೀಗೆ ಮನೆಮಾರು ಕಳೆದುಕೊಂಡವರಲ್ಲಿ ಬಹುತೇಕ ಮಂದಿ ಬಡವರೆಂದು ಹಾಗೂ ನಿರ್ಗತಿಕರೆಂದು ನಾನು ಭಾವಿಸುತ್ತೇನೆ. ಯಾಕೆಂದರೆ, ನಗರಾಡಳಿತದ ಅಧಿಕಾರಿಗಳಿಗೆ ಶ್ರೀಮಂತರು ಹಾಗೂ ಸಂಪನ್ಮೂಲಭರಿತರನ್ನಾಗಲಿ ಅಥವಾ ರಾಜಕೀಯವಾಗಿ ಬಲಿಷ್ಠರಾದವರನ್ನು ಅಥವಾ  ಪ್ರಭಾವಿಗಳನ್ನು ಮುಟ್ಟುವ ಧೈರ್ಯವಿಲ್ಲ. ಇತ್ತೀಚಿನ ಕೆಲವು ಉದಾಹರಣೆಗಳನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ, ಎಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿಲ್ಲವೋ ಅಲ್ಲಿ ಅವು ರಾಜಾರೋಷವಾಗಿ ಎದ್ದುನಿಂತಿವೆ.

ದುರಂತವೇನಾದರೂ ಸಂಭವಿಸುವ ಮೊದಲೇ ಅವುಗಳನ್ನು ನೆಲಸಮಗೊಳಿಸಬೇಕಾಗಿದೆ. ದುರದೃಷ್ಟವಶಾತ್ ಅಂತಹ ಕಟ್ಟಡಗಳ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗುತ್ತಿಲ್ಲ. ಯಾಕೆಂದರೆ ಅಂತಹ ಕಟ್ಟಡಗಳ ಜೊತೆ ನಂಟು ಹೊಂದಿರುವವರು, ಶ್ರೀಮಂತರು ಅಥವಾ ರಾಜಕೀಯವಾಗಿ ಪ್ರಭಾವಿಗಳಾಗಿದ್ದಾರೆ.

1997ರಲ್ಲಿ ಸಂಭವಿಸಿದ ದಿಲ್ಲಿಯ ಉಪಹಾರ್ ಚಿತ್ರಮಂದಿರ ದುರಂತವು ನಮ್ಮನ್ನು ಇಂದಿಗೂ ಕಾಡುತ್ತಿದೆ. ಈ ವರ್ಷದ ಜೂನ್ 13ನೇ ತಾರೀಕು, ಈ ಭೀಕರ ದುರಂತದ 25ನೇ ವರ್ಷಾಚರಣೆಯಾಗಿದೆ. 59 ಮಂದಿಯ ಹೃದಯವಿದ್ರಾವಕ ಸಾವು ಹಾಗೂ ನೂರಕ್ಕೂ ಅಧಿಕ ಮಂದಿ ಗಾಯಾಳುಗಳಾದ ಈ ಘಟನೆಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳುತ್ತೇವೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರಾದವರನ್ನು ಕಳೆದುಕೊಂಡ ಕುಟುಂಬಗಳು ಈಗಲೂ ಈ ದುರಂತದ ಕರಾಳ ನೆನಪಿನಿಂದ ಹೊರಬರಲು ಸಾಧ್ಯವಾಗಿಲ್ಲವೆಂಬುದು ನಮಗೆ ಅರಿವಾಗುತ್ತದೆ. ಖಂಡಿತವಾಗಿಯೂ ಮಾಲಕರು ಹಾಗೂ ದುರಂತ ಸಂಭವಿಸಲು ಅನುಮತಿ ನೀಡಿದವರಿಗೆ ಶಿಕ್ಷೆ ದೊರೆತಿದೆ. ಆದರೆ ಕೇವಲ ಅದರಿಂದ ಸಂತ್ರಸ್ತರಿಗೆ ಸಮಾಧಾನ ಸಿಗುವುದು ಕಷ್ಟವಾಗಿದೆ.

ನನ್ನನ್ನು ಕಾಡುವ ಪ್ರಶ್ನೆಗಳಿವು: ಯಾವ ನಗರಾಡಳಿತದ ಅಧಿಕಾರಿಗಳ ಮೂಗಿನ ನೇರಕ್ಕೆ ಈ ದುರಂತ ಸಂಭವಿಸಿದೆ?. ಅವರು ಯಾಕೆ ಯಾವುದೇ ಕಾನೂನುಕ್ರಮ ಕೈಗೊಂಡಿರಲಿಲ್ಲ?. ಈ ಕ್ರಿಮಿನಲ್ ನಿರ್ಲಕ್ಷ್ಯಕ್ಕಾಗಿ ಅವರಿಗೆ ಸೂಕ್ತವಾದ ಶಿಕ್ಷೆಯಾಗಿದೆಯೇ?. ಯಾರಿಗೂ ಗೊತ್ತಿಲ್ಲ ಹಾಗೂ ಎಲ್ಲಾ ಸಂಭವನೀಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಅವರದನ್ನು ಲಘವಾಗಿ ತೆಗೆದುಕೊಂಡಿರಬಹುದು. ಉಪಹಾರ್ ದುರಂತವು ಭಾರತದಲ್ಲಿ ಉತ್ತರದಾಯಿತ್ವದ ಅನುಪಸ್ಥಿತಿಗೆ ಅತಿ ದೊಡ್ಡ ನಿದರ್ಶನವಾಗಿದೆ.

ಉತ್ತರದಾಯಿತ್ವದ ಕೊರತೆಯು ದೀರ್ಘ ಕಾಲೀನ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. ಕಟ್ಟಡ ದುರಂತಗಳು ಸಂಭವಿಸುತ್ತಲೇ ಇದ್ದರೂ, ಸುರಕ್ಷತಾ ಪಾಠಗಳನ್ನು ಕಲಿಯಲಾಗಿಲ್ಲ. ಒಂದು ವೇಳೆ ಕೆಲವು ಪಾಠಗಳನ್ನು ಕಲಿತರೂ, ಅವು ಬೇಗನೇ ಮರೆತುಹೋಗುತ್ತವೆ ಹಾಗೂ ಪರಿಹಾರಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ನೆನಪಿಡಿ ಸಕಾಲದಲ್ಲಿ ಮಾಡುವ ಕೆಲಸ ಮಾತ್ರವೇ ಸಾರ್ಥಕತೆಯನ್ನು ತಂದುಕೊಡುತ್ತದೆ. ಈ ದುರಂತದ ಪರಿಣಾಮವು ವಿಭಿನ್ನ ಮಾರ್ಗಗಳಲ್ಲಿ ಪುನರಾವರ್ತಿಸುತ್ತದೆ ಹಾಗೂ ಈ ಆವರ್ತನವು ಮುಂದುವರಿಯುತ್ತಾ ಹೋಗುತ್ತದೆ. ಇದೀಗ ಇನ್ನೂ ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ.

ದಿಲ್ಲಿಯಲ್ಲಿ ಅಗ್ನಿ ದುರಂತದ ಇತಿಹಾಸಗಳು

2018ರ ಜನವರಿಯಲ್ಲಿ ಸಂಭವಿಸಿದ ಬವಾನಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಸುಮಾರು 17 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಸುಟ್ಟಗಾಯಗಳಿಗೆ ತುತ್ತಾಗಿದ್ದರು. ಕಾರ್ಖಾನೆಯ ಮಾಲಕನನ್ನು ಬಂಧಿಸಲಾಗಿದ್ದು, ಆನಂತರ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಉಪಹಾರ್ ದುರಂತದಿಂದ ಏನಾದರೂ ಪಾಠವನ್ನು ನಾವು ಕಲಿತಿರುವುದು ಇಲ್ಲಿ ಕಂಡುಬರುತ್ತದೆಯೇ ಹಾಗೂ ಉಪಹಾರ್ ಅಗ್ನಿದುರಂತವು  ಮರುಕಳಿಸುವುದಿಲ್ಲವೆಂಬುದನ್ನು ಖಾತರಿಪಡಿಸಲು ಯಾವುದೇ ಲೋಪಪರಿಹಾರಕ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?. ನಗರಾಡಳಿತ ಹಾಗೂ ಇತರ ಶಾಸನಾತ್ಮಕ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡಿಲ್ಲವೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲದೆ ಇದ್ದಲ್ಲಿ ಬವಾನಾ ಕಾರ್ಖಾನೆ ದುರಂತವು ನಡೆಯುತ್ತಿರಲಿಲ್ಲ. ತಮ್ಮ ಕರ್ತವ್ಯಲೋಪಕ್ಕಾಗಿ ಈ ಅಧಿಕಾರಿಗಳನ್ನು ಯಾಕೆ ಹೊಣೆಗಾರರನ್ನಾಗಿಸುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ.

ಇದಾದ ಕೇವಲ ಒಂದು ವರ್ಷದ ಬಳಿಕ ಜನದಟ್ಟಣೆಯ ಕರೋಲ್‌ಬಾಗ್‌ನ ಹೊಟೇಲ್ ಅರ್ಪಿತ್ ಪ್ಯಾಲೇಸ್‌ನಲ್ಲಿ ಇನ್ನೊಂದು ಅಗ್ನಿದುರಂತ ನಡೆದುಹೋಯಿತು. ಮತ್ತೆ 17 ಜೀವಗಳು ಬಲಿಯಾದವು ಹಾಗೂ ಇತರ 35 ಮಂದಿ ಗಾಯಗೊಂಡಿದ್ದರು. ನಗರಾಡಳಿತದ ಅಧಿಕಾರಿಗಳ  ನಿರ್ಲಕ್ಷ್ಯಕ್ಕಾಗಿ ಏನಾದರೂ ಕ್ರಮವನ್ನು ಕೈಗೊಳ್ಳಲಾಗಿದೆಯೇ?.

ಅದೇ ವರ್ಷ 2019ರ ಡಿಸೆಂಬರ್‌ನಲ್ಲಿ ಜನದಟ್ಟಣೆಯ ಸದರ್‌ಬಝಾರ್‌ನ ಆನಂದ್ ಮಂಡಿ ಪ್ರದೇಶದಲ್ಲಿ ನಡೆದ ಇನ್ನೊಂದು ಭೀಕರ ಅಗ್ನಿ ಅನಾಹುತದಲ್ಲಿ 17 ಮಂದಿ ಪ್ರಾಣಕಳೆದುಕೊಂಡರು ಹಾಗೂ 35 ಮಂದಿ ಗಾಯಗೊಂಡರು. ಇದರ ಪರಿಣಾಮವಾಗಿ 43 ಮಂದಿ ಸಾವನ್ನಪ್ಪಿದ್ದರು ಹಾಗೂ 67 ಮಂದಿ ಗಂಭೀರ ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಬಿಹಾರ ಹಾಗೂ ಉತ್ತರಪ್ರದೇಶಗಳ ವಲಸಿಗ ಕಾರ್ಮಿಕರಾಗಿದ್ದರು. ಈ ಕಟ್ಟಡವು ಅಕ್ರಮ ಉತ್ಪಾದನಾ ಘಟಕಗಳ ತಯಾರಿಯ ಕೇಂದ್ರವಾಗಿತ್ತು. ಅದಕ್ಕೆ ಅಗ್ನಿಸುರಕ್ಷತೆಗೆ ಸಂಬಂಧಿಸಿದ ಅನುಮೋದನೆ ದೊರೆತಿರಲಿಲ್ಲ. ಅದರಲ್ಲಿ ದಹನಕಾರಕ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿತ್ತು. ಪ್ರವೇಶದ್ವಾರಗಳು ಸಾಮಗ್ರಿಗಳಿಂದ ಮುಚ್ಚಿಹೋಗಿದ್ದವು. ಇದರಿಂದಾಗಿ ಬೆಂಕಿ ದುರಂತದ ಸಂದರ್ಭ ಕಾರ್ಮಿಕರಿಗೆ  ಪಾರಾಗುವುದು ಕಷ್ಟಕರವಾಗಿತ್ತು. ಮಾತ್ರವಲ್ಲದೆ ಅಲ್ಲಿನ ಕಿಟಕಿಗಳನ್ನು ಕೂಡಾ ಸೀಲ್ ಮಾಡಿದ್ದರಿಂದ ವಿಷಕಾರಿಯಾದ ಹೊಗೆ ಹಾಗೂ ಕಾರ್ಬನ್ ಮೊನಾಕ್ಸೈಡ್ ಕಟ್ಟಡದೊಳಗೆ ತುಂಬಿಕೊಂಡಿದ್ದರಿಂದ ಹಲವು ಕಾರ್ಮಿಕರು ಉಸಿರುಗಟ್ಟಿಯೇ ಮೃತಪಟ್ಟಿದ್ದರು. ಕಟ್ಟಡ ಮಾಲಕ ಹಾಗೂ ಆತನ ಸಹವರ್ತಿಗಳನ್ನು ಬಂಧಿಸಲಾಯಿತು. ಆದರೆ ಅವರನ್ನು ಆನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾನೂನು ಉಲ್ಲಂಘನೆಯಾಗುವುದಕ್ಕೆ ಆಸ್ಪದ ನೀಡಿದ ಪೌರಾಡಳಿತದ ಅಧಿಕಾರಿಗಳು ಹಾಗೂ ಅಗ್ನಿ ಸುರಕ್ಷತೆಯ ಅನುಮೋದನೆ ನೀಡಿದ ಅಧಿಕಾರಿಗಳ ಮೇಲೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ?.  ಈ ದುರಂತಕ್ಕೆ ಕಟ್ಟಡದ ಮಾಲಕರು ಹಾಗೂ ಅವರ ಸಹವರ್ತಿಗಳಷ್ಟೇ ಇವರು ಕೂಡಾ ಕಾರಣರಲ್ಲವೇ?. ಇವರಿಗೆ ಯಾವುದೇ ಹೊಣೆಗಾರಿಕೆ ಇಲ್ಲವೇ ಅಥವಾ ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಲು ಅವರಿಗೆ ಲಂಚ ನೀಡಿರುವ ಸಾಧ್ಯತೆಯಿರುವ ಕಾರಣ ಅವರನ್ನು ಬಿಟ್ಟು ಬಿಡಲಾಯಿತೇ?.

 ಇಂತಹ ಹಲವಾರು ನಿದರ್ಶನಗಳಿವೆ. ‘ಕಲೆಕ್ಟಿವ್ ಡೆಲ್ಲಿ’ ಎಂಬ ವಿದ್ಯಾರ್ಥಿ-ಯುವಜನ ಸಂಘಟನೆಯು, ಇಂತಹ ದುರಂತಗಳನ್ನು ಅತ್ಯುತ್ತಮವಾಗಿ ದಾಖಲಿಸಿದೆ. ಅಲ್ಲಿ ಕಂಡುಬಂದಿರುವ ಕ್ರಿಮಿನಲ್ ನಿರ್ಲಕ್ಷ್ಯದ ರೀತಿಯನ್ನು ವಿವೇಚನಾತ್ಮಕವಾಗಿ ವಿಶ್ಲೇಷಿಸಿದೆ. ಪ್ರಾಥಮಿಕವಾಗಿ, ದುರಂತ ಸಂಭವಿಸಿದ ಬೃಹತ್ ಕಟ್ಟಡಗಳು ಯಾವುದೇ ಅನುಮತಿಸಲ್ಪಟ್ಟ ಕಟ್ಟಡ ನಿರ್ಮಾಣ ಪ್ಲ್ಯಾನ್ ಅನ್ನು ಹೊಂದಿರಲಿಲ್ಲ. ಈ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಹಾಡಹಗಲೇ ಹಲವಾರು ತಿಂಗಳುಗಳ ಕಾಲ ನಡೆಸಲಾಗಿತ್ತು. ಆದರೆ ಆ ಅವಧಿಯಲ್ಲಿ ಮುನ್ಸಿಪಲ್ ಅಧಿಕಾರಿಗಳು ಏನು ಮಾಡುತ್ತಿದ್ದರು?. ಈ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ಅನುಮೋದನೆಯಿರಲಿಲ್ಲ ಹಾಗೂ ಆಘಾತಕಾರಿಯೆಂದರೆ, ಅವು ಅನುಮೋದನೆೆಗಾಗಿ ಅರ್ಜಿ ಕೂಡಾ ಸಲ್ಲಿಸಿರಲಿಲ್ಲ. ಇದರ ಅಂತಿಮ ಪರಿಣಾಮವೆಂದರೆ, ಅವು ಜೀವಂತವಾಗಿ ದಹಿಸುವ ಚಿತಾಗಾರವಾಗಿ ಪರಿವರ್ತನೆಗೊಂಡವು. ಅಲ್ಲದೆ ಮೂಲಭೂತವಾಗಿ ಇರಬೇಕಾಗಿದ್ದ ಅಗ್ನಿಸುರಕ್ಷತಾ ಕ್ರಮಗಳು ಕೂಡಾ ಅವುಗಳಲ್ಲಿ ಇದ್ದಿರಲಿಲ್ಲ. ಅಗತ್ಯವಿರುವ ಸುರಕ್ಷತಾ ಉಪಕರಣಗಳು ಕೂಡಾ ಇರಲಿಲ್ಲ.

ಅಗ್ನಿ ಶಾಮಕಗಳು ಹಾಗೂ ದುರಂತದ ಸ್ಥಳದಿಂದ ಪರಾರಿಯಾಗುವುದಕ್ಕೆ ಬೇಕಾದ ತುರ್ತು ನಿರ್ಗಮನ ದ್ವಾರವೂ  ಇರಲಿಲ್ಲ. ಇಡೀ ಕಟ್ಟಡಕ್ಕೆ ಒಂದೇ ಪ್ರವೇಶ ಹಾಗೂ ನಿರ್ಗಮನ ದ್ವಾರ ಹೀಗೆ ಲೋಪಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ದುರಂತಗಳ ಸರಣಿಗೆ ಮುಂಡ್ಕಾ ಅಗ್ನಿ ಅನಾಹುತ ಇತ್ತೀಚಿನ ಸೇರ್ಪಡೆಯಾಗಿದೆ. ನಾಲ್ಕು ಅಂತಸ್ತುಗಳ ಕಟ್ಟಡದಲ್ಲಿ ಎರಡು ಅಂತಸ್ತುಗಳನ್ನು ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗಿತ್ತು. ಈ ಕಟ್ಟಡಕ್ಕೆ ಯಾವುದೇ ಅಗ್ನಿ ಸುರಕ್ಷತೆಯ ಅನುಮೋದನೆಯಾಗಲಿ ಅಥವಾ ಅಗ್ನಿಶಾಮಕ ಉಪಕರಣಗಳಾಗಲಿ ಇದ್ದಿರಲಿಲ್ಲ. ಅಲ್ಲಿದ್ದ ಬಹುತೇಕ ಕಾರ್ಮಿಕರು ಮಹಿಳೆಯರು. ಬೆಂಕಿಯ ಜ್ವಾಲೆಯಲ್ಲಿ ಸಿಲುಕೊಂಡಿದ್ದರಿಂದ ಕನಿಷ್ಠ 27 ಮಂದಿ  ಜೀವಂತವಾಗಿ ದಹನಗೊಂಡರು. ಅವರಲ್ಲಿ ಕೆಲವರ ಮೃತದೇಹಗಳು ಗುರುತು ಸಿಗಲಾರದಷ್ಟು ಕರಕಲಾಗಿದ್ದವು. ಮೃತರನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗಳನ್ನು ನಡೆಸಬೇಕಾಗಿ ಬಂತು.

 ಈ ಕಟ್ಟಡದಲ್ಲಿಯೂ ಏಕ ಆಗಮನ ಹಾಗೂ ನಿರ್ಗಮನ ದ್ವಾರಗಳಿದ್ದವು. ಏಕಪ್ರವೇಶ ಅಥವಾ ನಿರ್ಗಮನ ದ್ವಾರಗಳಿರುವ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಅನುಮತಿ ನೀಡಿದವರ್ಯಾರು?. ಒಂದು ವೇಳೆ ನಿರ್ಮಾಣಗೊಂಡ ಬಳಿಕವೂ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನುಗಳು ಹಾಗೂ ಅಗ್ನಿಶಾಮಕ ಕಾನೂನುಗಳ ಅನುಸರಣೆಯನ್ನು ಖಾತರಿಪಡಿಸಿರುವ ಬಗ್ಗೆ ಯಾವುದಾರೂ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?. ಇದಕ್ಕೆ ಉತ್ತರ ಇಲ್ಲಿ ಸ್ಪಷ್ಟವಾಗಿದೆ. ಈ ಕಟ್ಟಡದ  ಮಾಲಕರು ಅಥವಾ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಶ್ರೀಮಂತರು ಹಾಗೂ ಬಹುಶಃ ರಾಜಕೀಯವಾಗಿ  ಪ್ರಭಾವಶಾಲಿಗಳಾಗಿದ್ದಾರೆ.

ಈ ‘ಕಾರ್ಖಾನೆ’ಯ ಮಾಲಕನನ್ನು ಬಂಧಿಸಲಾಗಿದೆ. ಆದರೆ ಆತ ಶೀಘ್ರವೇ ಜಾಮೀನಿನಲ್ಲಿ ಬಿಡುಗಡೆಗೊಳ್ಳಲಿದ್ದಾನೆಂಬ ಬಗ್ಗೆ ಎಲ್ಲರಿಗೂ ಖಾತರಿಯಿದೆ. ಈ ಕಟ್ಟಡದ ಮಾಲಕ ಈಗ ತಲೆಮರೆಸಿಕೊಂಡಿದ್ದಾನೆ. ಆತ ಕೂಡಾ ಬಂಧಿಸಲ್ಪಟ್ಟ ಬಳಿಕ ಜಾಮೀನು ಪಡೆಯಬಹುದಾಗಿದೆ. ಇನ್ನು ಅಧಿಕಾರಿಗಳ ವಿಷಯಕ್ಕೆ ಬರುವುದಾದರೆ ಅವರಲ್ಲಿ ಕೆಲವರನ್ನು ಅಮಾನತುಗೊಳಿಸಲಾಗಿದೆಯಷ್ಟೇ.

ಒಟ್ಟಾರೆಯಾಗಿ ಈ ಅಗ್ನಿದುರಂತದಲ್ಲಿ  21 ಮಹಿಳೆಯರು ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಕನಿಷ್ಠ ವೇತನದ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ನೀಡಲಾಗುತ್ತಿತ್ತು. ಆ ಮೂಲಕ ಸಮಕಾಲೀನ ಗುಲಾಮಗಿರಿಗೆ  ಉತ್ತೇಜನ ನೀಡಲಾಗುತ್ತಿತ್ತು. ಆದರೆ ನಾವು ಈ ವಿಪರ್ಯಾಸಕ್ಕೆ ಮೂಕಸಾಕ್ಷಿಗಳಾಗಿ ಕೂತಿದ್ದೇವೆ.

ಜಹಾಂಗೀರ್‌ಪುರಿಯ ಬುಲ್‌ಡೋಜರ್ ನ್ಯಾಯ

 ಶ್ರೀಮಂತ ಹಾಗೂ ಸಂಪನ್ಮೂಲಭರಿತ ವ್ಯಕ್ತಿಗಳ ಮಾಲಕತ್ವದ ಈ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದುದಕ್ಕೆ ವ್ಯತಿರಿಕ್ತವಾಗಿ ಜಹಾಂಗೀರ್‌ಪುರಿಯಲ್ಲಿ ಸಂಪನ್ಮೂಲಗಳಿಲ್ಲದ ಸಾಮಾನ್ಯ ವ್ಯಕ್ತಿಗಳ ವಿರುದ್ಧ ‘ಬುಲ್‌ಡೋಜರ್ ನ್ಯಾಯ’ವನ್ನು ಪ್ರಯೋಗಿಸಲಾಯಿತು. ಯಾವುದೇ ನೋಟಿಸ್ ಹಾಗೂ ಎಚ್ಚರಿಕೆ ಇಲ್ಲದೆ ಸ್ಥಳಕ್ಕೆ ಆಗಮಿಸಿದ ಬುಲ್‌ಡೋಜರ್‌ಗಳು ಬಡಪಾಯಿ ಪುರುಷರು, ಮಹಿಳೆಯರ ಮನೆಗಳನ್ನು, ಅಂಗಡಿ, ತಳ್ಳುಗಾಡಿಗಳನ್ನು ಧ್ವಂಸಗೊಳಿಸಿದವು.

 ಒಂದು ವೇಳೆ ಅವರು ಶ್ರೀಮಂತರು, ಬಲಿಷ್ಠರು ಹಾಗೂ ರಾಜಕೀಯವಾಗಿ ಪ್ರಭಾವಶಾಲಿಗಳಾಗಿದ್ದಲ್ಲಿ ಅವರಿಗೆ ಇಂತಹ ಅನ್ಯಾಯವಾಗುತ್ತಿತ್ತೇ?. ಭಾರತೀಯರ ಈ ಎರಡು ಗುಂಪುಗಳಿಗೆ ಬೇರೆ ಬೇರೆ ಕಾನೂನುಗಳಿವೆಯೇ?. ಬಡವನಾಗಿರುವುದೇ ಅಪರಾಧವೆಂಬ ಹಾಗೆ ತೋರುತ್ತಿದೆ. ನಿಮ್ಮ ಮನೆಯ ಹೊರಭಾಗದಲ್ಲಿ ಒಂದು ದಿನ ಬುಲ್‌ಡೋಜರ್ ನಿಂತಿರುವುದನ್ನು ಹಾಗೂ ಕೆಲವೇ ನಿಮಿಷಗಳ ಆನಂತರ ಅದು ಮನೆಯನ್ನು ನಿಮ್ಮ ಸಾಮಗ್ರಿಗಳು ಹಾಗೂ ಸಾಧನಗಳು ಒಳಗಿರುವಾಗಲೇ ನಾಶಪಡಿಸತೊಡಗಿದರೆ ನಿಮಗೆ ಹೇಗಾಗಬಹುದೆಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ.

ಜಹಾಂಗೀರ್‌ಪುರಿಯಲ್ಲಿ ಸರಕಾರದಿಂದ ಹಿಂಸಾಚಾರಕ್ಕೊಳಗಾದ ಈ ಅಮಾಯಕ ಸಂತ್ರಸ್ತರಿಗೆ ಕನಿಷ್ಠ ನೋಟಿಸನ್ನಾದರೂ ನೀಡಿರಲಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಈ ನೆಲಸಮ ಕಾರ್ಯಾಚರಣೆಯು ಏಕಪಕ್ಷೀಯವಾದುದಾಗಿತ್ತು. ಆದರೆ, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಈ ನೆಲಸಮ ಕಾರ್ಯಾಚರಣೆಯ ವಿರುದ್ಧ ಇಂಜಕ್ಷನ್ (ತಡೆಯಾಜ್ಞೆ) ಜಾರಿಗೊಳಿಸಿದ ಆನಂತರವೂ ಅಧಿಕಾರಿಗಳು ಈ ಹೃದಯಹೀನ ಚಟುವಟಿಕೆಯನ್ನು ಮುಂದುವರಿಸುವ ಉತ್ಸಾಹದಿಂದಿದ್ದರು. ಚರಾಸ್ತಿಯಾದ  ತಳ್ಳುಗಾಡಿಯನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಪೌರಾಡಳಿತದ ಅಧಿಕಾರಿಗಳು ಹೇಗೆ ತಾನೇ ಸಮರ್ಥಿಸಲು ಸಾಧ್ಯ?. ಈ ತಳ್ಳುಗಾಡಿಗಳ ಮಾಲಕರಿಗೆ ಅದನ್ನು ಸುಲಭವಾಗಿ ಕೊಂಡೊಯ್ಯುವಂತೆ ಹೇಳಬಹುದಾಗಿತ್ತು. ಆದರೆ ರಾಜಕೀಯ ಶಕ್ತಿ ಹಾಗೂ ಪ್ರಭಾವವನ್ನು ಹೊಂದಿರುವ ಶ್ರೀಮಂತ ಹಾಗೂ ಸಂಪನ್ಮೂಲಭರಿತ ವ್ಯಕ್ತಿಗಳ ಹಾಗಲ್ಲದೆ, ಸಂಪನ್ಮೂಲಗಳು ಹಾಗೂ ಸಾಮರ್ಥ್ಯಗಳು ಇಲ್ಲದಂತಹ ಈ ‘ಸಣ್ಣ’ ವ್ಯಕ್ತಿಗಳು ಕಾನೂನುಸಮರ ನಡೆಸಲಾರರೆಂಬುದು  ಈ ಪೌರಾಡಳಿತದ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿದೆ.

ಓರ್ವ ಸಣ್ಣ ವ್ಯಕ್ತಿಗೆ, ತನ್ನ ಬದುಕನ್ನು ಅಥವಾ ಮನೆಯನ್ನು ಮತ್ತೆ ಸಂಪೂರ್ಣವಾಗಿ ಮರುನಿರ್ಮಿಸುವುದು ಸುಲಭದ ಕೆಲಸವಲ್ಲ. ಆತನ ಮಾನಸಿಕ ಆರೋಗ್ಯ ಅಂಶವೂ ಇಲ್ಲಿ ಪ್ರಮುಖವಾಗುತ್ತದೆ. ಆತನ ಮನಸ್ಸಿನಲ್ಲಿ  ಉಂಟಾದಂತಹ ಹತಾಶೆ ಹಾಗೂ ಆಘಾತವು, ಅಷ್ಟು ಸುಲಭವಾಗಿ ಬಿಟ್ಟುಹೋಗದು. ಆದರೆ ಅದನ್ನು ನಮ್ಮ ‘ಬುಲ್‌ಡೋಜರ್ ಸಂತುಷ್ಟ’ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಾರೆಯೇ?. ಬೆಂಕಿಯ ಕೆನ್ನಾಲಿಗೆ ಬಲೆಗೆ ಜನರನ್ನು ಸಿಲುಕಿಸುವ ಬೃಹತ್ ಅನಧಿಕೃತ ಕಟ್ಟಡವನ್ನು ಉಳಿಯಲು ಬಿಟ್ಟರೂ ಅಥವಾ ಸಣ್ಣ ಗಾತ್ರದ ಅನಧಿಕೃತ ಕಟ್ಟಡವನ್ನು ನಾಶಪಡಿಸಿದರೂ ತಾವು ಹೊಣೆಗಾರರಾಗುವುದಿಲ್ಲವೆಂಬುದು ಈ ಅಧಿಕಾರಿಗಳಿಗೆ ತಿಳಿದಿದೆ. ಹೀಗಾಗಿ ಅವರ್ಯಾಕೆ ಚಿಂತೆ ಮಾಡಬೇಕು?.

ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂದರೆ ನಮ್ಮ ಅಧಿಕಾರಿಗಳನ್ನು ಯಾವುದೇ ಅನಧಿಕೃತ ಕಟ್ಟಡಗಳ ಮಾಲಕ ಅಥವಾ ಗುತ್ತಿಗೆಗಾರನಷ್ಟೇ ಸಂವಿಧಾನ ಹಾಗೂ ಕಾನೂನಿಗೆ ಹೊಣೆಗಾರರನ್ನಾಗಿ ಮಾಡುವುದು. ತಮ್ಮ ನಿಷ್ಕ್ರಿಯತೆ, ನಿರ್ಲಕ್ಷ್ಯ ಅಥವಾ ಕ್ರಿಮಿನಲ್ ಸ್ವರೂಪದ ನಿರ್ಲಕ್ಷ್ಯಕ್ಕಾಗಿ ಅಧಿಕಾರಿಗಳಿಗೆ ಶಿಕ್ಷೆಯಾಗದೆ ಇರುವ ತನಕ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ನಾವು ಪ್ರತಿ ಬಾರಿಯೂ ಎಚ್ಚರಗೊಳ್ಳುತ್ತೇವೆ ಮತ್ತೆ ಸುಮ್ಮನಾಗುತ್ತೇವೆ. ಇನ್ನೊಂದೆಡೆ ಅಧಿಕಾರಿಗಳಿಗೆ ತಮ್ಮ ಏಕಪಕ್ಷೀಯ ಹಾಗೂ  ದರ್ಪದ ಕೃತ್ಯಗಳಿಗಾಗಿ ಶಿಕ್ಷೆಯಾಗದೆ ಹೋದರೆ, ನಾವು ನಿರ್ಭೀತಿಯ ಸಂಸ್ಕೃತಿಗೆ ಉತ್ತೇಜನ ನೀಡಿದಂತಾಗುತ್ತದೆ.

ನಮ್ಮ ಕಾನೂನುತಜ್ಞರು ಕಾನೂನುಗಳನ್ನು ಮರುರಚಿಸುವುದರಲ್ಲಿ ಮಗ್ನರಾಗಿದ್ದಾರೆ. ಆದರೆ ಅವರು ನಮ್ಮ ಸಮಾಜದ ಬಡ ಅಥವಾ ಕಡೆಗಣಿಸಲ್ಪಟ್ಟ ವರ್ಗಗಳ ಕೈಯಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಗು ವಂತಹ, ಅಧಿಕಾರಿಗಳು, ರಾಜಕೀಯ ಪ್ರಭಾವಶಾಲಿಗಳು ಕೂಡಾ ಕಾನೂನಿಗೆ ಉತ್ತರದಾಯಿಗಳಾಗುವಂತೆ ಮಾಡುವ ರೀತಿಯಲ್ಲಿ ಕಾನೂನುಗಳನ್ನು ಪುನಾರಚಿಸಿದರೆ ಅದು ಉತ್ತಮ ಯೋಚನೆಯಾಗಲಿದೆ. ಆಗ ಮಾತ್ರವಷ್ಟೇ ಸಂಪನ್ಮೂಲಗಳು ಹಾಗೂ ಸಾಮರ್ಥ್ಯಗಳಿಲ್ಲದ ಸಣ್ಣ ಮನುಷ್ಯರಿಗೂ ಕೂಡಾ ಬದುಕುವ ಹಕ್ಕು ಹಾಗೂ ಘನತೆಯಿಂದ ಬಾಳುವ ಹಕ್ಕನ್ನು ಸಂವಿಧಾನವು ನಮಗೆ ಖಾತರಿಪಡಿಸಿರುವುದಕ್ಕೆ ಅರ್ಥ ಸಿಗಲಿದೆ.

(ಲೇಖಕರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು)

ಕೃಪೆ : thewire.in

Writer - ಮದನ್ ಬಿ. ಲೋಕುರ್

contributor

Editor - ಮದನ್ ಬಿ. ಲೋಕುರ್

contributor

Similar News