ಮಾಲ್ದೀವ್ಸ್‌: ಯೋಗ ದಿನಾಚರಣೆ ಕಾರ್ಯಕ್ರಮದ ವೇಳೆ ಗುಂಪಿನಿಂದ ದಾಂಧಲೆ

Update: 2022-06-21 13:08 GMT

 ಮಾಲೆ : ಮಾಲ್ದೀವ್ಸ್‌ ನ್ಯಾಷನಲ್‌ ಫುಟ್ಬಾಲ್‌ ಸ್ಟೇಡಿಯಂ, ಮಾಲೆ ಇಲ್ಲಿ ಇಂದು ಆಯೋಜಿಸಲಾಗಿದ್ದ ಯೋಗ ದಿನದ ಕಾರ್ಯಕ್ರಮದಲ್ಲಿ ಗುಂಪೊಂದು ದಾಂಧಲೆ ನಡೆಸಿದ ವರದಿಯಾಗಿದೆ.

ಕೈಗಳಲ್ಲಿ ಕೋಲುಗಳು ಹಾಗೂ ಧ್ವಜಗಳನ್ನು ಹಿಡಿದುಕೊಂಡ ಗುಂಪೊಂದು ಯೋಗಾಭ್ಯಾಸ ನಡೆಸುತ್ತಿದ್ದವರತ್ತ ಧಾವಿಸಿ ಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲಿದ್ದವರಿಗೆ ಅಲ್ಲಿಂದ ತೆರಳುವಂತೆ ದಾಂಧಲೆಕೋರರು ಬೆದರಿಸಿದ್ದರು ಎಂದು ವರದಿಯಾಗಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇಂದಿನ ಕಾರ್ಯಕ್ರಮವನ್ನು ಮಾಲ್ದೀವ್ಸ್‌ನ ಯುವಜನ, ಕ್ರೀಡಾ ಮತ್ತು ಸಮುದಾಯ ಸಬಲೀಕರಣ ಸಚಿವಾಲಯ ಹಾಗೂ ಇಂಡಿಯನ್‌ ಕಲ್ಚರಲ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಸಾರ್ವಜನಿಕರಿಂದ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಕ್ರೀಡಾ ಸಚಿವಾಲಯದ ವಿನಂತಿಯನ್ನು ನಿರಾಕರಿಸಿದ್ದಾಗಿ ಮಾಲೆ ಸ್ಥಳೀಯಾಡಳಿತ ಹೇಳಿದೆ.

ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ದೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸೋಲಿಹ್‌ ಹೇಳಿದ್ದಾರೆ.ʻʻಇದೊಂದು ಗಂಭೀರ ವಿಚಾರ, ಇದರ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು,ʼʼಎಂದು ಅವರು ಹೇಳಿದ್ದಾರೆ.

ದೇಶದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅವರ ನೇತೃತ್ವದಲ್ಲಿ ʻಇಂಡಿಯಾ ಔಟ್‌ʼ ಅಭಿಯಾನ ಇತ್ತೀಚಿಗಿನ ತಿಂಗಳುಗಳಲ್ಲಿ ಮಾಲ್ದೀವ್ಸ್‌ನಲ್ಲಿ ಹೆಚ್ಚಾಗಿದೆ. ಮಾಲ್ದೀವ್ಸ್‌ ʻʻಹೊಸದಿಲ್ಲಿಯ ಕೈಗೊಂಬೆʼʼ ಆಗಿದೆ  ಹಾಗೂ ದ್ವೀಪದಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಗೆ ಅನುಮತಿಸಿದೆ ಎಂದು ಈ ಅಭಿಯಾನದಲ್ಲಿ ಭಾಗಿಯಾಗಿರುವವರು ಆರೋಪಿಸುತ್ತಾರೆ.

ಎಪ್ರಿಲ್‌ ತಿಂಗಳಲ್ಲಿ ಅಧ್ಯಕ್ಷ ಸೋಲಿಹ್‌ ಅವರು ಆದೇಶ ಹೊರಡಿಸಿ  ಭಾರತದ ವಿರುದ್ಧ ಪ್ರತಿಭಟನೆಗಳಿಗೆ ನಿಷೇಧ ಹೇರಿದ್ದರಲ್ಲದೆ ಇಂತಹ ಪ್ರತಿಭಟನೆಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುತ್ತವೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News