ಉದ್ಘಾಟಿಸಿದ್ದನ್ನೇ ಮೋದಿ ಮತ್ತೆ ಉದ್ಘಾಟಿಸಿರುವುದು ತಮಾಷೆಯ ಸಂಗತಿ: ಡಾ.ಮಹದೇವಪ್ಪ

Update: 2022-06-21 12:20 GMT
 ಡಾ.ಮಹದೇವಪ್ಪ

ಬೆಂಗಳೂರು, ಜೂ. 21: ‘ಕೆಲ ಪ್ರಜಾಪ್ರಭುತ್ವ ವಿರೋಧಿ ಮಾಧ್ಯಮಗಳು ಮತ್ತು ಮೋದಿಯಂತವರು ಅಭಿವೃದ್ಧಿ ಮತ್ತು ಜನಪರತೆಯ ಬಗ್ಗೆ ನಿರಂತರ ಸುಳ್ಳುಗಳನ್ನು ಹೇಳಿದರೂ, ಕಣ್ಣ ಮುಂದೆ ಮಾಡಿರುವ ಗುಣಮಟ್ಟದ ಅಭಿವೃದ್ಧಿ ಕೆಲಸಗಳು ಎಂತವರ ಸುಳ್ಳನ್ನೂ ಅಣಕಿಸುತ್ತದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

‘ಪ್ರಧಾನಿಯವರು ಉದ್ಘಾಟಿಸಿದ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಶೈಕ್ಷಣಿಕ ಸಂಸ್ಥೆಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಚಾಲನೆ ಕೊಟ್ಟು ಅಲ್ಲಿ ಮೂರು ವರ್ಷದ ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. ಹೀಗಿದ್ದೂ ಮೋದಿಯವರು ಉದ್ಘಾಟಿಸಿದ್ದನ್ನೇ ಮತ್ತೆ ಉದ್ಘಾಟಿಸಿರುವುದು ತಮಾಷೆಯ ಸಂಗತಿ. ಅಲ್ಲದೆ, ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಕಾಣುವ ದಶಪಥ ರಸ್ತೆಯು ಪ್ರಧಾನಿ ಮೋದಿಯ ಜೊತೆಗಿದ್ದ ಬಿಜೆಪಿಯ ಎಲ್ಲ ನಾಯಕರನ್ನು ಇದು ನಾವು ಮಾಡಿದ್ದು ನೋಡಿ ಎಂದು ಹೇಳಲಾಗದೇ ಅಂತರಂಗದಲ್ಲೇ ಮರುಗುತ್ತಾರಲ್ಲಾ ಅಲ್ಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಜನಪರ ಮತ್ತು ಗುಣಮಟ್ಟದ ಅಭಿವೃದ್ಧಿಯ ಯಶಸ್ಸು ಅಡಗಿದೆ' ಎಂದು ಅವರು ತಿಳಿಸಿದ್ದಾರೆ.

‘ಎಲ್ಲಕ್ಕಿಂತ ಮುಖ್ಯವಾಗಿ ಭಾರೀ ಪ್ರಚಾರದೊಂದಿಗೆ ನಡೆಯುತ್ತಿರುವ ಯೋಗ ದಿನಾಚರಣೆಯು 2017ರಲ್ಲೇ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಮೂಲಕ ಗಿನ್ನೆಸ್ ದಾಖಲೆಯೊಂದಿಗೆ ನಮ್ಮದೇ ಮೈಸೂರಿನಲ್ಲಿ ತಣ್ಣಗೆ, ಹಿತವಾಗಿ ಯಾವುದೇ ಹುಸಿ ಪ್ರಚಾರದ ಗೀಳಿನ ಸೋಂಕಿಲ್ಲದೇ ನಡೆದು ಹೋಗಿದೆ. ಹೀಗಾಗಿ ಗುಣಮಟ್ಟದ ಅಭಿವೃದ್ಧಿ ಹಾಗೂ ಜನಪರ ರಾಜಕಾರಣವು ಇವರನ್ನು ಅಣಕಿಸಿ ಆ ಮೂಲಕ ಇವರ ಕೆಲಸ ಮಾಡದ ಸ್ಥಿತಿಯನ್ನೂ ಹುಸಿ ಪ್ರಚಾರವನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಅನುಮಾನ ಇಲ್ಲ!' ಎಂದು ಮಹದೇವಪ್ಪ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News