ಮನಸ್ಸು, ಬುದ್ಧಿ, ಆತ್ಮದ ಏಕಾಗ್ರತೆಗೆ ಯೋಗ ಸಹಕಾರಿ: ನಳಿನ್ ಕುಮಾರ್ ಕಟೀಲ್

Update: 2022-06-21 12:36 GMT

ಬೆಂಗಳೂರು, ಜೂ. 21: ‘ಪತಂಜಲಿ ಮಹರ್ಷಿಗಳು ಬರೆದ ‘ಯೋಗ’ಕ್ಕೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಯೋಗವು ಸಹಕಾರಿ. ಅದು ಸುಖ ಮತ್ತು ನೆಮ್ಮದಿಯನ್ನೂ ನೀಡಬಲ್ಲದು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಮಂಗಳವಾರ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಯೋಗಾಸನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯೋಗ ಮಾಡಿದವರು ಹೇಗಿರುತ್ತಾರೆಂಬುದಕ್ಕೆ ಮೋದಿಯವರೇ ಉದಾಹರಣೆ' ಎಂದು ನುಡಿದರು.

‘ಋಷಿ-ಮುನಿಗಳು ತಪಸ್ಸಿನ ಆಧಾರದಲ್ಲಿ ಯೋಗದ ಪರಿಚಯ ಮಾಡಿದರು. ಯೋಗ ಅಧ್ಯಾತ್ಮಕ್ಕೆ ದಾರಿ. ಕಣ್ಮುಚ್ಚಿ ಭಗವಂತನನ್ನು ನೋಡಿದ ದೇಶ ಭಾರತ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ. ಯೋಗವು ಜಗದ್ಗುರು ಭಾರತ ನಿರ್ಮಾಣಕ್ಕೆ ದಾರಿ ಮಾಡಿ ಕೊಡಲಿ' ಎಂದು ಕಟೀಲ್ ಹಾರೈಸಿದರು. 

‘ಇವತ್ತಿನ ದಿನವನ್ನು ಕರ್ನಾಟಕದ ಜನತೆ ಇತಿಹಾಸದಲ್ಲಿ ಬರೆದಿಡಬೇಕಾದ ದಿನ. ಜೂ.21ಅನ್ನು ಜಗತ್ತಿನ ಯೋಗ ದಿನವನ್ನಾಗಿ ಮೋದಿಯವರು ಘೋಷಿಸಿದರು. 187ದೇಶಗಳು ಅದನ್ನು ಅನುಮೋದಿಸಿದ ದಿನವಿದು. ಇದೇ ದಿನ ಕರ್ನಾಟಕದ ಮೈಸೂರಿನಲ್ಲಿ ಪ್ರಧಾನಿಯವರು ಯೋಗ ದಿನದಲ್ಲಿ ಭಾಗವಹಿಸುತ್ತಿರುವುದು ಕರ್ನಾಟಕಕ್ಕೆ ಅತ್ಯಂತ ಮಹತ್ವದ ದಿನ ಎಂದು ಅವರು ವಿವರಿಸಿದರು.

ಕನ್ನಡ ಚಲನಚಿತ್ರ ನಟಿ ಅದಿತಿ ಪ್ರಭುದೇವ್ ಮಾತನಾಡಿ, ‘ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಪ್ರಮುಖವಾದ ಪಾತ್ರ ವಹಿಸುತ್ತದೆ. ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ ಎಂದರು. ಜೀವನಶೈಲಿ, ಸಮಯ ಸಿಗದೆ ಇರುವ ಕಾರಣ ಪ್ರತಿನಿತ್ಯ ಯೋಗಾಭ್ಯಾಸ ಸಾಧ್ಯವಾಗದಿದ್ದರೂ, ವಾರಕ್ಕೆ ಎರಡು ಮೂರು ದಿನ ಯೋಗಾಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು.
ಯೋಗಾಭ್ಯಾಸದಿಂದ ಮನೆಗೆ ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಆಗಿ ಹೊರಹೊಮ್ಮಬಹುದು. ಯೋಗಕ್ಕೆ ಒಂದು ಧರ್ಮಕ್ಕೆ ಸೀಮಿತ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಆದರೆ, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News