ʼದಲಿತರು ಮುಟ್ಟಿದ ಆಹಾರ ಸ್ವೀಕರಿಸುವುದಿಲ್ಲವೆಂದುʼ ಡೆಲಿವರಿ ಏಜೆಂಟ್‌ ಗೆ ಉಗುಳಿ, ಹಲ್ಲೆಗೈದ ಗ್ರಾಹಕ: ದೂರು ದಾಖಲು

Update: 2022-06-21 17:16 GMT
ಸಾಂದರ್ಭಿಕ ಚಿತ್ರ

ಲಕ್ನೋ, ಜೂ.21: ಕಳೆದ ವಾರ ಗ್ರಾಹಕನೊಬ್ಬ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ ತನ್ನ ಮೇಲೆ ಉಗುಳಿದ್ದಾನೆ ಎಂದು ಝೊಮ್ಯಾಟೊ ಸಂಸ್ಥೆಯಲ್ಲಿ ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದಲಿತ ಉದ್ಯೋಗಿ ದೂರು ನೀಡಿರುವುದಾಗಿ ಲಕ್ನೊ ಪೊಲೀಸರು ಸೋಮವಾರ ಹೇಳಿದ್ದಾರೆ.


ಜೂನ್ 18ರಂದು ಅಜಯ್ ಸಿಂಗ್ ಎಂಬ ಗ್ರಾಹಕನ ಮನೆಗೆ ಆಹಾರ ತಲುಪಿಸಲು ತೆರಳಿದಾಗ ತನ್ನ ಮೇಲೆ ಆಕ್ರಮಣ ನಡೆಸಿದ್ದಾನೆ. ಓರ್ವ ದಲಿತ ಮುಟ್ಟಿದ ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಲ್ಲದೆ ಜಾತಿ ನಿಂದನೆ ಮಾಡಿ ಮುಖಕ್ಕೆ ಉಗುಳಿರುವುದಾಗಿ ಝೊಮ್ಯಾಟೊ ಡೆಲಿವರಿ ಏಜೆಂಟ್ ವಿನೀತ್ ಕುಮಾರ್ ರಾವತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ.
   
ರಾವತ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದು ಸಿಂಗ್ ಮನೆಯ ಬಳಿಯಿರುವ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಲಾಗುತ್ತಿದೆ. ಜಾತಿ ನಿಂದನೆ ಮಾಡಿದಾಗ ತಾನು ವಿರೋಧಿಸಿದೆ. ಆಗ ಸುಮಾರು 12 ಮಂದಿ ಏಕಾಏಕಿ ತನ್ನ ಮೇಲೆ ಮುಗಿಬಿದ್ದು ಥಳಿಸಿದರು. ಅವರಿಂದ ತಪ್ಪಿಸಿಕೊಂಡು, ಬೈಕನ್ನು ಅಲ್ಲೇ ಬಿಟ್ಟು ಓಡಿ ಬಂದಿದ್ದೇನೆ ಎಂದು ದೂರಿನಲ್ಲಿ ರಾವತ್ ಉಲ್ಲೇಖಿಸಿದ್ದಾನೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ(ಪೂರ್ವ) ಖಾಸಿಂ ಅಬಿದಿ ಹೇಳಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ರಾವತ್ ಗಾಯಗೊಂಡಿರುವುದು ಸ್ಪಷ್ಟವಾಗಿದ್ದು ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಅಜಯ್ ಸಿಂಗ್, ಆತನ ಸಹೋದರ ಅಭಯ್ ಸಿಂಗ್ ಮತ್ತು ಇತರ 12 ಮಂದಿಯ ಹೆಸರಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ವರದಿ ಹೇಳಿದೆ.
  
ಆರೋಪವನ್ನು ನಿರಾಕರಿಸಿರುವ ಅಜಯ್ ಸಿಂಗ್ ‘ಡೆಲಿವರಿ ಏಜೆಂಟ್ ರಾವತ್ ಮನೆಗೆ ಬಂದ ಸಂದರ್ಭ ಬಾಯಿ ಮುಕ್ಕಳಿಸುತ್ತಿದ್ದ ತನ್ನ ಸಹೋದರ ನೀರನ್ನು ಹೊರಗೆ ಉಗುಳಿದಾಗ ಅಕಾಸ್ಮಾತ್ ಆಗಿ ಕೆಲವು ಹನಿಗಳು ರಾವತ್ ಮೇಲೆ ಬಿದ್ದಿವೆ. ಆ ಬಗ್ಗೆ ಆಕ್ಷೇಪಿಸಿದ ಆತ, ತಮ್ಮನ್ನು ಪ್ರಕರಣದಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆಗ ಮಾತಿನ ಚಕಮಕಿ ನಡೆದು ಪರಸ್ಪರ ತಳ್ಳಾಟ ನಡೆದು ಆತ ನೆಲಕ್ಕೆ ಬಿದ್ದಿದ್ದಾನೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News