ಮೈಸೂರು : 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಚಾಲನೆ

Update: 2022-06-21 02:38 GMT

ಮೈಸೂರು : 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರು ಅರಮನೆ ಮುಂಭಾಗದಲ್ಲಿ ಚಾಲನೆ ನೀಡಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ವಿವಿಧೆಡೆ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸ ಪ್ರಸಿದ್ಧ ಮೈಸೂರು ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಮೈಸೂರು ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ 15 ಸಾವಿರ ಮಂದಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ವಾನಂದ ಸೋಲೊವಾಲ್ ಮತ್ತಿತರರು ಭಾಗವಹಿಸಿದ್ದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ವಿಶ್ವದ ಎಲ್ಲೆಡೆಯಿಂದ ಯೋಗ ದಿನಾಚರಣೆಯ ಚಿತ್ರಗಳು ಬರುತ್ತಿವೆ. ಈ ಚಿತ್ರಗಳು ಸ್ವಯಂ ವಾಸ್ತವತೆಯ ಪ್ರತೀಕಗಳು. ಯೋಗದ ಹಿಂದಿನ ಉತ್ಸಾಹ ಅಸಾಧಾರಣ" ಎಂದು ಬಣ್ಣಿಸಿದರು.

ಈ ಬಾರಿ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಯೋಗ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಸ್ಫೂರ್ತಿ ಹಾಗೂ ಶಕ್ತಿಯಾಗಿತ್ತು. ಯೋಗ ಇಂದು ಅಂತರರಾಷ್ಟ್ರೀಯ ಸಹಕಾರದ ತಳಹದಿಯಾಗಿ ರೂಪುಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇಡೀ ಬ್ರಹ್ಮಾಂಡ ಆರಂಭವಾಗುವುದು ನಮ್ಮ ದೇಹ ಮತ್ತು ಆತ್ಮದಿಂದ. ಜಗತ್ತು ಆರಂಭವಾಗುವುದು ನಮ್ಮಿಂದ. ನಮ್ಮೊಳಗೆ ಪ್ರಜ್ಞಾವಂತಿಕೆಯನ್ನು ಯೋಗ ಮೂಡಿಸುತ್ತದೆ ಹಾಗೂ ಸ್ವಯಂ ಜಾಗೃತಿಯ ಭಾವನೆಗೂ ಅದು ಕಾರಣವಾಗುತ್ತದೆ. ಯೋಗ ನಮಗೆ ಶಾಂತಿ ನೀಡುತ್ತದೆ. ಯೋಗದಿಂದ ದೊರಕುವ ಶಾಂತಿ ವ್ಯಕ್ತಿಗಳಿಗೆ ಮಾತ್ರ ಸೀಮಿತವಲ್ಲ; ಅದು ಸಮಾಜದ ಶಾಂತಿಗೂ ಕಾರಣವಾಗುತ್ತದೆ. ನಮ್ಮ ದೇಶಕ್ಕೆ ಹಾಗೂ ವಿಶ್ವಕ್ಕೂ ಶಾಂತಿ ತರುತ್ತದೆ ಎಂದು ಬಣ್ಣಿಸಿದರು.

"ಮಾನವತೆಗಾಗಿ ಯೋಗ" ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ಮೈಸೂರಿನ ಹೊರತಾಗಿ ಗುಜರಾತ್‍ನ ಕೆವಾಡಿಯಾದಲ್ಲಿ ಏಕತೆಯ ಪ್ರತಿಮೆ ಮುಂದೆ ಆರೋಗ್ಯ ಸಚಿವ ಡಾ.ಮನ್‍ಸುಖ್ ಮಾಂಡವಿಯಾ ನೇತೃತ್ವದಲ್ಲಿ ಯೋಗ ದಿನ ಆಚರಿಸಲಾಯಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹಿಮಾಚಲ ಪ್ರದೇಶದ ಆಕರ್ಷಕ ಕಾಂಗ್ರಾ ಕೋಟೆಯಲ್ಲಿ ನಡೆದ ಸಮಾರಂಭದ ನೇತೃತ್ವ ವಹಿಸಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಹಾಗೂ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಂಗವಾಗಿ 75 ಆಕರ್ಷಕ ಸ್ಥಳಗಳನ್ನು ಎಂಟನೇ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿತ್ತು. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಬ್ರ್ಯಾಂಡ್ ಮಾಡುವುದು ಇದರ ಉದ್ದೇಶವಾಗಿದೆ. ದೆಹಲಿಯ ಲೋಟಸ್ ಟೆಂಪಲ್‍ನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ಲಕ್ನೋ ರಾಜಭವನದಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಯೋಗ ದಿನ ಆಚರಿಸಿದರು.

ಸಿಕ್ಕಿಂನ ಮಂಜು ಮುಸುಕಿದ ವಾತಾವರಣದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಯೋಧರು ಯೋಗ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News