ರಾಜ್ಯದಲ್ಲಿ ಪ್ರವಾಹ ಬಂದಾಗ ಮೋದಿ ಬಂದು ಜನರಿಗೆ ಸಾಂತ್ವನ ಹೇಳಿಲ್ಲ, ವಿಶೇಷ ಅನುದಾನ ನೀಡಿಲ್ಲ: ಸಿದ್ದರಾಮಯ್ಯ

Update: 2022-06-20 13:16 GMT

ಬೆಂಗಳೂರು, ಜೂ.20: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಿದ್ದು ನಮ್ಮ ಸರಕಾರದ ಸಾಧನೆ. ಅದನ್ನೂ ತಮ್ಮದೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸೋಮವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂಬೇಡ್ಕರ್ ಅವರ 125ನೇ ಜಯಂತಿ ಆಚರಣೆ ಸಂದರ್ಭದಲ್ಲಿ ನಮ್ಮ ಸರಕಾರ ಮಂಜೂರು ಮಾಡಿದ್ದು, ಜಾಗ, ಅನುದಾನ ನೀಡಿದ್ದು ನಾನು ಎಂದರು.

ರಾಜ್ಯದಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂದಾಗ ನರೇಂದ್ರ ಮೋದಿ ಬಂದು ಜನರಿಗೆ ಸಾಂತ್ವನ ಹೇಳಿಲ್ಲ, ವಿಶೇಷ ಅನುದಾನ ನೀಡಿಲ್ಲ. 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಬ್ಯಾಂಕ್, ಕರಾವಳಿಯಲ್ಲಿ 1906ರಲ್ಲಿ ಹಾಜಿ ಅಬ್ದುಲ್ಲಾ ಸ್ಥಾಪಿಸಿದ ಕಾರ್ಫೋರೇಷನ್ ಬ್ಯಾಂಕ್, ಟಿ.ಎಂ.ಎ.ಪೈ ಸ್ಥಾಪನೆ ಮಾಡಿದ ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕುಗಳ ಹೆಸರನ್ನು ಮೋದಿ ಅಳಿಸಿ ಹಾಕಿದ್ದಾರೆ ಎಂದು ಅವರು ಕಿಡಿಗಾರಿದರು.

ಬೆಂಗಳೂರು–ಮೈಸೂರು ಹೆದ್ದಾರಿಯನ್ನು ತಾನೇ ಮಾಡಿಸಿದ್ದು ಎಂದು ಸಂಸದ ಪ್ರತಾಪ್ ಸಿಂಹ ಬಹಳ ಸಲ ಹೇಳಿದ್ದಾರೆ. ವಾಸ್ತವವೆಂದರೆ ನಾನು ಮುಖ್ಯಮಂತ್ರಿಯಾಗಿದ್ದೆ, ಡಾ.ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದರು, ಆಗ ಕೇಂದ್ರದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು ಭೂಸಾರಿಗೆ ಸಚಿವರಾಗಿದ್ದರು. ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು -ಬೆಂಗಳೂರು ಹೆದ್ದಾರಿಯನ್ನು 10 ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ ಮಾಡಿಕೊಟ್ಟವರು ಆಸ್ಕರ್ ಫೆರ್ನಾಂಡಿಸ್. ಯೋಜನೆ ಅನುಮೋದನೆಯೇ ಆಗದಿದ್ದರೆ ಈ ಸರಕಾರ ಕೆಲಸ ಮಾಡುತ್ತಿತ್ತಾ? ಎಂದು ಅವರು ಪ್ರಶ್ನಿಸಿದರು.

ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರ್ ಆಫ್ ಸೈನ್ಸ್ ಓದಿದ್ದರು. ಇದಕ್ಕಾಗಿ ಅವರ 125ನೇ ಹುಟ್ಟು ಹಬ್ಬದ ಸ್ಮರಣಾರ್ಥ ನಮ್ಮ ಸರಕಾರ ಕರ್ನಾಟಕದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆ ಮಾಡಿದ್ದು ಎಂದು ಸಿದ್ದರಾಮಯ್ಯ ವಿವರಿಸಿದರು.

ಸಬ್ ಅರ್ಬನ್ ರೈಲು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನಂತ ಕುಮಾರ್ ಕೇಂದ್ರ ಸಚಿವರಾಗಿದ್ದರು, ಅಂದಿನಿಂದಲೂ ಹೇಳಿಕೊಂಡು ಬರ್ತಿದ್ದಾರೆ. ಆದರೆ ಕೆಲಸ ಆರಂಭ ಆಗಿಲ್ಲ, ಈಗ ಮಾಡ್ತಿದ್ದೀವಿ ಎಂದು ಹೇಳ್ತಿದ್ದಾರೆ. ಮೋದಿ ಅವರಿಂದ ಕರ್ನಾಟಕದ ಜನರಿಗೆ ಅನ್ಯಾಯ, ಅಗೌರವ ಆಗಿದೆ. ರಾಜ್ಯದಲ್ಲಿ ಬಿಜೆಪಿಯ ಸರಕಾರ ಲೂಟಿ ಮಾಡುತ್ತಿದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆಲ್ಲ ಮೋದಿ ಪರವಾನಿಗೆ ಕೊಟ್ಟವರಂತೆ ಸುಮ್ಮನಿದ್ರೆ ಹೇಗೆ? ಉತ್ತರ ಕೊಡಬೇಕಲ್ವಾ? ಎಂದು ಅವರು ಪ್ರಶ್ನಿಸಿದರು.

ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದ ಈ ಬ್ಯಾಂಕುಗಳು ಬೇರೆ ಬ್ಯಾಂಕುಗಳೊಂದಿಗೆ ವಿಲೀನವಾದ ನಂತರ ಇವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯಾ? ಇದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಬೇರೆ ಬ್ಯಾಂಕುಗಳು ದಿವಾಳಿಯಾಗಿವೆ ಎಂದು ವಿಲೀನ ಮಾಡಿದ್ದರಿಂದ ಕನ್ನಡಿಗರಿಗೆ ಕೆಲಸ ಸಿಗದಂತಾಗಿದೆ. ಇದು ನಮ್ಮ ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ ಎಂದು ಅವರು ಟೀಕಿಸಿದರು. 

ಕೊರೋನ ಬಂದಾಗ ಆಮ್ಲಜನಕ ಕೊಡಲಿಲ್ಲ. ಹೈಕೋರ್ಟ್ ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಆದೇಶ ಮಾಡಿದ ಮೇಲೆ ಹೈಕೋರ್ಟ್ ಹೇಳಿದಷ್ಟು ಆಮ್ಲಜನಕ ಪೂರೈಕೆ ಮಾಡಲು ಆಗಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿತು. ಕೇಂದ್ರ ಸಚಿವರು ಸಂಸತ್ತಿಗೆ ಉತ್ತರ ನೀಡುವಾಗ ಆಮ್ಲಜನಕ ಸಿಗದೆ ದೇಶದಲ್ಲಿ ಒಬ್ಬರು ಸತ್ತಿಲ್ಲ ಎಂದು ಸುಳ್ಳು ಹೇಳಿದರು. ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ. ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್‍ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11.ಲಕ್ಷ ಕೋಟಿ ಉಳಿದಿದ್ದು, ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹೀರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕಾರ ಮಾಡಿದ್ದರಿಂದ ನಮ್ಮ ರಾಜ್ಯಕ್ಕೆ ಸಿಗಲಿಲ್ಲ. ಇದಕ್ಕೆ ಯಾರು ಕಾರಣ? ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವಲ್ಲವೇ? ಎಂದು ಅವರು ಪ್ರಶ್ನಿಸಿದರು.

ಇಷ್ಟೆಲ್ಲ ಅನ್ಯಾಯ ಮಾಡಿ ಈಗ ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಗುತ್ತಿಗೆ ಕೆಲಸಗಳಲ್ಲಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ರು, ಅದಕ್ಕೆ ಮೋದಿ ಏನು ಕ್ರಮ ತೆಗೆದುಕೊಂಡಿದ್ದಾರೆ? ಈಗ ಮೋದಿ ಕರ್ನಾಟಕದ ಜನರಿಗೆ ಉತ್ತರ ಹೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಪತ್ರ ಬರೆದಿದ್ದು 7/6/2021 ರಲ್ಲಿ, ಇದಾಗಿ ಒಂದು ವರ್ಷ ಆಗಿದೆ. ನಾನು ಚೌಕಿದಾರ್, ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಯಾಕೆ ಈವರೆಗೆ ಕ್ರಮ ಕೈಗೊಂಡಿಲ್ಲ? ಆಡಳಿತ ಪಕ್ಷವನ್ನು ಪ್ರಶ್ನಿಸೋದು ನಮ್ಮ ಕರ್ತವ್ಯ. ಉತ್ತರ ಕೋಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಅವರು ಹೇಳಿದರು. 

ಅಗ್ನಿಪಥ್ ಯೋಜನೆಯಡಿ ಯುವಕರು 4 ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ, ಆಮೇಲೆ ನಮ್ಮ ಭವಿಷ್ಯವೇನು ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. 

ಇದು ಬಹಳ ಅವೈಜ್ಞಾನಿಕವಾಗಿದೆ. ಹಾಗಾಗಿ ಯುವ ಜನರು ಈ ಯೋಜನೆ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಸರಕಾರ ನಾವು ಇದನ್ನು ಮಾಡಿಯೇ ಮಾಡ್ತೀವಿ ಎಂದು ಹಠ ಹಿಡಿದು ಕೂತಿದ್ದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News