ಮೈಸೂರು: ರೈತರು ಬೆಳೆದ ಬೆಳೆಗಳನ್ನು ಹರಾಜು ಹಾಕಿ ಪ್ರತಿಭಟನೆ

Update: 2022-06-20 08:08 GMT

ಮೈಸೂರು: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಖಾತರಿ ಎಂ.ಎಸ್.ಪಿ ಹಾಗೂ ಖಾತರಿ ಬೆಂಬಲ ಬೆಲೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ರೈತರು ಬೆಳೆದ ಬೆಳೆಗಳನ್ನು ಹರಾಜು ಹಾಕಿ ಪ್ರತಿಭಟನೆ ನಡೆಸಿ 'ಕರ್ಮಯೋಗಿ ರೈತರ ಕಾಯಕ ದಿನ' ವನ್ನು ಆಚರಣೆ ಮಾಡಲಾಯಿತು.

ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಸೋಮವಾರ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ತಾವು ಬೆಳೆದ ತರಕಾರಿ, ರಾಗಿ, ಉದ್ದು, ಬೆಲ್ಲ, ತೆಂಗಿನ ಕಾಯಿ ಸೇರಿದಂತೆ ಅನೇಕ ಉತ್ಪನ್ನಗಳನ್ನು ಹರಾಜು ಹಾಕಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯಾವಾಗಿ ರೈತರು ' ಕರ್ಮಯೋಗಿ ರೈತನ ದಿನ'  ಆಚರಿಸಿದರು.

ಸೋಮವಾರ ಸಂಜೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿದ್ದು  ಮಹರಾಜ ಕಾಲೇಜಿನ ಮೈದಾನದಲ್ಲಿ ಸಂಜೆ 5.30 ಗಂಟೆಗೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಸಂವಾದ ನಡೆಸುವ ಸ್ಥಳದ 500 ಮೀಟರ್ ಅಂತರದಲ್ಲೇ ರೈತರು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ ಮೋದಿ ಅವರು ಪ್ರಧಾನಿ ಆಗುವ ಸಂದರ್ಭದಲ್ಲಿ ಎಂ.ಎಸ್.ಪಿ ಜಾರಿಗೊಳಿಸುವುದಾಗಿ  ಸ್ವಾಮಿನಾಥನ್ ಆಯೋಗ ವರದಿ ಜಾರಿಮಾಡು ಭರವಸೆ ನೀಡಿದ್ದರು. ಜೊತೆಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಆದರೆ ರೈತರ ಆದಾಯ ದ್ವಿಗುಣ ಮಾಡುವುದಿರಲಿ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ ಎಂದು ಹೇಳಿದರು.

ಫಲಾನುಭವಿಗಳೊಂದಿಗೆ ಸಂವಾದ ನಡೆಸುವುದಾಗಿ ಹೇಳುತ್ತಿದ್ದಾರೆ. ನಾವುಗಳು ಫಲಾನುಭವಿಗಳಲ್ಲವೇ? ನಮ್ಮನ್ನೇಕೆ ಸಂವಾದಕ್ಕೆ ಆಹ್ವಾನಿಸಿಲ್ಲ? ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗೆಟ್ಟು ಹೋಗಿದ್ದಾರೆ. ರೈತರಿಗೆ ಸಾಲ ಕೊಡಲು ಬ್ಯಾಂಕ್ ಗಳು ರೈತರನ್ನು ಗುಲಾಮರಂತೆ ನೋಡುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ಬಂಡವಾಳ ಶಾಹಿಗಳಿಗೆ ಕುರ್ಚಿ ಹಾಕಿ ಸಾಲ ನೀಡುತ್ತಾರೆ. ಇದು ಸರ್ಕಾರದ ಇಬ್ಬಂದಿ ತನವಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಕೂಡಲೇ ರೈತರ ಬೆಳೆಗಳಿಗಳಿಗೆ ಖಾತರಿ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕುರುಬೂರು ಶಾಂತಕುಮಾರ್, ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News