ಉತ್ತರ ಪ್ರದೇಶ: ಜುಮಾ ನಮಾಝಿಗೆ ಬಂದವರಿಗೆ ಗುಲಾಬಿ ನೀಡಿ ಸ್ವಾಗತಿಸಿದ ಪೊಲೀಸರು

Update: 2022-06-17 18:43 GMT
photo credit- twitter@PathikritToi

ಲಖ್ನೋ: ಉತ್ತರ ಪ್ರದೇಶದಲ್ಲಿ ಶುಕ್ರವಾರದ ಜುಮಾ ನಮಾಝಿಗೆ ತೆರಳುವ ಮುಸ್ಲಿಮರಿಗೆ ಪೊಲೀಸರು ಗುಲಾಬಿ ನೀಡಿ ಸ್ವಾಗತಿಸಿದ್ದಾರೆ ಎಂದು indiatoday ವರದಿ ಮಾಡಿದೆ.  ರಾಜಧಾನಿ ಲಕ್ನೋದಲ್ಲಿ ತೀಲೆ ವಾಲಿ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದ ನಮಾಝಿಗಳಿಗೆ ಪೊಲೀಸ್ ಅಧಿಕಾರಿಗಳು ಗುಲಾಬಿ ನೀಡಿ ಸ್ವಾಗತಿಸಿದ್ದು, ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತ್ವ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ವರದಿ ಹೇಳಿದೆ. 

ಕಳೆದ ವಾರ ಶುಕ್ರವಾರದ ಪ್ರಾರ್ಥನೆಯ ನಂತರ ರಾಜ್ಯದ ಹಲವು ಭಾಗಗಳಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಸದ್ಭಾವನೆಯ ಸೂಚಕವಾಗಿ ಕೆಂಪು ಗುಲಾಬಿಗಳನ್ನು ಅರ್ಪಿಸಿದ್ದು, ರಾಜ್ಯದ ರಾಜಧಾನಿಯ ಇತರ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದವರಿಗೆ ಹೂವುಗಳನ್ನು ವಿತರಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಹೇಳಿದೆ. 

ಲಕ್ನೋದಂತೆ ಕಾನ್ಪುರ ಜಿಲ್ಲೆಯಲ್ಲೂ ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ಪೂರ್ಣಗೊಂಡಿವೆ. ಇಲ್ಲಿನ ನನಪರ ಮಸೀದಿಯ ಹೊರಭಾಗದಲ್ಲಿ ನಮಾಝಿಗಳಿಗೆ ಪುಷ್ಪಗಳನ್ನು ವಿತರಿಸಿ ಪ್ರಾರ್ಥನೆ ಸಲ್ಲಿಸಿ ಶಾಂತಿ, ನೆಮ್ಮದಿಯ ಸಂದೇಶ ನೀಡಲಾಗಿದೆ. ಅದೇ ರೀತಿ ಮೊರಾದಾಬಾದ್ ಜಿಲ್ಲೆಯಲ್ಲಿಯೂ ಪೊಲೀಸ್ ಅಧಿಕಾರಿಗಳ ಬಿಗಿ ಭದ್ರತೆಯ ನಡುವೆ ಜುಮಾ ನಮಾಝ್ ಶಾಂತಿಯುತವಾಗಿ ನಡೆದಿದೆ.

ಶುಕ್ರವಾರದ ಪ್ರಾರ್ಥನೆಗಾಗಿ ಲಕ್ನೋದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪಶ್ಚಿಮ ವಲಯದ 10 ಪೊಲೀಸ್ ಠಾಣೆಗಳನ್ನು 37 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಇದರೊಂದಿಗೆ   ಮಸೀದಿಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಅದೇ ಸಮಯದಲ್ಲಿ, ಇಡೀ ಪ್ರದೇಶವನ್ನು ಡ್ರೋನ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿತ್ತು. ಈ ವೇಳೆ 4 ಕಂಪನಿ ಪಿಎಸಿ, 1 ಕಂಪನಿ ಆರ್‌ಆರ್‌ಎಫ್, 600 ಕಾನ್‌ಸ್ಟೆಬಲ್‌ಗಳು, 150 ಸಬ್ ಇನ್‌ಸ್ಪೆಕ್ಟರ್‌ಗಳು, 7 ಗೆಜೆಟೆಡ್ ಅಧಿಕಾರಿಗಳು, 100 ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಹಲವು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.

ಶುಕ್ರವಾರದ ಪ್ರಾರ್ಥನೆಗೆ ಸಂಬಂಧಿಸಿದಂತೆ ಎಡಿಜಿ ಎಲ್‌ಒ ಪ್ರಶಾಂತ್ ಕುಮಾರ್ ಮಾತನಾಡಿ, ಜೂನ್ 17 ರಂದು ಸಂಪೂರ್ಣ ಶಾಂತಿ ಇದೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಧಾರ್ಮಿಕ ಮುಖಂಡರು, ಪೊಲೀಸರು ಮತ್ತು ಆಡಳಿತದ ಪ್ರಯತ್ನದಿಂದಾಗಿ ಕೆಲಸಗಳು ಸುರಕ್ಷಿತವಾಗಿ ಪೂರ್ಣಗೊಂಡಿವೆ ಎಂದು ಎಡಿಜಿ ಹೇಳಿದ್ದಾರೆ. ಮತ್ತೊಂದೆಡೆ, ಸಂತ ಕಬೀರನಗರ ಜಿಲ್ಲೆಯಲ್ಲೂ ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ಪೂರ್ಣಗೊಂಡಿವೆ. ಇದೇ ವೇಳೆ ಪೊಲೀಸರು ಹಾಗೂ ಮಸೀದಿ ಆಡಳಿತ ಮಂಡಳಿ ಸಂಪೂರ್ಣ ಕಟ್ಟೆಚ್ಚರ ವಹಿಸಿತ್ತು ವರದಿಯಾಗಿದೆ.

 
ಗಾಝಿಯಾಬಾದ್ ಜಿಲ್ಲೆಯಲ್ಲೂ ಶುಕ್ರವಾರದ ಪ್ರಾರ್ಥನೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲಾಗಿದೆ. ಪೊಲೀಸರು ಹಿಂಡನ್ ವಿಹಾರ್ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ರೋಡ್ ಮಾರ್ಚ್ ನಡೆಸಿದರು. ಅದೇ ರೀತಿ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ನಡುವೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. 

ಜೂನ್ 10 ರಂದು, ಶುಕ್ರವಾರದ ಪ್ರಾರ್ಥನೆಯ ನಂತರ, ಪ್ರಯಾಗ್ರಾಜ್, ಸಹರಾನ್ಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಗದ್ದಲವಿತ್ತು. ಈ ನಿಟ್ಟಿನಲ್ಲಿ ಈ ಜಿಲ್ಲೆಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಈ ಜಿಲ್ಲೆಗಳ ಮೇಲೆ ಸರ್ಕಾರ ಮತ್ತು ಪೊಲೀಸರು ವಿಶೇಷ ನಿಗಾ ಇರಿಸಿದ್ದವು.  

ಅಗ್ನಿಪಥ್‌ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಹಿಂಸಾಚಾರ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಪಾಲಿಸಲು ಸರ್ಕಾರಕ್ಕೆ ಸವಾಲು ಎದುರಾಗಿದೆ. ಈ ನಡುವೆ ಪ್ರವಾದಿ ನಿಂದನೆಯ ವಿರುದ್ಧವೂ ಪ್ರತಿಭಟನೆ ನಡೆದರೆ ನಿಭಾಯಿಸಲು ಇನ್ನಷ್ಟು ಸವಾಲಾಗಬಹುದು ಎಂಬ ಮುಂದಾಲೋಚನೆಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ವಿಶ್ಲೇಷಣೆಗಳೂ ಕೇಳಿ ಬಂದಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News