ಮೈಸೂರು: 'ಗೋ ಬ್ಯಾಕ್ ಮೋದಿ' ಘೋಷಣೆ ಕೂಗಿ ಪ್ರತಿಭಟನೆ

Update: 2022-06-20 12:12 GMT

ಮೈಸೂರು,ಜೂ.20: ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದಸಂಸ ರೈತ ಸಂಘಟನೆಗಳು 'ಗೋ ಬ್ಯಾಕ್ ಮೋದಿ' ಎಂಬ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಿಸಲು ಇಂದು ಮೈಸೂರಿಗೆ ಆಗಮಿಸಲಿರುವ ಪ್ರಧಾನ ಮಂತ್ರಿಗೆ ರೈತ, ದಸಂಸ ಕಾರ್ಯಕರ್ತರುಗಳು ನಗರದ ಪುರಭವನದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೋಮವಾರ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ರೈತರ ಬದುಕಿನ ಜೊತೆ ಚಲ್ಲಾಟವಾಡುತ್ತಿರುವ ನಿಮಗೆ ಮೈಸೂರಿಗೆ ಬರುವ ಯೋಗ್ಯತೆ ಇಲ್ಲ, ರೈತ ಕೃಷಿಕಾಯ್ದೆಗಳನ್ನು ಹಿಂಪಡೆಯಿರಿ ಎಂದು ಒತ್ತಾಯ ಮಾಡಿ ದೊಡ್ಡ ಹೋರಾಟ ನಡೆಸಿದರು. ನೀವು ಇನ್ನೂ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿಲ್ಲ, ನಿಮ್ಮ ದುರಾದೃಷ್ಟದ ಆಡಳಿತದ ಬಗ್ಗೆ ನಾವು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ನಾವು ಹೆದರುವುದಿಲ್ಲ, ನೀವು ಮೈಸೂರಿಗೆ ಬರುವುದು ಬೇಡ ಎಂದು ನಾವು ಪ್ರತಿಭಟಿಸುತ್ತಿದ್ದೇವೆ. ಆದರೂ ನೀವು ಬರುತ್ತಿದ್ದೀರಿ. ಇಲ್ಲಿಗೆ ಬಂದು ಮನ ಮರಿವರ್ತನೆ ಮಾಡಿಕೊಂಡು ಹೋಗಿ ಎಂದರು.

ದಸಂಸ ರಾಜ್ಯ  ಸಂಚಾಲಕ ಗುರುಪ್ತಸಾದ್ ಕೆರಗೋಡು ಮಾತನಾಡಿ, ಮೋದಿ ಅವರಿಗೆ ನೂರು ಪ್ರಶ್ನೆಗಳನ್ನು ಕೇಳಬೇಕಿದೆ. ಆದರೆ ಮೂರು ಪ್ರಶ್ನೆಗಳನ್ನು ಮಾತ್ರ ನಾವು ಕೇಳುತ್ತೇವೆ. ಮೊದಲಿಗೆ ನಾವು ಕೇಳುವ ಪ್ರಶ್ನೆಗೆ ಉತ್ತರಿಸಬಲ್ಲಿರಾ ಪ್ರಧಾನಿಗಳೇ? ವಿಶ್ವ ಮಾನವ ಸಂದೇಶ ಸಾರಿದ ಜಗದ ಕವಿ, ಯುಗದ ಕವಿ ಕುವೆಂಪುರವರ ಕರ್ಮ ಭೂಮಿ ಸ್ಥಳದಿಂದ ಮೂರು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಿಸಿದರು.

"ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಅವರ ಊರು-ಕರ್ಮಭೂಮಿಗೆ  ಆಗಮಿಸುತ್ತಿದ್ದೀರಿ. ಆದರೆ ಇಲ್ಲಿ ನಿಮ್ಮ ಸರ್ಕಾರ ಕುವೆಂಪು ಅವರನ್ನು ಮಾತ್ರವಲ್ಲದೆ ರಾಜ್ಯದ ಹಾಗೂ ರಾಷ್ಟ್ರದ ಮಹಾನ್ ಚೇತನಗಳಾದ ಭಗವಾನ್ ಬುದ್ಧ ಗುರು,ಅಣ್ಣಾ  ಬಸವಣ್ಣ,ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣ ಗುರು, ಮೈಸೂರಿನ ಹುಲಿ ಟಿಪ್ಪು ಸುಲ್ತಾನ್, ವೀರ ಯೋಧ ಭಗತ್ ಸಿಂಗ್ ಮುಂತಾದ ಮಹನೀಯರುಗಳಿಗೆಲ್ಲಾ ಅಪಮಾನ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಾರೆ. ನೀವು "ವಿಶ್ವ ಗುರು" ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದೀರಿ. ಆದರೆ ವಿಶ್ವದ ಮುಂದೆ ಕ್ಷಮೆ ಕೋರುವಂತಹ ಘೋರ ತಪ್ಪುಗಳನ್ನು ನೀವು ಮತ್ತು ನಿಮ್ಮ ಪರಿವಾರ ಮಾಡುತ್ತಿದ್ದೀರಿ. ಮಾಡಿದ ತಪ್ಪಿಗೆ ಜಗತ್ತಿನ ಮುಂದೆ ಕ್ಷಮೆ ಕೇಳಿದ್ದೀರಿ, ಕ್ಷಮೆ ಕೇಳಿದ್ದು ಒಳ್ಳೆಯದೇ ಆಯಿತು. ಆದರೆ ದೇಶದ ಜನತೆಯ ಮುಂದೆ ಯಾವಾಗ ಕ್ಷಮೆ ಕೇಳುತ್ತೀರಿ" ಎಂದು ಅವರು ಪ್ರಶ್ನಿಸಿದರು.

ಪಠ್ಯ ಪರಿಷ್ಕರಣೆ ಮಾಡಲು ಅನುಸರಿಸಬೇಕಾದ ಮಾನದಂಡ ಅಥವಾ ಪ್ರಕ್ರಿಯೆಗಳ್ಯಾವುವನ್ನೂ ಅನುಸರಿಸದೆ ಬಹುತೇಕ ಬ್ರಾಹ್ಮಣರನ್ನು ಹೊಂದಿರುವ ಸಮಿತಿ ರಚಿಸಿ ಮನಬಂದಂತೆ ತಿದ್ದುಪಡಿ ಮಾಡಿ ಎಲ್ಲಾ ಮಹಾನ್ ಚೇತನಗಳಿಗೂ ಹಾಗೂ ಈ ದೇಶದ ಇತಿಹಾಸಕ್ಕೂ ದೊಡ್ಡ ಅಪಚಾರ ಎಸಗಿದೆ ನಿಮ್ಮ ಸರ್ಕಾರ. ಒಮ್ಮೆ ನಾಡಿನ ಜನತೆಗೆ ಕ್ಷಮೆ ಕೇಳಬಾರದೇಕೆ? ಕೀಳು ಅಭಿರುಚಿಯ ಪಠ್ಯವನ್ನು ರದ್ದು ಮಾಡುವಂತೆ ನಿಮ್ಮ ಸರ್ಕಾರಕ್ಕೆ ಆದೇಶಿಸಬಾರದೇಕೆ?ಜೀವನಕ್ಕೆ ಭದ್ರತೆ ಇರುವ, ಘನತೆಯ ಬದುಕು ನೀಡುವಷ್ಟು ವೇತನವಿರುವ ಉದ್ಯೋಗಗಳಿಗಾಗಿ ದೇಶದ ಯುವಜನರು ಹಾತೊರೆಯುತ್ತಿದ್ದಾರೆ. ಉದ್ಯೋಗ ಹೆಚ್ಚಳಕ್ಕೋ, ವೇತನಗಳ ಹೆಚ್ಚಳಕ್ಕೋ, ಉದ್ಯೋಗದ ಭದ್ರತೆಗೋ ಎನೂ ಮಾಡದೆ ಎಲ್ಲವೂ ಅವನತಿಯ ಕಡೆ ಸಾಗುವಂತೆ ಮಾಡಿದೆ ನಿಮ್ಮ ಸರ್ಕಾರ. ಈಗ ನಮ್ಮ ಹೆಮ್ಮೆಯ ಸೈನ್ಯವನ್ನೂ ಗುತ್ತಿಗೆ ಸೈನ್ಯ ಮಾಡಲು ಹೊರಟಿದ್ದೀರಿ. ಸೈನ್ಯಕ್ಕೆ ಸೇವೆ ಸಲ್ಲಿಸಲು ಸಿದ್ಧರಿದ್ದ ಯುವಜನರು ಬಂಡೆದ್ದಿದ್ದಾರೆ. ಯುವಜನತೆಯ ಮುಂದೆ ಕ್ಷಮೆ ಕೋರಿ ಈ ಅವನತಿಯ ತೀರ್ಮಾನವನ್ನು ರದ್ದು ಮಾಡಬಲ್ಲಿರಾ? ಉದ್ಯೋಗ ಖಾತ್ರಿಗಾಗಿ ಪ್ರತ್ಯೇಕ ಕಮಿಷನ್ ಸ್ಥಾಪಿಸಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬಲ್ಲಿರಾ? ಎಂದು ಅವರು ಪ್ರಶ್ನಿಸಿದರು.

ರೈತ ಮುಖಂಡ ಪೂಣಚ್ಚ, ದಸಂಸ ಮುಖಂಡರುಗಳಾದ ಬೆಟ್ಟಯ್ಯ ಕೋಟೆ, ಆಲಗೋಡು ಶಿವಕುಮಾರ್ ಮಾತನಾಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ದಸಂಸ ಮುಖಂಡರುಗಳಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಮಲ್ಲಹಳ್ಳಿ ನಾರಾಯಣ, ಕಲ್ಲಹಳ್ಳಿ ಕುಮಾರ್, ಮಂಜು ಶಂಕರಪುರ, ಶಂಕರ್, ಸೋಮಣ್ಣ, ಮಹದೇವಸ್ವಾಮಿ, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News